ETV Bharat / state

ರಾಮನಗರ: ಪ್ರಸಿದ್ದ ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ಲಕ್ಷ ದೀಪೋತ್ಸವ

author img

By ETV Bharat Karnataka Team

Published : Dec 13, 2023, 8:01 PM IST

ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಹಾಗೂ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀ ಚಾಲನೆ ನೀಡಿದರು.

ಲಕ್ಷ ದೀಪೋತ್ಸವ
ಲಕ್ಷ ದೀಪೋತ್ಸವ

ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ಲಕ್ಷ ದೀಪೋತ್ಸವ

ರಾಮನಗರ : ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಕ್ಷೇತ್ರದ ಪವಾಡ ಬಸಪ್ಪನವರ ಮೂರನೇ ವರ್ಷದ ಹುಟ್ಟುಹಬ್ಬ ಹಾಗೂ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತಸಮೂಹ ಹರಿದುಬಂದಿತ್ತು.

ಈ ಮೂಲಕ ಸಾವಿರಾರು ಮಂದಿ ಭಕ್ತಾಧಿಗಳು ಅದ್ದೂರಿ ಲಕ್ಷ ದೀಪೋತ್ಸವ ಕಣ್ತುಂಬಿಕೊಂಡರು. ಲಕ್ಷ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಮುಂಜಾನೆಯಿಂದಲೇ ತಾಯಿಯ ಸನ್ನಿದ್ಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಚಾಮುಂಡೇಶ್ವರಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ತಾಯಿಯ ಮೆರವಣಿಗೆ, ಪವಾಡ ಬಸವಪ್ಪನ ಗದ್ದುಗೆಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಕ್ಷೇತ್ರದ ಪವಾಡ ಬಸವಪ್ಪನವರ ಹುಟ್ಟುಹಬ್ಬ ಆಚರಿಸಲಾಯಿತು. ಭಕ್ತಾಧಿಗಳು ಬಸವಪ್ಪನ‌ ಮುಂಭಾಗ 59 ಕೆ.ಜಿ ತೂಕದ ಕೇಕ್​ ಕತ್ತರಿಸಿ ಸಂಭ್ರಮಪಟ್ಟರು. ತದನಂತರ, ಬಸವಪ್ಪನಿಗೆ ಹೂವಿನ ಅಭಿಷೇಕ‌ ಮಾಡಿ ಶುಭಾಶಯ ಕೋರಿದರು.

ದೀಪೋತ್ಸವ ಕಾರ್ಯಕ್ರಮಕ್ಕೆ ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಹಾಗೂ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀ ಚಾಲನೆ ನೀಡಿದರು. ಸಾವಿರಾರು ಭಕ್ತಾಧಿಗಳು ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು. ದೇಗುಲ ಆವರಣದಲ್ಲಿ ಇಟ್ಟಿದ್ದ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಹಚ್ಚುವ ಮೂಲಕ ಭಕ್ತಾಧಿಗಳು ತಾಯಿಯ ಕೃಪೆಗೆ ಪಾತ್ರರಾದರು.

ಹರಿದು ಬಂದ ಭಕ್ತಸಾಗರ : ಕ್ಷೇತ್ರದಲ್ಲಿ ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯ ಲಕ್ಷ ದೀಪೋತ್ಸವಕ್ಕೆ ಭಕ್ತಸಾಗರ ಕ್ಷೇತ್ರದತ್ತ ಹರಿದು ಬಂದಿದ್ದು ವಿಶೇಷವಾಗಿತ್ತು. ತಾಲೂಕು, ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ನಾನಾ ಭಾಗಗಳ ಭಕ್ತಾಧಿಗಳು ದೀಪೋತ್ಸವ ಕಣ್ತುಂಬಿಕೊಂಡರು. ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಹಿರಿ ಹಾಗೂ ಕಿರುತೆರೆ ಕಲಾವಿದರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ರಾಜಕೀಯ ಧುರೀಣರು ದೀಪೋತ್ಸವಕ್ಕೆ ಸಾಕ್ಷಿಯಾದರು.

ಜಗಮಗಿಸಿದ ಶ್ರೀ ಕ್ಷೇತ್ರ : ದೀಪೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ನೇತೃತ್ವದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಮುಂಜಾನೆಯಿಂದ ರಾತ್ರಿವರೆಗೂ ನಿರಂತರ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ದೀಪೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ವಿದ್ಯುತ್ ದೀಪಗಳಿಂದ ಜಗಮಗಿಸಿತ್ತು. ದೀಪೋತ್ಸವ ಆರಂಭಗೊಳ್ಳುತ್ತಿದಂತೆ, ತಾಯಿಯ ಪಂಚಲೋಹ ವಿಗ್ರಹದ ಹಿಂಭಾಗದಲ್ಲಿ ಸಿಡಿದ ಬಾಣ ಬಿರುಸುಗಳು ಕಾರ್ಯಕ್ರಮದ ಕಳೆ ಹೆಚ್ಚಿಸಿದವು. ಎಂ.ಕೆ ದೊಡ್ಡಿ ಪೊಲೀಸರಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನೂ ಓದಿ : ಸಿದ್ದಾರೂಢ ಮಠದಲ್ಲಿ ಅದ್ಧೂರಿಯಾಗಿ ನೆರವೇರಿದ ಲಕ್ಷದೀಪೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.