ETV Bharat / state

ಮತ್ತೆ ಕಾಂಗ್ರೆಸ್ ಗೂಡು ಸೇರಲು ಸಜ್ಜಾದ ಹಳ್ಳಿಹಕ್ಕಿ..​ ಕೈ ಹಿಡಿಯುವ ಬಗ್ಗೆ ದೃಢಪಡಿಸಿದ ಹೆಚ್ ವಿಶ್ವನಾಥ್

author img

By

Published : Jan 28, 2023, 9:07 AM IST

H. Vishwanath, Randeep Surjewala and D. K. Shivakumar talking at a private hotel.
ಖಾಸಗಿ ಹೋಟೆಲ್‌ನಲ್ಲಿ ಮಾತನಾಡುತ್ತಿರುವ ಎಚ್.ವಿಶ್ವನಾಥ್, ರಂದೀಪ್ ಸುರ್ಜೇವಾಲ ಹಾಗೂ ಡಿ.ಕೆ.ಶಿವಕುಮಾರ್

ಮತ್ತೆ ಕಾಂಗ್ರೆಸ್​ ಸೇರಲು ಮುಂದಾದ ಹಳ್ಳಿಹಕ್ಕಿ - ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲ ಹಾಗೂ ಡಿ ಕೆ ಶಿವಕುಮಾರ್ ಭೇಟಿಯಾದ ಹೆಚ್​ ವಿಶ್ವನಾಥ್​- ಬದಲಾವಣೆ ಕುರಿತು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮಾಹಿತಿ

ಮೈಸೂರು: ಚುನಾವಣೆಗೆ ಮುನ್ನವೋ, ಚುನಾವಣೆ ನಂತರವೋ ಕಾಂಗ್ರೆಸ್ ಸೇರುವೆ ಎಂದು ಪಕ್ಷ ಬದಲಾವಣೆ ಕುರಿತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಮೇಲೆ ಮುನಿಸು ಅಂತಾ ಯಾವುದು ಇಲ್ಲ. ನಾವು ವೈಯಕ್ತಿಕವಾಗಿ ಯಾವಾಗಲೂ ಚೆನ್ನಾಗಿದ್ದೇವೆ ಎಂದಿದ್ದಾರೆ.

ಸಿದ್ದರಾಮಯ್ಯ ಹಾಗೂ ನಾನು, ಇಬ್ಬರು ಒಟ್ಟಿಗೆ ಕಾನೂನು ಅಭ್ಯಾಸ ಮಾಡಿದ್ದೇವೆ. ನಾವು ಮೊದಲಿನಿಂದಲೂ ಸ್ನೇಹಿತರು, ಈಗಲೂ ಸ್ನೇಹಿತರು. ರಾಜಕೀಯವಾಗಿ ಸಣ್ಣ ಪುಟ್ಟ ಮಾತುಗಳಿರುತ್ತವೆ ಅಷ್ಟೇ, ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಸಹಜ ಎಂದರು. ನಾನು 40 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದೆ, ಯಾವುದೇ ವಿಷಯಕ್ಕಾಗಲಿ, ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ, ಯಾವುದೇ ಪಕ್ಷದಲ್ಲಿದ್ದರೂ ಕಾಂಗ್ರೆಸ್ ನನ್ನ ತಾಯಿ ಇದ್ದಂತೆ ಎಂದು ಹೇಳುತ್ತಿದ್ದೆ ಎಂದ ಅವರು ಮುಂದಿನ ಚುನಾವಣೆಯಲ್ಲಿ ನಾನಾಗಲಿ, ನಮ್ಮ ಮಕ್ಕಳಾಗಲಿ ಸ್ಪರ್ಧೆ ಮಾಡುವುದಿಲ್ಲ. ಇವತ್ತು ಚುನಾವಣೆ ಎದುರಿಸೋದು ಕಷ್ಟ. ಎಲ್ಲಾ ರಿಯಲ್ ಎಸ್ಟೇಟ್ ಮಾಡಿರುವವರು, ದುಡ್ಡಿರುವ ವ್ಯಕ್ತಿಗಳಿಗೆ ಚುನಾವಣೆ ಎಂದು ಹೇಳಿದರು.

ನಾನು ಜೆಡಿಎಸ್‌ನಲ್ಲಿದ್ದೆ, ಅಲ್ಲಿ ಬರೀ ಕುಟುಂಬ ರಾಜಕಾರಣ. ಸಮ್ಮಿಶ್ರ ಸರ್ಕಾರದಲ್ಲಿ 7 ಜನ ಅವರ ಕುಟುಂಬದವರೇ ಸಚಿವರಾಗಿದ್ದರು. ಹೆಚ್​ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಅವರ ಕುಟುಂಬದವರೇ ಇದ್ದರು. ನಂತರ ಬಿಜೆಪಿಗೆ ಬಂದಾಗಲೂ ಆಡಳಿತ ವ್ಯವಸ್ಥೆ ಸರಿ ಇಲ್ಲ. ಯಡಿಯೂರಪ್ಪನವರಿಂದಲೂ ಇಲ್ಲಿಯವರೆಗೂ ಭ್ರಷ್ಟಾಚಾರವಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಸಪೋರ್ಟ್ ಮಾಡುತ್ತಿದ್ದೇನೆ. ಜನಪರವಾದ ಆಡಳಿತ ಬಹಳ ಮುಖ್ಯ ಎಂದರು.

ನಾನು ಕಾಂಗ್ರೆಸ್ ಸೇರ್ಪಡೆಗಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ಸಪೋರ್ಟ್ ಮಾಡುತ್ತೇನೆ. ನಾನು ಪಕ್ಷಕ್ಕೆ ಸೇರಲೇಬೇಕೆಂದೇನು ಇಲ್ಲ, ನಾನು ಸ್ವತಂತ್ರವಾಗಿರುವ ವ್ಯಕ್ತಿ. ಈಗ ಡಿಕೆಶಿ ಬನ್ನಿ ಮಾತನಾಡೋಣ ಅಂತಾ ಕರೆದಿದ್ದರು, ಅದಕ್ಕೆ ಬಂದು ಮಾತನಾಡಿದ್ದೇನೆ. ನಾನು ಡಿಕೆಶಿ ಬಹುಕಾಲದ ಸ್ನೇಹಿತರು. ಸುರ್ಜಿವಾಲ ಅವರು ನಮ್ಮ ಅನುಭವ ಕೇಳಲು ಕರೆದಿದ್ದರು ಎಂದು ಹೇಳಿದರು. ನಂತರ ಮಾತನಾಡಿದ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲ, ರಾಜ್ಯದಲ್ಲಿ ಕಾಂಗ್ರೆಸ್​ ಗೆಲುವಿಗೆ ಎಲ್ಲಾ ತಯಾರಿ ಮಾಡುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ಉದ್ಯೋಗವಕಾಶ ಕಸಿದುಕೊಂಡಿದೆ. ಯುವಕರ ಉದ್ಯೋಗಕ್ಕೆ ಕನ್ನ ಹಾಕಿದೆ. ರಾಜ್ಯದ ಜನತೆಗೆ ಈ ಸರ್ಕಾರ ಮೋಸ ಮಾಡಿದೆ ಎಂದು ಆರೊಪಿಸಿದರು.

ಮುಂದುವರೆದು, ಸಿಎಂ ಬಸವರಾಜ ಬೊಮ್ಮಾಯಿ ಹಿಂದುಳಿದ, ಅಲ್ಪ ಸಂಖ್ಯಾತರ ವಿರೋಧಿಯಾಗಿದೆ. ರಾಜ್ಯದಲ್ಲಿ ಬಿಜೆಪಿಯ ಆಡಳಿತದಲ್ಲಿ ವೈಫಲ್ಯ ಕಾಣುತ್ತಿರುವುದರಿಂದ, ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ ಇದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಬರಬೇಕು ಅಂತಾ ಜನರೇ ಕಾಂಗ್ರೆಸ್‌ನ ಪಲ್ಲಕ್ಕಿ ಹೊರುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆಗೆ ಜನರ ಬೆಂಬಲ ಜೋರಾಗಿದೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸೌಂಡ್ ಮಾಡ್ತಿಲ್ಲ. ಜನರೇ ಸೌಂಡ್ ಮಾಡುತ್ತಿದ್ದಾರೆ, ಪ್ರಜೆಗಳೇ ಸೌಂಡ್ ಮಾಡ್ತಿದ್ದಾರೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಜನತೆ ರಾಜ್ಯದಲ್ಲಿ ಈಗಿರುವ ಸರಕಾರವನ್ನು ತೆಗೆಯಬೇಕು. ಒಳ್ಳೆ ಆಡಳಿತ ಕೊಡಬೇಕು ಅಂತ ಬಯಸಿದ್ದಾರೆ. ಇದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಅಂತಾ ಜನರೇ, ಕಾಂಗ್ರೆಸ್‌ನ ಪಲ್ಲಕ್ಕಿ ಹೊರುತ್ತಿದ್ದಾರೆ. ಜನಶಕ್ತಿ, ಪ್ರಜಾಶಕ್ತಿ ಮುಂದೆ ಯಾವುದು ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಹಣ ಕೊಟ್ಟು ಮತ ಖರೀದಿ ಮಾಡುವುದೇ ಬಿಜೆಪಿಯವರ ಸಾಧನೆ: ಸುರ್ಜೇವಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.