ETV Bharat / state

Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಮೌಲ್ಯವೃದ್ಧಿಗೆ ಒತ್ತು; ಪರಿಣತರ ಸಲಹೆ ಕೇಳಿದ ಸಚಿವ ಎಂ.ಬಿ.ಪಾಟೀಲ್

author img

By

Published : Jul 5, 2023, 9:03 AM IST

ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು ಮಾರುಕಟ್ಟೆಯಲ್ಲಿ ಮಾರಾಟ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಮೈಸೂರು ಸ್ಯಾಂಡಲ್‌ ಸೋಪ್‌ ಮೌಲ್ಯ ವೃದ್ಧಿಗೆ ಸಚಿವ ಎಂಬಿ ಪಾಟೀಲ್​ ಕರೆ
ಮೈಸೂರು ಸ್ಯಾಂಡಲ್‌ ಸೋಪ್‌ ಮೌಲ್ಯ ವೃದ್ಧಿಗೆ ಸಚಿವ ಎಂಬಿ ಪಾಟೀಲ್​ ಕರೆ

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಎಂದಾಕ್ಷಣ ಮನಸ್ಸಿಗೆ ಮುದ ನೀಡುವ ಅದರ ಪರಿಮಳ ನೆನಪಾಗುತ್ತದೆ. ಶ್ರೀಗಂಧದ ಸುಗಂಧವನ್ನು ಜನಮನದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದ ಶ್ರೇಯಸ್ಸು ಮೈಸೂರು ಸ್ಯಾಂಡಲ್​ ಸೋಪ್​ಗಿದೆ. ಇದಕ್ಕೆ ಮತ್ತೆ ಬ್ರಾಂಡ್​ ಮೌಲ್ಯ ತಂದು ಕೊಡಲು ಸರ್ಕಾರ ಯೋಚಿಸುತ್ತಿದೆ.

ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವನ್ನಾಗಿ ಮಾಡಲಾಗುವುದು. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಸಿಳಿದ್ದಾರೆ. ಆಸಕ್ತರು karnatakavision2030@gmail.comಗೆ ತಮ್ಮ ಸಲಹೆಗಳನ್ನು ಕಳುಹಿಸಬಹುದು.

ಸಚಿವ ಎಂಬಿ ಪಾಟೀಲ ಟ್ವೀಟ್​
ಸಚಿವ ಎಂಬಿ ಪಾಟೀಲ ಟ್ವೀಟ್​

ಮಂಗಳವಾರ ಟ್ವೀಟ್‌ ಮಾಡಿರುವ ಸಚಿವರು, 'ಮೈಸೂರು ಸ್ಯಾಂಡಲ್‌ ಸೋಪ್‌, ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್​ ಆರಂಭಿಸಿದ ಉತ್ಪನ್ನ. ಅದು ರಾಜ್ಯದ ಮಕುಟಮಣಿಯ ಅನರ್ಘ್ಯರತ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರಕಾರದ ಪ್ರಯತ್ನಕ್ಕೆ ಕೈಗೂಡಿಸಬೇಕು' ಎಂದು ಮನವಿ ಮಾಡಿದ್ದಾರೆ.

ಮೈಸೂರು ಸ್ಯಾಂಡಲ್‌ ಸೋಪ್‌ ರಾಜ್ಯದ ಸಾಬೂನು ಮಾರುಕಟ್ಟೆಯಲ್ಲಿ ಸಿಂಹಪಾಲು ಹೊಂದಿಲ್ಲ. ಹಾಗೆಯೇ, ಈ ಬ್ರ್ಯಾಂಡ್‌ ಉತ್ಪನ್ನ ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಉಳಿದ ಹೆಸರಿನ ಸಾಬೂನುಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಒಟ್ಟು ವಹಿವಾಟಿನಲ್ಲಿ ಶೇಕಡಾ 3ರಷ್ಟು ಮಾತ್ರ ರಫ್ತು ವಹಿವಾಟಿನ ಮೂಲಕ ಬರುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗ. ನಮ್ಮ ಬಳಿ ಮೈಸೂರು ಸ್ಯಾಂಡಲ್‌ ಸೋಪ್‌ನಂತಹ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರಕಾರ ಉತ್ಸುಕವಾಗಿದೆ. ರಾಜ್ಯದ ಹಿರಿಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಕೆಎಸ್‍ಡಿಎಲ್ ಕಾರ್ಯಚಟುವಟಿಕೆ, ಬಂಡವಾಳ, ಆಧುನಿಕ ಯಂತ್ರೋಪಕರಣ, ಆಕರ್ಷಕ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವಿಸ್ತರಣೆಯು ದೊಡ್ಡ ಪ್ರಮಾಣದಲ್ಲಿ ಆಗಬೇಕು. ಕೆಎಸ್‍ಡಿಎಲ್​ನ ಉತ್ಪನ್ನಗಳ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್‍ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಚಿಂತನೆಯಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುನ್ನುಗ್ಗಬೇಕು ಎಂದು ಕರೆ ನೀಡಿದ್ದರು.

ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಹೊರೆ: 2023-24ನೇ ಸಾಲಿನ ಸಾಲದ ಸ್ಥಿತಿಗತಿ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.