ETV Bharat / state

ಮೈಸೂರು ದಸರಾ: 7 ದಿನಗಳ ಕಾಲ ಕುಸ್ತಿ ಪಂದ್ಯ ಆಯೋಜನೆ

author img

By ETV Bharat Karnataka Team

Published : Oct 11, 2023, 5:43 PM IST

ಮೈಸೂರು ದಸರಾ ಕುಸ್ತಿ ಪಂದ್ಯಗಳು
ಮೈಸೂರು ದಸರಾ ಕುಸ್ತಿ ಪಂದ್ಯಗಳು

ಮೈಸೂರು ದಸರಾದಲ್ಲಿ ಜನರು ಹೆಚ್ಚು ಆಸ್ತಕಿ ವಹಿಸಿ ನೋಡುವ ಕುಸ್ತಿ ಪಂದ್ಯಾವಳಿಗಳು ಏಳು ದಿನ ನಡೆಯಲಿವೆ.

ಮೈಸೂರು : ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪರಂಪರಾಗತವಾಗಿ ಪ್ರಮುಖ ಆಕರ್ಷಣೆಯಾಗಿ ನಡೆದುಕೊಂಡು ಬಂದಿರುವ ದಸರಾ ಕುಸ್ತಿ ಈ ಬಾರಿ ಅಕ್ಟೋಬರ್ 15 ರಿಂದ ಅಕ್ಟೋಬರ್ 21ರವರೆಗೆ ನಡೆಯಲಿದೆ ಎಂದು ದಸರಾ ಕುಸ್ತಿ ಉಪಸಮಿತಿಯ ವಿಶೇಷಾಧಿಕಾರಿ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ನಂದಿನಿ ಮಾಹಿತಿ ನೀಡಿದರು.

ಬುಧವಾರ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ವಸ್ತು ಪ್ರದರ್ಶನ ಆವರಣದ ಪಕ್ಕದಲ್ಲಿರುವ ಕಾಳಿಂಗರಾವ್ ಕುಸ್ತಿ ಅಖಾಡದಲ್ಲಿ ದಸರಾ ಕುಸ್ತಿಗೆ ಜೋಡಿ ಕಟ್ಟುವ ಕೆಲಸ ಮಾಡಲಾಗಿದೆ. ನಾಡ ಕುಸ್ತಿ, ಪಾಯಿಂಟ್ ಕುಸ್ತಿ ಹಾಗೂ ಪಂಜ ಕುಸ್ತಿಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ 30 ಕ್ಕೂ ಹೆಚ್ಚು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದು ತಿಳಿಸಿದರು.

ಇದನ್ನೂ ಓದಿ : 'ಮೈಸೂರು ದಸರಾ ಎಂದರೆ ಕುಸ್ತಿ, ಕುಸ್ತಿ ಎಂದರೆ ದಸರಾ': ಕುತೂಹಲದ ಮಾಹಿತಿ

ಕುಸ್ತಿ ಜೋಡಿ ಕಟ್ಟುವ ಸಂದರ್ಭದಲ್ಲಿ 220 ಜೋಡಿಗಳನ್ನು ಗುರುತಿಸಲಾಗಿದ್ದು, ಪ್ರತಿಯೊಂದು ಪಂದ್ಯಗಳು ಕಾಳಿಂಗರಾವ್ ಕುಸ್ತಿ ಅಖಾಡದಲ್ಲಿ ನಡೆಯಲಿವೆ. ಕುಸ್ತಿ ಪಂದ್ಯಾವಳಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸ್ಥಳೀಯ ಕುಸ್ತಿಪಟುಗಳಿಗೆ ಪ್ರೇರಣೆ ಹಾಗು ಸ್ಪೂರ್ತಿ ನೀಡುವುದಕ್ಕಾಗಿ ಹೊರ ರಾಜ್ಯಗಳಿಂದ ಮೂರು ಕುಸ್ತಿ ಪಟುಗಳನ್ನು ಕರೆಯಲಾಗಿದೆ ಎಂದು ವಿವರಿಸಿದರು.

ವಿಶೇಷ ಪ್ರಶಸ್ತಿಗಳು: ಪಾಯಿಂಟ್​ ಕುಸ್ತಿಯಲ್ಲಿ ಗೆಲ್ಲುವ ಕುಸ್ತಿಪಟುಗಳಿಗೆ ದಸರಾ ಕಿಶೋರ, ದಸರಾ ಕೇಸರಿ, ದಸರಾ ಕಂಠೀರವ ಹಾಗೂ ದಸರಾ ಕಿಶೋರಿ ಎಂಬ ನಾಲ್ಕು ವಿಶೇಷ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ಮೈಸೂರು ಸೇರಿದಂತೆ ಈ ವಿಭಾಗದ ಎಂಟು ಜಿಲ್ಲೆಗಳಿಗೆ ಅನ್ವಯವಾಗುವಂತೆ ಮೈಸೂರು ವಿಭಾಗ ಮಟ್ಟ ದಸರಾ ಕುಮಾರ ಪ್ರಶಸ್ತಿ ನೀಡಲಾಗುವುದು. ನಾಡ ಕುಸ್ತಿ ವಿಭಾಗದಲ್ಲಿ ಮೇಯರ್ ಕಪ್, ಸಾಹುಕಾರ್ ಚನ್ನಯ್ಯ ಕಪ್, ಮೈಸೂರು ಒಡೆಯರ್ ಕಪ್ ನೀಡಲಾಗುವುದು. ಎಲ್ಲಾ ಕುಸ್ತಿ ಪಟುಗಳಿಗೂ ಗೌರವ ಸಂಭಾವನೆಯನ್ನೂ ನೀಡಲಾಗುವುದು.

ಪಂಜ ಕುಸ್ತಿ ಅ.18 ರಂದು ಕೇವಲ ಒಂದು ದಿನ ನಡೆಯಲಿದ್ದು, ಮಹಿಳೆಯರ ವಿಭಾಗ, ಪುರಷರ ವಿಭಾಗ ಹಾಗು ವಿಶೇಷ ಚೇತನರ ವಿಭಾಗ ಈ ರೀತಿ ನಡೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಮೂರು ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರಿಗೆ ಟ್ರೋಫಿಗಳು ಮತ್ತು ಇನ್ನುಳಿದಂತೆ ಪ್ರಥಮ, ದ್ವಿತೀಯ, ತೃತೀಯ ಎಂದು ಪದಕದ ಜೊತೆ ಪ್ರಮಾಣಪತ್ರ ನೀಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹೇಳಿದರು.

ಇದನ್ನೂ ಓದಿ : ಮೈಸೂರು ದಸರಾ: 10 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು- ಸಂಪೂರ್ಣ ವಿವರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.