ETV Bharat / state

ಕೆಸರು ರಸ್ತೆಯಲ್ಲಿ ಭತ್ತ ನಾಟಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಂಚೀಪುರ ನಿವಾಸಿಗಳ ಆಕ್ರೋಶ

author img

By

Published : Nov 16, 2021, 11:54 AM IST

ದಶಕಗಳು ಕಳೆದರೂ ಸೂಕ್ತ ರಸ್ತೆ ನಿರ್ಮಾಣ ಮಾಡಲು ಮುಂದಾಗದ ಸರ್ಕಾರ ಹಾಗೂ ಕಂಡು ಕಾಣದಂತೆ ಇರುವ ಅಧಿಕಾರಿಗಳ ವಿರುದ್ಧ, ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ರಾಮನಗರ ಜಿಲ್ಲೆಯ ಅಂಚೀಪುರ ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ramangar-anchipura-resident-plant-paddy-in-the-street-road
ಕೆಸರು ರಸ್ತೆಯಲ್ಲಿ ಭತ್ತ ನಾಟಿ

ರಾಮನಗರ: ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತಾಲೂಕಿನ ಬಿಡದಿ ಹೋಬಳಿಯ ಭೈರಮಂಗಲ ಗ್ರಾ.ಪಂ ವ್ಯಾಪ್ತಿಯ ಅಂಚೀಪುರ ಕಾಲೋನಿ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಬೈರಮಂಗಲ ಕೆರೆ ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರು ಈಗಿನ ಅಂಚೀಪುರ ಗ್ರಾಮ ಮತ್ತು ಕಾಲೋನಿಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ 120ಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಕುಟುಂಬಗಳು ನೆಲೆಸಿವೆ. ದಶಕಗಳೇ ಕಳೆದರೂ ಗ್ರಾಮದ ರಸ್ತೆಗಳು ಡಾಂಬರು ಕಂಡಿಲ್ಲ. ನಿರಂತರ ಒತ್ತಡ ಹಾಕಿದ್ದರಿಂದ ಕಾಲೋನಿಯಲ್ಲಿ ಕಾಂಕ್ರೀಟ್​​ ಚರಂಡಿ ನಿರ್ಮಾಣವಾಗಿದೆಯಷ್ಟೇ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮಣ್ಣು ಹಾಗೂ ಧೂಳಿನಿಂದ ಕೂಡಿದ ರಸ್ತೆ ಮಳೆ ಬಂದ್ರೆ ಸಾಕು ಕೆಸರು ಗದ್ದೆಯಂತಾಗುತ್ತದೆ. ವಾಹನ ಚಾಲನೆ ಇರಲಿ ನಡೆದಾಡಲು ಸಹ ದುಸ್ತರವಾಗುತ್ತದೆ. ಮಕ್ಕಳು, ವೃದ್ಧರು ಜಾರಿ ಬಿದ್ದಿರುವ ಉದಾಹರಣೆಗಳು ಇವೆ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಲೋನಿಯ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ನೈಜ ಸ್ಥಿತಿ ಅರ್ಥಮಾಡಿಕೊಳ್ಳಲಿ ಎಂದು ಇಲ್ಲಿನ ಜನರು ಸಿಡಿಮಿಡಿಗೊಂಡಿದ್ದಾರೆ.

ರಸ್ತೆಗೆ ಮಂಜೂರಾದ ಹಣ ಬೇರೆ ಕಡೆ ಬಳಕೆ: ಎಚ್.ಸಿ.ಬಾಲಕಷ್ಣ ಅವರು ಶಾಸಕರಾಗಿದ್ದಾಗ 50 ಲಕ್ಷ ರೂ. ಎಸ್‌ಸಿಪಿ/ಟಿಎಸ್‌ಪಿ ಅನುದಾನ ಮಂಜೂರಾಗಿತ್ತು. ಆದರೆ ಸ್ಥಳೀಯ ಗ್ರಾ.ಪಂ. ಸದಸ್ಯರು ನರೇಗಾ ಯೋಜನೆಯಡಿ ರಸ್ತೆ ಅಭಿವದ್ಧಿ ಕೈಗೊಳ್ಳುವುದಾಗಿ ಹೇಳಿದ್ದರು. ಮಂಜೂರಾದ ಹಣ ಬೇರೆ ಕಡೆ ಉಪಯೋಗವಾಯಿತು. ಆದರೆ ಈವರೆಗೆ ಯಾವ ಅನುದಾನದಿಂದಲೂ ಕಾಮಗಾರಿ ಆಗಿಲ್ಲ ಎಂದು ಅಂಚೀಪುರ ಕಾಲೋನಿ ನಿವಾಸಿ ಲಿಂಗರಾಜು ಆರೋಪಿಸಿದರು.

ಒಂದು ಕೋಟಿ ರೂ. ಅನುದಾದನ ಅಗತ್ಯ: ಅಂಚೀಪುರ ಕಾಲೋನಿಯಲ್ಲಿ ನರೇಗಾ ಯೋಜನೆಯಡಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಈ ಬಾರಿ ನರೇಗಾದಲ್ಲಿ ವ್ಯಯಕ್ತಿಕ ಕಾಮಗಾರಿಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಇಲ್ಲಿ ಎಲ್ಲಾ ರಸ್ತೆಗಳ ಅಭಿವದ್ಧಿಗೆ ಅಂದಾಜು ಒಂದು ಕೋಟಿ ರೂ. ಅನುದಾನದ ಅಗತ್ಯವಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.