ETV Bharat / state

ದೇಶಕ್ಕೆ ಐಸಿಎಂಆರ್‌–ಎನ್‌ಐಟಿಎಂ ಸೇವೆ ಶ್ಲಾಘನೀಯ: ಉಪರಾಷ್ಟ್ರಪತಿ ಜಗದೀಪ್‌ ಧನಕರ - Vice President Jagdeep Dhankar

author img

By ETV Bharat Karnataka Team

Published : May 27, 2024, 4:15 PM IST

ಬೆಳಗಾವಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌–ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರೇಡಿಷನಲ್‌ ಮೆಡಿಸಿನ್‌ನಲ್ಲಿ ನಡೆದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ ಭಾಗವಹಿಸಿದ್ದರು.

ICMR-NITM program was participeted by Vice President Jagdeep Dhankar.
ಐಸಿಎಂಆರ್‌–ಎನ್‌ಐಟಿಎಂ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ ಭಾಗವಹಿಸಿದ್ದರು. (ETV Bharat)

ಬೆಳಗಾವಿ: ಜಗತ್ತಿನ ಆರು ಭಾಗದಲ್ಲಿ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿದ ಭಾರತ ಇಂದು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಈ ದೇಶದ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌–ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರೇಡಿಷನಲ್‌ ಮೆಡಿಸಿನ್‌(ಐಸಿಎಂಆರ್‌–ಎನ್‌ಐಟಿಎಂ)ನಲ್ಲಿ ಸೋಮವಾರ ನಡೆದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶ ಮತ್ತು ಸಮಾಜಕ್ಕಾಗಿ ಸಮರ್ಪಿತ ಸೇವೆ ಸಲ್ಲಿಸಿದ ಐಸಿಎಂಆರ್‌–ಎನ್‌ಐಟಿಎಂ ಶ್ಲಾಘನೀಯ. ಕೋವಿಡ್‌–19 ನಿರ್ವಹಣೆಯಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ತಪಾಸಣೆ, ಲಸಿಕೆ ಅಭಿವೃದ್ಧಿ ಮೂಲಕ ದೇಶಕ್ಕೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿ ಸೇವೆ ಸಲ್ಲಿಸುವವರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಪಾರಂಪರಿಕ ಔಷಧಿ: ಕೀಲುನೋವು, ಮಧುಮೇಹ ಮತ್ತು ಅತಿಸಾರ ಕಾಯಿಲೆಗಳು ವೈದ್ಯಲೋಕಕ್ಕೆ ಸವಾಲಾಗಿವೆ. ಕೀಲು ನೋವಿನ ಸಮಸ್ಯೆಗೆ ನಾವು ಪಾರಂಪರಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಮಧುಮೇಹಕ್ಕೆ ಸಾವಯವ ಪದ್ಧತಿಯಲ್ಲೇ ಪರಿಹಾರ ಹುಡುಕುತ್ತಿದ್ದೇವೆ. ರಾಸಾಯನಿಕಗಳನ್ನು ಬಳಕೆ ಮಾಡದೇ, ಪಾರಂಪರಿಕ ಔಷಧಗಳಿಂದಲೇ ಈ ಕಾಯಿಲೆಗಳನ್ನು ಗುಣಪಡಿಸಬಹುದು. ಇನ್ನು ಅತಿಸಾರ ಕಾಯಿಲೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ದುರ್ಬಲ ವರ್ಗದವರಿಗೆ ಚಿಕಿತ್ಸೆ ಲಭಿಸಿದರೆ, ಅದು ಬದಲಾವಣೆಗೆ ನಾಂದಿ ಹಾಡುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ ಅಭಿಪ್ರಾಯ ಪಟ್ಟರು.

ಬಯೋಮೆಡಿಕಲ್ ಸಂಶೋಧನೆ:ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿಯೂ ಆಗಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಮಹಾನಿರ್ದೇಶಕ ಡಾ.ರಾಜೀವ್‌ ಬಹ್ಲ್ ಮಾತನಾಡಿ, ಭಾರತದಲ್ಲಿ ಬಯೋಮೆಡಿಕಲ್ ಸಂಶೋಧನೆಯಲ್ಲಿ ಐಸಿಎಂಆರ್‌ ಸದಾ ಮುಂಚೂಣಿಯಲ್ಲಿದೆ. ಕೊರೊನಾ ಸಂಕಷ್ಟ ವೇಳೆ ಲಸಿಕೆ ಅಭಿವೃದ್ಧಿ, ಸೋಂಕು ನಿರ್ಣಯ ಮತ್ತು ಸೋಂಕಿನ ಮೇಲೆ ನಿಗಾ ವಹಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಿ, ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಬರುವ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ, ದೇಶವನ್ನು ವಿಕಸಿತ ಭಾರತದತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಂಸ್ಥೆಯ ಆವರಣದಲ್ಲಿ ಉಪರಾಷ್ಟ್ರಪತಿಗಳು ಸಸಿ ನೆಟ್ಟರು. ಬಳಿಕ ಸಂಸ್ಥೆಯ ಸಂಶೋಧನಾ‌ ಚಟುವಟಿಕೆಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್, ಉಪರಾಷ್ಟ್ರಪತಿಗಳ ಪತ್ನಿ ಸುದೇಶ್ ಧನಕರ, ಐಸಿಎಂಆರ್‌–ಎನ್‌ಐಟಿಎಂ ನಿರ್ದೇಶಕ ಡಾ. ಸುಬರ್ನಾ ರಾಯ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ ₹80 ಲಕ್ಷವನ್ನು ರಾಜ್ಯ ಸರ್ಕಾರವೇ ಭರಿಸಲಿದೆ: ಸಚಿವ ಈಶ್ವರ ಖಂಡ್ರೆ - Eshwar Khandre

ETV Bharat Logo

Copyright © 2024 Ushodaya Enterprises Pvt. Ltd., All Rights Reserved.