ETV Bharat / state

ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಿಂದಲೂ ಸ್ಪರ್ಧಿಸುವೆ: ಸಿದ್ದರಾಮಯ್ಯ

author img

By

Published : Mar 28, 2023, 5:31 PM IST

Updated : Mar 28, 2023, 7:01 PM IST

Opposition leader Siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

ಇದುವರೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ತಾವು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ

ಮೈಸೂರು: ನನ್ನ ಕೊನೆಯ ಚುನಾವಣೆಯನ್ನು ಹುಟ್ಟೂರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬುದು ನನ್ನ ಆಸೆ, ಹಾಗೂ ಕೋಲಾರ ಜನರ ಒತ್ತಡದಿಂದ ಕೋಲಾರದಲ್ಲೂ ಸ್ಪರ್ಧೆ ಮಾಡುತ್ತೇನೆ. ಈ ಮೂಲಕ ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಚ್ ​ಡಿ ಕೋಟೆಯಲ್ಲಿ ಹೇಳಿಕೆ ನೀಡಿದ್ದಾರೆ.

ಇಂದು ಎಚ್​ ಡಿ ಕೋಟೆಯಲ್ಲಿ ಆರ್ ದೃವನಾರಾಯಣ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ, ಮಾಧ್ಯಮಗಳ‌ ಜೊತೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ವರುಣಾ ಜೊತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದರು.

ವರುಣಾದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು, ಹಾಗೆಂದು ಒಂದು ಕ್ಷೇತ್ರ ಲಕ್ಕಿ ಅಥವಾ ಇನ್ನೊಂದು ಅನ್​ಲಕ್ಕಿ ಅಂತಾ ಏನೂ ಇಲ್ಲ. ಈ ಬಗ್ಗೆ ನನಗೆ ಯಾವುದೇ ನಂಬಿಕೆ ಇಲ್ಲ. ವರುಣಾ ಕ್ಷೇತ್ರದಲ್ಲಿ ನನ್ನ ಹುಟ್ಟೂರು ಬರುತ್ತದೆ. ವರುಣಾ ಹೋಬಳಿ ಇರುವ ಕಾರಣ ವರುಣಾ ಕ್ಷೇತ್ರ ಎಂದು ಕರೆಯುತ್ತಾರೆ. ಇದು ನನ್ನ ಕೊನೆಯ ಚುನಾವಣೆಯಾದ್ದರಿಂದ, ಹುಟ್ಟೂರು ಕ್ಷೇತ್ರದಲ್ಲೇ ನನ್ನ ಕೊನೆಯ ಚುನಾವಣೆಯನ್ನು ಎದುರಿಸಬೇಕೆಂಬ ಆಸೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ರು.

ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಬಾರಿ ನನ್ನ ಮಗ ಯತೀಂದ್ರ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ.‌ ನನ್ನ ಕ್ಷೇತ್ರದಲ್ಲೇ ಕೆಲಸ ಮಾಡುತ್ತಾನೆ. ಈ ಬಗ್ಗೆ ಹೆಚ್ಚಿನ‌ ಚರ್ಚೆ ಬೇಡ ಎಂದರು.

ಕಾಂಗ್ರೆಸ್ ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳಲ್ಲ: ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಹೈಕಮಾಂಡ್ ಜೊತೆ ಯಾರೂ ಮಾತನಾಡಿಲ್ಲ. ಈ ಬಾರಿ ನಾವು ಯಾರ ಜೊತೆಯೂ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದರ ಜೊತೆಗೆ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದವು. ಅದೇ ರೀತಿ ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಅಚ್ಚರಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.

ಯಡಿಯೂರಪ್ಪನವರೇ ಕಲ್ಲು ತೂರಿದ್ದು ಕಾಂಗ್ರೆಸ್​ನವರು ಅಲ್ಲ ಅಂದಿದ್ದಾರೆ- ಸಿದ್ದರಾಮಯ್ಯ: ಯಡಿಯೂರಪ್ಪ ಮನೆಯ ಮೇಲೆ ಕಲ್ಲು ತೂರಿದ್ದು ಕಾಂಗ್ರೆಸ್ ಕಡೆಯವರು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರೇ ಕಲ್ಲು ತೂರಿದ್ದು ಕಾಂಗ್ರೆಸ್ ಅಲ್ಲ ಅಂದಿದ್ದಾರೆ. ಅವರಿಗಿಂತ ಸಿಎಂಗೆ ಹೆಚ್ಚು ಏನು ಗೊತ್ತಿಲ್ಲ, ಈ ಬಗ್ಗೆ ಯಡಿಯೂರಪ್ಪನವರಿಗೆ ಸಂಪೂರ್ಣ ಗೊತ್ತಿರುತ್ತದೆ ಎಂದು ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್​ ಕೊಟ್ಟರು.

ಕಾಂಗ್ರೆಸ್ ಮೀಸಲಾತಿ ವಿರೋಧಿ ಅಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಆದರೆ ಮೂರೂವರೆ ವರ್ಷ ಸುಮ್ಮನಿದ್ದು, ಈಗ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಏನಿತ್ತು ಎಂದು ಬಿಜೆಪಿ ನಿರ್ಧಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ: ವರುಣಾದಿಂದ ಸ್ಪರ್ಧಿಸುವಂತೆ ನಮ್ಮ ಮನೆಯಲ್ಲಿ ಸಲಹೆ ನೀಡಿದ್ದಾರೆ: ಸಿದ್ದರಾಮಯ್ಯ

Last Updated :Mar 28, 2023, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.