ETV Bharat / state

ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ

author img

By

Published : Apr 19, 2023, 1:19 PM IST

Updated : Apr 19, 2023, 2:07 PM IST

ಚಾಮುಂಡಿ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ
ಚಾಮುಂಡಿ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ

ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಚಾಮುಂಡಿ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ

ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಇಂದು ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಮನೆ ದೇವರು ಹಾಗೂ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರ ಜೊತೆಗೆ ಮಗ ಯತೀಂದ್ರ ಸಿದ್ದರಾಮಯ್ಯ, ಮೊಮ್ಮಗ ಧವನ್ ರಾಕೇಶ್ ಕೂಡ ಇದ್ದರು.

ಸಿದ್ದರಾಮಯ್ಯ ಇಂದು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ನಿನ್ನೆಯೇ ಮೈಸೂರಿಗೆ ಆಗಮಿಸಿರುವ ಸಿದ್ದರಾಮಯ್ಯ, ನಿನ್ನೆ ಸಂಜೆ ಕ್ಷೇತ್ರದ ಪ್ರಮುಖರ ಸಭೆ ನಡೆಸಿ, ಎಲ್ಲರೂ ಇಂದು ನಾಮಪತ್ರ ಸಲ್ಲಿಸಲು ಆಗಮಿಸಬೇಕೆಂದು ತಿಳಿಸಿ ನಂತರ ತಮ್ಮ ತಮ್ಮ ಗ್ರಾಮಗಳಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದ್ದರು. ಇಂದು ಬೆಳಗ್ಗೆ ಹುಟ್ಟೂರು ಸಿದ್ದರಾಮನಹುಂಡಿಗೆ ಆಗಮಿಸಿ, ಅಲ್ಲಿ ಮನೆ ದೇವರಾದ ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಗ್ರಾಮದಲ್ಲಿ ಇರುವ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಮನಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮನಹುಂಡಿಯ ಗ್ರಾಮಸ್ಥರು ಸಿದ್ದರಾಮಯ್ಯರಿಗೆ ಅದ್ದೂರಿ ಸ್ವಾಗತ ಕೋರಿದರು. ಮಗ ಯತೀಂದ್ರ ಸಿದ್ದರಾಮಯ್ಯ, ಮೊಮ್ಮಗ ಧವನ್ ರಾಕೇಶ್ ಹಾಜರಿದ್ದರು.

ನಾಡ ದೇವಿಗೆ ಪೂಜೆ : ಸಿದ್ದರಾಮನಹುಂಡಿಯಿಂದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಿದ್ದರಾಮಯ್ಯ, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ನಂತರ ಚಾಮುಂಡಿ ಬೆಟ್ಟದ ದೇವಾಲಯದ ಹೊರಭಾಗದಲ್ಲಿ ಅಭಿಮಾನಿಗಳು ತಂದಿದ್ದ ವಿಶೇಷ ಸೇಬಿನ ಹಾರವನ್ನು ಸಿದ್ದರಾಮಯ್ಯನವರಿಗೆ ಹಾಕಲಾಯಿತು. ಬಳಿಕ ಸಿದ್ದರಾಮಯ್ಯ ಉತ್ತನಹಳ್ಳಿ ದೇವಾಲಯಕ್ಕೆ ಆಗಮಿಸಿ ತ್ರಿಪುರ ಸುಂದರಿ ದೇವಿಗೆ ಪೂಜೆ ಸಲ್ಲಿಸಿ, ನಂಜನಗೂಡಿನ ಸಾರ್ವಜನಿಕ ಸಭೆಗೆ ತೆರಳಿದರು. ಅಲ್ಲಿಂದ 2 ಗಂಟೆಗೆ ತಾಲ್ಲೂಕು ಪಂಚಾಯತ್ ಕಚೇರಿಗೆ ಆಗಮಿಸಿ, ವರುಣಾ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ಪತ್ನಿಯಿಂದ ಚಾಮುಂಡಿ ತಾಯಿಗೆ ಪೂಜೆ : ನಿನ್ನೆ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಸೊಸೆ ಹಾಗೂ ಮೊಮ್ಮಗನ ಜೊತೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಸಿದ್ದರಾಮಯ್ಯರ ನಾಮಪತ್ರದ ಸೆಟ್​ಗಳನ್ನು ಇಟ್ಟು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್, ಮೋದಿ, ಯೋಗಿ ಸೇರಿ 40 ಮಂದಿಗೆ ಅವಕಾಶ: ಪಟ್ಟಿಯಲ್ಲಿಲ್ಲ ಕಿಚ್ಚ ಸುದೀಪ್ ಹೆಸರು

Last Updated :Apr 19, 2023, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.