ETV Bharat / state

ಮಳೆಯಿಂದ ಬೆಳೆ ಹಾನಿ.. ಸರ್ಕಾರದ ಪರಿಹಾರ ಭೂ ಮಾಲೀಕರಿಗೆ, ಸಾಲ ಮಾತ್ರ ಗುತ್ತಿಗೆ ರೈತನ ಹೆಗಲಿಗೆ..

author img

By

Published : Dec 3, 2021, 1:55 PM IST

tenant-farmers-crop-relief-problem
ಗುತ್ತಿಗೆ ರೈತನ ಸಮಸ್ಯೆ

ಆಂಧ್ರಪ್ರದೇಶದಲ್ಲಿ ಗುತ್ತಿಗೆ ರೈತನಿಗೆ ಬೆಳೆ‌ ನಷ್ಟದ ಪರಿಹಾರ ಜಮಾ ಆಗುತ್ತದೆ. ಇದೇ ಮಾದರಿ ನಮ್ಮ ರಾಜ್ಯದಲ್ಲಿಯೂ ಗುತ್ತಿಗೆ ರೈತನಿಗೆ ಬೆಳೆ‌ ನಷ್ಟ ಪರಿಹಾರ ನೀಡಬೇಕು ಎಂಬ ಕೂಗು ರೈತ ವಲಯದಲ್ಲಿ ಕೇಳಿ ಬರುತ್ತಿದೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಸುಮಾರು 34,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಅದರಲ್ಲಿ 18,000 ಹೆಕ್ಟೇರ್ ಪ್ರದೇಶ ಮಳೆಯಿಂದಾಗಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 15-16 ಸಾವಿರ ಹೆಕ್ಟೇರ್ ಪ್ರದೇಶದ ನಷ್ಟವು ಗುತ್ತಿಗೆ ಪಡೆದ ರೈತರ ಭೂಮಿಯಲ್ಲಿ ಆಗಿದೆ..

ಕೊಪ್ಪಳ : ಸ್ವಂತ ಭೂಮಿ ಇಲ್ಲದಿದ್ದರೂ ಸಹ ಕೃಷಿಯನ್ನೇ ಬದುಕಾಗಿಸಿಕೊಂಡ ಅದೆಷ್ಟೋ ರೈತರು ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ಉತ್ತಿ, ಬಿತ್ತುತ್ತಾರೆ. ಗುತ್ತಿಗೆ ಭೂಮಿಯಲ್ಲಿ ಬೆಳೆ ಬೆಳೆಯಲು ಖರ್ಚು ಅವರದೇ, ನಷ್ಟವಾದರೆ ಸಾಲಗಾರನಾಗುವುದು ಇದೇ ರೈತರು.

ಮಳೆಯಿಂದ ಹಾನಿಗೊಳಗಾದ ಫಸಲಿಗೆ ಸರ್ಕಾರ, ವಿಮಾ ಕಂಪನಿಗಳು ಪರಿಹಾರ ನೀಡುವುದು ಮಾತ್ರ ಭೂಮಿಯ ಮಾಲೀಕನಿಗೆ. ಇದರಿಂದಾಗಿ ಬೆಳೆ ಕಳೆದುಕೊಂಡ ಗುತ್ತಿಗೆ ಆಧಾರಿತವಾಗಿ ಕೃಷಿ ಮಾಡುವ ರೈತರ ಕಷ್ಟ ಹೇಳತೀರದು.

rain crop relief fund : ಸಾಮಾನ್ಯವಾಗಿ ಈಗ ಭೂಮಿ ಮಾಲೀಕನಿಗಿಂತ ಅದೇ ಭೂಮಿಯಲ್ಲಿ ಒಪ್ಪಂದಂತೆ ಇತರರು ಕೃಷಿ ಮಾಡುವವರೆ ಬೇರೆಯವರು. ವರ್ಷಕ್ಕೆ ಇಂತಿಷ್ಟು ಎಂದು ಹಣ ನೀಡಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಕೊಪ್ಪಳ‌ ಜಿಲ್ಲೆಯಲ್ಲಿಯೂ ಅದೆಷ್ಟೋ ರೈತರು ಉಳುಮೆ ಮಾಡುತ್ತಾರೆ.

ಹೊಲ ಗುತ್ತಿಗೆ ಪಡೆದ ರೈತರು ಭೂಮಿ ಹದ ಮಾಡುವುದರಿಂದ ಹಿಡಿದು ಫಸಲು ತೆಗೆದುಕೊಳ್ಳುವವರೆಗೂ ಖರ್ಚು ಮಾಡಬೇಕಾಗುತ್ತದೆ. ಉತ್ತಮ ಬೆಳೆ ಬಂದ್ರೆ ಲಾಭ, ಇಲ್ಲದಿದ್ದರೆ ನಷ್ಟ.

ಮಳೆಯಿಂದ ಬೆಳೆ ಹಾನಿ ಪರಿಹಾರ ಭೂ ಮಾಲೀಕರಿಗೆ.. ಭೂಮಿ ಗುತ್ತಿಗೆ ಪಡೆದ ರೈತರಿಗೆ ಸಂಕಷ್ಟ..

ಈ ಮಧ್ಯೆ ತುಂಗಭದ್ರಾ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಶೇಕಡಾ 70 ಕ್ಕಿಂತ ಅಧಿಕ ರೈತರು ಗುತ್ತಿಗೆ ಆಧಾರಿತ ಕೃಷಿ ಮಾಡುತ್ತಿದ್ದಾರೆ. ಕಳೆದ ವಾರ ಸುರಿದ ಭಾರಿ ಮಳೆಗೆ ಕೊಯ್ಲು ಹಂತದಲ್ಲಿದ್ದ ಭತ್ತ ನೆಲಕಚ್ಚಿದೆ.

ಪ್ರತಿ ಎಕರೆಗೆ ಏನಿಲ್ಲವೆಂದರೂ ಸುಮಾರು 30 ರಿಂದ 35 ಸಾವಿರ ರೂ. ಖರ್ಚು ಮಾಡಿರುತ್ತಾರೆ. ಇದರ ಜತೆಗೆ ಭೂಮಿ ಮಾಲೀಕನಿಗೆ ಸುಮಾರು 10-15 ಸಾವಿರ ರೂ. ನೀಡಿರುತ್ತಾರೆ. ಮಳೆಯಿಂದ ಈಗ ಬೆಳೆ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಗುತ್ತಿಗೆ ರೈತರಿಗೆ ಬೆಳೆ ಹಾನಿ ಪರಿಹಾರ : ಗುತ್ತಿಗೆ ರೈತ ಮಾಲೀಕನಿಗೆ ಬೆಳೆಗೆ ನೀಡಬೇಕಾದ ಹಣ ನೀಡುತ್ತಾನೆ. ಖರ್ಚು ಸಹ ಮಾಡಿರುತ್ತಾನೆ. ಆದರೆ, ಮಳೆಯಿಂದಾದ ಬೆಳೆ‌ ನಷ್ಟಕ್ಕೆ ಸರ್ಕಾರ ನೀಡುವ ಪರಿಹಾರ ನೇರವಾಗಿ ಭೂಮಿ ಮಾಲೀಕನ ಖಾತೆಗೆ ಜಮಾ ಆಗುತ್ತದೆ.

ಇದರಿಂದ ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವ ರೈತ ಸಂಕಷ್ಟಕ್ಕೀಡಾಗುತ್ತಾನೆ. ಆಂಧ್ರಪ್ರದೇಶದಲ್ಲಿ ಗುತ್ತಿಗೆ ರೈತನಿಗೆ ಬೆಳೆ‌ ನಷ್ಟದ ಪರಿಹಾರ ಜಮಾ ಆಗುತ್ತದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಗುತ್ತಿಗೆ ರೈತನಿಗೆ ಬೆಳೆ‌ ನಷ್ಟ ಪರಿಹಾರ ನೀಡಬೇಕು ಎಂಬ ಕೂಗು ರೈತ ವಲಯದಲ್ಲಿ ಕೇಳಿ ಬರುತ್ತಿದೆ.

ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಸುಮಾರು 34,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಅದರಲ್ಲಿ 18,000 ಹೆಕ್ಟೇರ್ ಪ್ರದೇಶ ಮಳೆಯಿಂದಾಗಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 15-16 ಸಾವಿರ ಹೆಕ್ಟೇರ್ ಪ್ರದೇಶದ ನಷ್ಟವು ಗುತ್ತಿಗೆ ಪಡೆದ ರೈತರ ಭೂಮಿಯಲ್ಲಿ ಆಗಿದೆ.

ಈ ಕುರಿತಂತೆ ಸಚಿವ ಹಾಲಪ್ಪ ಆಚಾರ್‌ ಮಾತನಾಡಿದ್ದು, ನಿಯಮಾವಳಿ ಪ್ರಕಾರ ಭೂಮಿ ಮಾಲೀಕನಿಗೆ ಪರಿಹಾರ ಹೋಗುತ್ತದೆ. ರೈತರು ಮಾನವೀಯತೆಯಿಂದ ಗುತ್ತಿಗೆ ರೈತನಿಗೆ ಬೆಳೆ ಪರಿಹಾರದ ಹಣ ನೀಡಬೇಕು.

ಈ ಕುರಿತು ಗ್ರಾಮಗಳ ಹಿರಿಯರು ಸಹ ರೈತರ ಮನವೊಲಿಸಬೇಕು ಎಂದು ಹೇಳಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಸಿಗುವಂತೆ ಸರ್ಕಾರ ನಿಯಮಾವಳಿಗಳನ್ನು ರೂಪಿಸಬೇಕು ಎಂಬುದು ಗುತ್ತಿಗೆ ಕೃಷಿಕರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.