ETV Bharat / state

ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಿ: ಡಾ. ಹೆಚ್ ಸಿ ಮಹದೇವಪ್ಪ

author img

By ETV Bharat Karnataka Team

Published : Dec 29, 2023, 7:46 AM IST

ನಮ್ಮ ಮೂಲಭೂತ ಕಸುಬು ವ್ಯವಸಾಯ. ಪ್ರತಿಯೊಬ್ಬರು ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್ .ಸಿ ಮಹದೇವಪ್ಪ ಮನವಿ ಮಾಡಿದರು.

HC Mahadevappa
ಮೈಸೂರು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ

ಮೈಸೂರು:‌ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳನ್ನು ಬೆಳೆಸಿ ಮತ್ತು ಬಳಸಿ. ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಶ್ರೀಮಂತರ ಆಹಾರದ ಪ್ರಮುಖ ಭಾಗವಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದರು.

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪಿ ಕಾಳಿಂಗರಾವ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಚೌಧರಿ ಚರಣ್ ಸಿಂಗ್ ಜನ್ಮದಿನದ ಸ್ಮರಣಾರ್ಥ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಹಳ್ಳಿಗಾಡಿನ ದೇಶ. ನಮ್ಮ ಮೂಲಭೂತ ಕಸುಬು ವ್ಯವಸಾಯ. ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಹಳ್ಳಿಗಳು ಉದ್ಧಾರ ಆಗದ ಹೊರತು ದೇಶ ಉದ್ಧಾರವಾಗುವುದಿಲ್ಲ ಎಂಬ ಮಹಾತ್ಮ ಗಾಂಧೀಜಿಯವರ ಮಾತು ಹಾಗೂ ರೈತನಿಗೆ ಜಮೀನಿರುವುದು ಆತನಿಗೆ ಸಾಮಾಜಿಕ ಘನತೆ ತಂದುಕೊಡುತ್ತದೆ ಎಂಬ ಅಂಬೇಡ್ಕರ್ ಅವರ ಅಭಿಪ್ರಾಯ ಬಹಳ ಅರ್ಥಗರ್ಭಿತವಾಗಿದೆ. ಭಾರತದಲ್ಲಿ ಚೌಧರಿ ಸಿಂಗ್ ಅವರ ನೇತೃತ್ವದಲ್ಲಿ ರೈತ ಚಳುವಳಿ ಪರಿಣಾಮಕಾರಿಯಾಗಿತ್ತು. ಅವರ ಸ್ಮರಣಾರ್ಥ ಈ ದಿನ ರೈತ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.

HC Mahadevappa
ಮೈಸೂರು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ

ಪ್ರತಿಯೊಂದು ರೈತ ಕುಟುಂಬವು ಸ್ವಾವಲಂಬಿಯಾಗಿ ಉಳಿಯದ ಹೊರತು ಕೃಷಿ ಯಶಸ್ಸಿಗೆ ಮನ್ನಣೆಯಿಲ್ಲ. ಸಾಲ ಬಡತನದ ನಿಕೃಷ್ಟ ಮೂಲವಾಗಿದೆ. ವೈಜ್ಞಾನಿಕ ಮಾರ್ಗ ಹಾಗೂ ಹೊಸ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಕೃಷಿ ಸಂಬಂಧಿತ ಸಮಸ್ಯೆಗಳಿಂದ ಹೊರಬರಬೇಕು. ಕೃಷಿ ಹಾಗೂ ಕೈಗಾರಿಕೆಗಳೆರಡು ಸಮನಾಂತರವಾಗಿ ಬೆಳವಣಿಗೆಯಾಗಬೇಕು ಇದರಿಂದ ಆರ್ಥಿಕ ಪ್ರಗತಿ ಸಾಧ್ಯವಿದೆ ಎಂದು ಸಲಹೆ ನೀಡಿದರು.

ಸಿ.ಎಫ್.ಟಿ.ಆರ್.ಐ ನಿರ್ದೇಶಕರಾದ ಡಾ. ಶ್ರೀದೇವಿ ಅನ್ನಪೂರ್ಣ ಅವರು ಮಾತನಾಡಿ, ಸಿಎಫ್​ಟಿಆರ್​ಐ ಸಂಸ್ಥೆಯು 1950ರಲ್ಲಿ ಮೈಸೂರಿನಲ್ಲಿ ಆರಂಭವಾಗಿ ರೈತರಿಂದ ಉತ್ಪಾದನೆಯಾದ ವಸ್ತುಗಳಿಗೆ ಮೌಲ್ಯವರ್ಧನೆ ಮಾಡುವ ಕೆಲಸವನ್ನು ನಿರ್ವಹಿಸುತ್ತಿದೆ. ಸಿರಿಧಾನ್ಯಗಳ ಕುರಿತು ಪ್ರಸ್ತುತ 45 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, 85 ಜನ ಈ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ 15 ಜನ ಮಹಿಳೆಯರನ್ನು ಒಳಗೊಂಡ ಆಸರೆ ಸಂಜೀವಿನಿ ಉದ್ಯೋಗ ತಂಡವು ನಮ್ಮ ಸಂಸ್ಥೆಯಲ್ಲಿ ನಾಲ್ಕು ತಂತ್ರಜ್ಞಾನಗಳ ಕುರಿತು ತರಬೇತಿ ಪಡೆದು ಈಗ ಅಮೇಜಾನ್, ಫ್ಲಿಪ್​ಕಾರ್ಟ್​ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿ ಪಿಎಂಎಫ್ ಎಂಇ ಯೋಜನೆಯಡಿ ಸಾವಿರಕ್ಕೂ ಅಧಿಕ ರೈತರಿಗೆ ತರಬೇತಿ ನೀಡಲಾಗಿತ್ತು. ರೈತರಿಗೆ ನಮ್ಮ ಸಂಸ್ಥೆಯಲ್ಲಿ ತಾಂತ್ರಿಕ ಸಹಾಯ ಹಾಗೂ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ತಜ್ಞರು ಸಿರಿಧಾನ್ಯಗಳ ಸುಧಾರಿತ ಬೇಸಾಯ ಕ್ರಮಗಳು ಮೌಲ್ಯವರ್ಧನೆ ಹಾಗೂ ಸಿರಿಧಾನ್ಯ ಖಾದ್ಯಗಳ ತಯಾರಿಕೆ ಕುರಿತು ಮಾಹಿತಿ ನೀಡಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.

ಇದನ್ನೂ ಓದಿ : ಮೈಸೂರು: ಸಿಎಫ್​ಟಿಆರ್​ಐ ತರಬೇತಿಯಿಂದ 'ನಂಬಿಕೆ' ಪ್ರಾಡಕ್ಟ್​, ಉದ್ಯಮಿಯಾದ ರೈತನ ಯಶೋಗಾಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.