ETV Bharat / state

ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ: ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ

author img

By

Published : Jun 3, 2023, 10:07 PM IST

dk-shivakumar-congratulated-the-people-of-the-constituency
ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ: ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಂದು ರಾಮನಗರ ಜಿಲ್ಲೆ ಕನಕಪುರ ಮತ್ತು ಸಾತನೂರಿನಲ್ಲಿ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ: ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ

ರಾಮನಗರ: ನಾನು ಇಲ್ಲಿಗೆ ಅಭಿನಂದನೆ ಮಾಡಿಸಿಕೊಳ್ಳುವುದಕ್ಕಿಂತ, ನಿಮಗೆ ಅಭಿನಂದನೆ ತಿಳಿಸಲು ಬಂದಿದ್ದೇನೆ. ನೀವು ಶಕ್ತಿ ತುಂಬಿದ್ದಕ್ಕೆ ಉಪಕಾರ ಸ್ಮರಿಸಿ ನಿಮ್ಮ ಸೇವೆಗೆ ಸಿದ್ಧ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.

ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಕಬ್ಬಾಳು, ಸಾತನೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ 1,23,000 ಮತಗಳ ಅಂತರದ ದಾಖಲೆಯ ಗೆಲುವನ್ನು ನೀವು ನನಗೆ ಕೊಟ್ಟಿದ್ದೀರಿ. ನನ್ನ ಕಟ್ಟಿಹಾಕಲು ಬಿಜೆಪಿಯವರು ಚಕ್ರವರ್ತಿ ಅಶೋಕ್ ಅವರನ್ನು ನನ್ನ ವಿರುದ್ಧ ನಿಲ್ಲಿಸಿದ್ದರು. ನಾನು ನಾಮಪತ್ರ ಸಲ್ಲಿಸಿ, ನಂತರ ಕೊನೆ ದಿನ ಅರ್ಧಗಂಟೆ ಮಾತ್ರ ಪ್ರಚಾರ ಮಾಡಿದೆ. ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ. ಕ್ಷೇತ್ರದಲ್ಲಿ ಕೆರೆ ತುಂಬಿಸುವುದು, ರಸ್ತೆ ಅಗಲೀಕರಣ, ಪ್ರತಿ ಊರಿಗೆ ಕಾವೇರಿ ನೀರು ತಂದಿದ್ದೇನೆ. ನಿವೇಶನ, ಮನೆಗಳ ನಿರ್ಮಾಣದ ಕೆಲಸ ಮಾಡಿದ್ದೇವೆ.

ನಿಮ್ಮ ತೀರ್ಪಿಗೆ ಇಡೀ ರಾಜ್ಯದ ಜನ ಸಂತೋಷ ಪಟ್ಟಿದ್ದಾರೆ. ಪಕ್ಷಬೇಧ ಮರೆತು ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಇಲ್ಲಿನ ಕಬ್ಬಾಳಮ್ಮ ದೇವಾಲಯ ಹೇಗಿತ್ತು, ಈಗ ಹೇಗೆ ಅಭಿವೃದ್ಧಿಯಾಗಿದೆ. ಇಲ್ಲಿ ಅಡುಗೆ ಮಾಡುವವರು, ಹೂ ಮಾರುವವರು, ಪಾರ್ಟಿ ಹಾಲ್ ನಿರ್ಮಾಣ ಮಾಡಿರುವವರು ಸೇರಿದಂತೆ ಇದರಿಂದ ಎಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ ಎಂದು ನೀವು ಆವಲೋಕನ ಮಾಡಿ ಎಂದರು.

ಈ ಭಾಗದ ಆಸ್ತಿ ಲಕ್ಷಗಳಿಂದ ಕೋಟಿಗೆ ಏರಿಕೆಯಾಗುವಂತೆ ಮಾಡಿದ್ದೇವೆ. ಈ ಭಾಗದ ಅಭಿವೃದ್ಧಿಯಲ್ಲಿ ನಾನಾಗಲಿ, ಸಹೋದರ ಸುರೇಶ್ ಆಗಲಿ ಲಂಚ ತಿಂದಿಲ್ಲ. ನಾನು ಚುನಾವಣೆಗೂ ಮುನ್ನ ಕೊಟ್ಟ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಗೃಹ ಜ್ಯೋತಿ ಯೋಜನೆ ಮೂಲಕ ಜುಲೈ 1 ರಿಂದ ನೀವು ಇದುವರೆಗೂ ಬಳಸುತ್ತಿದ್ದಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಕನಕಪುರ ಕ್ಷೇತ್ರದ ಶೇ.98ರಷ್ಟು ಮಂದಿ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದು ಹೇಳಿದರು.

ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ
ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ

ಮಹಿಳೆಯರಿಗೆ ಬೆಲೆ ಏರಿಕೆಯ ಹೊರೆ ಇಳಿಸಲು ಗೃಹ ಲಕ್ಷ್ಮಿ ಯೋಜನೆ ಮೂಲಕ ಆಗಸ್ಟ್ 15 ರಿಂದ ಮನೆಯೊಡತಿಗೆ 2 ಸಾವಿರ ಹಣ ನೀಡಲಾಗುವುದು. ಮನೆಯೊಡತಿ ಯಾರು ಎಂದು ನೀವು ತೀರ್ಮಾನಿಸಿ. ಜೂನ್ 15 ರಿಂದ ಜುಲೈ 15ರವರೆಗೆ ನೀವು ದಾಖಲೆ ಸಮೇತ ಅರ್ಜಿ ಹಾಕಿ. ಈ ಅರ್ಜಿ ಹಾಕುವಾಗ ನೀವು ಯಾರಿಗೂ ಹಣ ನೀಡಬೇಡಿ. ಈ ಯೋಜನೆ ಜಾರಿಗೆ ತರುವಾಗ ಯಾರಾದರೂ ಲಂಚ ಕೇಳಿದರೆ, ನನಗೆ ವಿಧಾನಸೌಧದ ನನ್ನ ವಿಳಾಸಕ್ಕೆ ಒಂದು ಪತ್ರ ಬರೆಯಿರಿ. ನಾನು ಅವರನ್ನು ಒಳಗೆ ಹಾಕಿಸುತ್ತೇನೆ ಎಂದು ಅಭಯ ನೀಡಿದರು.

ಜುಲೈ1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗುವುದು. ಜೂನ್ 11 ರಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾಮಾನ್ಯ ಬಸ್​ಗಳಲ್ಲಿ ರಾಜ್ಯದೊಳಗೆ ಪ್ರಯಾಣ ಉಚಿತವಾಗಲಿದೆ. ಇಂತಹ ಯೋಜನೆ ಅಶೋಕಣ್ಣ, ಬೊಮ್ಮಾಯಿ, ಕುಮಾರಸ್ವಾಮಿ ಕೊಟ್ಟಿದ್ದರಾ? ಅವರದ್ದು ಕೇವಲ ಖಾಲಿ ಮಾತು. ಬಿಜೆಪಿ ಅವರು ತಮ್ಮ ಸೋಲಿನ ಬಗ್ಗೆ ಚರ್ಚೆ ಮಾಡುವುದಕ್ಕಿಂತ ನಮ್ಮ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದವರು ಯಾಕೆ ಹಾಕಿಲ್ಲ ಎಂದು ನೀವು ಅಶೋಕ್ ಹಾಗೂ ಬಿಜೆಪಿ ಅವರನ್ನು ಕೇಳಬೇಕು. ಸಾಲಮನ್ನಾ, ಆದಾಯ ಡಬಲ್ ಮಾಡುತ್ತೇವೆ, ಬೆಲೆ ಇಳಿಸುತ್ತೇವೆ ಎಂದಿದ್ದರು. ಯಾವುದನ್ನು ಮಾಡಲಿಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ : ಷರತ್ತು ಮತ್ತು ನಿಬಂಧನೆಗಳು ಹೀಗಿವೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.