ETV Bharat / state

ಅನುಮಾನಾಸ್ಪದ ರೀತಿಯಲ್ಲಿ ಬಾಲಕನ ಮೃತದೇಹ ಪತ್ತೆ: ಹುಲಿ ಎಳೆದೊಯ್ದಿರುವ ಶಂಕೆ!

author img

By ETV Bharat Karnataka Team

Published : Sep 4, 2023, 3:16 PM IST

Updated : Sep 4, 2023, 6:15 PM IST

Boy dead body was found in a suspicious manner at Mysore
Boy dead body was found in a suspicious manner at Mysore

ಬಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಬಾಲಕನ ಮೃತದೇಹವೆಲ್ಲ ರಕ್ತಸಿಕ್ತವಾಗಿದ್ದು, ಹುಲಿಯೇ ದಾಳಿ ನಡೆಸಿದೆ ಎಂದು ಆತನ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಬಾಲಕನ ತಂದೆ ಕೃಷ್ಣಾ ನಾಯಕ

ಮೈಸೂರು: ಅನುಮಾನಾಸ್ಪದ ರೀತಿಯಲ್ಲಿ ಬಾಲಕನೊಬ್ಬ ಮೃತಪಟ್ಟ ಘಟನೆ ಹೆಚ್​.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಎಂಬ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಚರಣ್ (7) ಮೃತ ಬಾಲಕ. ಪೋಷಕರೊಂದಿಗೆ ಜಮೀನಿಗೆ ಆಗಮಿಸಿದ್ದ ಬಾಲಕ ಮರದ‌ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ. ಕೆಲಹೊತ್ತಲ್ಲೇ ಆತ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳದಿಂದ ಕಿರುಚಾಟದ ಸದ್ದು ಕೇಳಿ ಬಂದಿತ್ತು. ತಕ್ಷಣ ಹೋಗಿ ನೋಡುವಷ್ಟರಲ್ಲಿ ಬಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮುಖವೆಲ್ಲ ಪರಚಿದಂತ ಹಾಗೂ ಒಂದು ಕಾಲನ್ನು ಯಾವುದೋ ಪ್ರಾಣಿ ತಿಂದು ಅರ್ಧ ಬಿಟ್ಟುಹೋದ ರೀತಿಯಲ್ಲಿ ಪತ್ತೆಯಾಗಿದೆ. ಬಾಲಕನ ಮೃತದೇಹವೆಲ್ಲ ರಕ್ತಸಿಕ್ತವಾಗಿರುವುದರಿಂದ ಹುಲಿಯೇ ದಾಳಿ ನಡೆಸಿದೆ ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಕೂಡ ಈ ಬಗ್ಗೆ ಅನುಮಾನ ಹೊರಹಾಕಿದ್ದಾರೆ.

''ಬಿಸಿಲು ಇದ್ದುದ್ದರಿಂದ ಮರದ ಕೆಳಗೆ ಕೂಡುವಂತೆ ಹೇಳಿದ್ದೆ. ಅಲ್ಲದೇ ಎಲ್ಲಿಯೂ ಹೋಗದಂತೆ ಹೇಳಿ ನಾವು ನಮ್ಮ ಕೆಲಸದಲ್ಲಿ ನಿರತರಾಗಿದ್ದೆವು. ಕೆಲ ಹೊತ್ತಿನಲ್ಲೇ ಆತನಿದ್ದ ಸ್ಥಳದಿಂದ ಅಪ್ಪಾ ಎಂಬ ಸದ್ದು ಕೇಳಿಸಿತು. ಹೋಗಿ ನೋಡುವಷ್ಟರಲ್ಲಿ ಆತ ಇದ್ದಿರಲಿಲ್ಲ. ಮನೆ ಕಡೆ ಹೋಗಿರಬಹುದು ಎಂಬ ಅನುಮಾನದಿಂದ ಅಲ್ಲಿ - ಇಲ್ಲಿ ಫೋನ್​ ಮಾಡಿ ವಿಚಾರಿಸಿದೆ. ಆದರೆ, ಬಂದಿಲ್ಲ ಎಂದು ಹೇಳಿದ್ದರಿಂದ ಭಯದಲ್ಲೇ ಸುತ್ತಮುತ್ತ ಹುಡುಕಾಡಿದೆವು. ರಾತ್ರಿ ಇಲ್ಲಿ ಹುಲಿ ಬಂದಿತ್ತು ಎಂಬ ಕೇಳಿ ಅನುಮಾನ ಹಾಗೂ ಭಯ ಇನ್ನೂ ಹೆಚ್ಚಾಗಿತ್ತು. ಹೊಲದಲ್ಲಿಯೇ ಹುಡುಕಾಟ ನಡೆಸುತ್ತಿದ್ದಾಗ ಅಲ್ಲಲ್ಲಿ ರಕ್ತ ಚೆಲ್ಲಿದ್ದು ಕಾಣಿಸಿತು. ಅದರ ಜಾಡು ಹಿಡಿದು ಹೋಗಿ ನೋಡಿದಾಗ ನಮ್ಮ ಹುಡುಗ ಮೃತಪಟ್ಟಿದ್ದು ಗೊತ್ತಾಯಿತು'' ಎಂದು ಮೃತ ಬಾಲಕನ ತಂದೆ ಕೃಷ್ಣಾ ನಾಯಕ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಅರಿವಳಿಕೆ ಮದ್ದು ನೀಡಲೆಂದು ತೆರಳಿದಾಗ ದಾಳಿ ಮಾಡಿದ ಕಾಡಾನೆ: ಅರಣ್ಯ ಸಿಬ್ಬಂದಿ ಸಾವು

ಇತ್ತೀಚೆಗೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಗಾಯಗೊಂಡು ತಿರುಗಾಡುತ್ತಿದ್ದ ಭೀಮ ಎಂಬ ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೃತಪಟ್ಟ ಘಟನೆ ನಡೆದಿತ್ತು. ವೆಂಕಟೇಶ್ ಆನೆ ದಾಳಿಯಿಂದ ಮೃತಪಟ್ಟಿದ್ದರು. ಮೃತರು ಅರಿವಳಿಕೆ ತಜ್ಞರು ಕೂಡ ಆಗಿದ್ದರು. ಭೀಮ ಎಂಬ ಕಾಡಾನೆ ಗಾಯಗೊಂಡು ತಿರುಗಾಡುತಿತ್ತು. ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಅರಿವಳಿಕೆ ಮದ್ದು ನೀಡಲು ಮುಂದಾದಾಗ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಿತ್ತು. ಈ ವೇಳೆ ಆನೆ ತುಳಿತಕ್ಕೆ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Last Updated :Sep 4, 2023, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.