ETV Bharat / state

ಚುನಾವಣೆಯಲ್ಲಿ ನನ್ನ ತಾಯಿಯಂತಿರುವ ಕಾಂಗ್ರೆಸ್ ಬೆಂಬಲಿಸುತ್ತೇನೆ: ಹೆಚ್.ವಿಶ್ವನಾಥ್

author img

By

Published : Apr 3, 2023, 2:26 PM IST

MLC H Vishwanath
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್

ಬಿಜೆಪಿಯಂತಹ ಭ್ರಷ್ಟ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ- ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ .

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್

ಮೈಸೂರು: "ನಾನು ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಕೋಟಾದಡಿಯಲ್ಲಿ ವಿಧಾನ ಪರಿಷತ್ ಸದಸ್ಯನೇ ಹೊರತು ಪಕ್ಷದ ಬಲದಿಂದ ಅಲ್ಲ. ನನ್ನನ್ನು ರಾಜ್ಯಪಾಲರು ನಾಮಕರಣ ಮಾಡಿದ್ದಾರೆ. ಆದ್ದರಿಂದ ಯಾವುದೇ ಪಕ್ಷದ ಸಿದ್ದಾಂತಕ್ಕೆ ಸೇರಿದವನಲ್ಲ. ಆದ್ದರಿಂದ ಈ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ತಾಯಿಯಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ" ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಮೈಸೂರಿನ ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಾಂಕೇತಿಕವಾಗಿ ಪ್ರಾಯಶ್ಚಿತ್ತ ಸತ್ಯಾಗ್ರಹ ಪ್ರತಿಭಟನೆ ನಡೆಸಿ ಮಾತನಾಡಿದ ವಿಶ್ವನಾಥ್, "ನಾನು ಯಾವಾಗಲೂ ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಪಕ್ಷವಾಗಿದ್ದರೂ ತಪ್ಪು ಮಾಡಿದಾಗ ಯಾವುದೇ ಮುಲಾಜಿಲ್ಲದೇ ನನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿದ್ದೇನೆ. ಕಾಂಗ್ರೆಸ್ ಹಾಗೂ ದಳ ಮೈತ್ರಿಯಿಂದ ರಾಕ್ಷಸಿ ಸರ್ಕಾರಿ ನಡೆಯುತ್ತದೆ ಎಂದು ಮನವರಿಕೆಯಾದಾಗ ಆ ಸರ್ಕಾರದ ವಿರುದ್ಧ ರಾಜಿನಾಮೆ ನೀಡಿ ಹೊಸ ಡಬಲ್ ಇಂಜಿನ್ ಸರ್ಕಾರ ರಚನೆ ಮಾಡಿದೆವು.

ಈ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ದೊಡ್ಡಮಟ್ಟದಲ್ಲಿ ಆಗುತ್ತದೆ ಎಂದು ಕನಸು ಕಂಡಿದ್ದೆವು. ಆದರೆ ಇದು ಐತಿಹಾಸಿಕ ಪರಮ‌ ಭ್ರಷ್ಟ ಸರ್ಕಾರ. ಇಂತಹ ಸರ್ಕಾರದ ಅಸ್ತಿತ್ವಕ್ಕೆ ಬರಲು ಕಾರಣವಾದ ನನಗೆ ಪಶ್ಚಾತಾಪ ಕಾಡುತ್ತಿದ್ದು. ಇದನ್ನು ಕಡಿಮೆ ಮಾಡಿಕೊಳ್ಳಲು ಪಶ್ಚಾತ್ತಾಪ ಸತ್ಯಾಗ್ರಹ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರಗಳನ್ನು ಕುಲಗೆಡಿಸಿದೆ" ಎಂದು ವಿಶ್ವನಾಥ್ ದೂರಿದರು.

ಪಾಪ ಪ್ರಜ್ಞೆ ಕಾಡುತ್ತಿದೆ: "ನಾನು ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣನಾಗಿದ್ದು, ಈ ಸರ್ಕಾರದ ರಚನೆಯ ಬಗ್ಗೆ ನನ್ನಲ್ಲಿ ಪಾಪ ಪ್ರಜ್ಞೆ ಕಾಡುತ್ತಿದೆ. ಇದನ್ನು ಕಡಿಮೆ ಮಾಡಲು ಪಶ್ಚಾತ್ತಾಪ ಸತ್ಯಾಗ್ರಹ ನಡೆಸುತ್ತಿದ್ದೇನೆ. ನನ್ನನ್ನು ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಸದಸ್ಯ ಎಂದು ಹೇಳುತ್ತಿದ್ದಾರೆ. ಆದರೆ ನಾನು ವಿಧಾನ ಪರಿಷತ್​ಗೆ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕೋಟಾದಿಂದ ರಾಜ್ಯಪಾಲರು ನಾಮಕರಣ ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಸದಸ್ಯನಲ್ಲ. ಯಾವುದೇ ಪಕ್ಷದ ಸಿದ್ದಾಂತಕ್ಕೆ ಸೇರಿದವನಲ್ಲ. ನಾನು ಸ್ವತಂತ್ರ ಸದಸ್ಯ. ನಾನು ಸ್ವಚ್ಚಂದವಾಗಿ ಹಾರಾಟ ನಡೆಸುವ 'ಹಳ್ಳಿ ಹಕ್ಕಿ'. ಆದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ. ನನ್ನಂತೆ ನನ್ನ ಬೆಂಬಲಿಗರು ಬೆಂಬಲಿಸುವಂತೆ ಮನವಿ ಮಾಡುತ್ತೇನೆ" ಎಂದರು.

ರಾಹುಲ್ ಅನರ್ಹತೆ ರಾಜಕೀಯ ಕುತಂತ್ರ: ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ತರಾತುರಿಯಲ್ಲಿ ಅನರ್ಹ ಮಾಡಿರುವುದು ರಾಜಕೀಯ ಕುತಂತ್ರ ಹಾಗೂ ಆಳುವ ಪಕ್ಷದ ಇಬ್ಬಂದಿ ನೀತಿ ಎಂದು ಬಿಜೆಪಿಯಿಂದ ನೇಮಕಗೊಂಡ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾ.25ರಂದು ಮೈಸೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಖ್ಯವಾಗಿ ಮಾನಹಾನಿ ಪ್ರಕರಣದಲ್ಲಿ ಅವರ ಸಂಸತ್ ಸ್ಥಾನವನ್ನು ತರಾತುರಿಯಲ್ಲಿ ಅನರ್ಹ ಮಾಡಿರುವುದು ರಾಜಕೀಯ ಕುತಂತ್ರ ಹಾಗೂ ಆಳುವ ಪಕ್ಷದ ಇಬ್ಬಂದಿ ನೀತಿಯನ್ನು ಎತ್ತಿ ತೋರಿಸುತ್ತದೆ. ಈಗ ದೇಶ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದು, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆ ರಾಜಕೀಯ ಕುತಂತ್ರ : ಹೆಚ್ ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.