ETV Bharat / state

ಡಿ.13ರೊಳಗೆ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು: ಸಿದ್ದರಾಮಯ್ಯ ಒತ್ತಾಯ

author img

By

Published : Nov 24, 2021, 7:53 PM IST

opposition leader siddaramayya
ವಿಪಕ್ಷ ನಾಯಕ ಸಿದ್ದರಾಮಯ್ಯ

ಮಳೆಯಿಂದ ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರ ಕೂಡಲೇ ಸರ್ವೇ ಮಾಡಿ, ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಕೋಲಾರ: ಮಳೆಯಿಂದ ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರ ಕೂಡಲೇ ಸರ್ವೇ ಮಾಡಿ, ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ತಾಲ್ಲೂಕಿನ ನರಸಾಪುರ ಬಳಿ ಮಳೆಯಿಂದ ಹಾನಿಯಾದ ಬೆಳೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕಾಲಿಕ ಮಳೆಗೆ ಅಪಾರ ಪ್ರಮಾಣ ಬೆಳೆ ಹಾನಿಯಾಗಿದೆ. ವಿಪಕ್ಷಗಳ ಒತ್ತಾಯದ ಬಳಿಕ ಸಿಎಂ 2-3 ಕಡೆ ಭೇಟಿ ನೀಡಿದ್ದಾರೆ. ಬೆಳೆ ಹಾನಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಎನ್.ಡಿ.ಅರ್.ಎಫ್. ಪ್ರಕಾರವೇ ಪರಿಹಾರ ನೀಡಬೇಕೆಂದಿಲ್ಲ, ಸರ್ಕಾರದ ಖಜಾನೆಯಿಂದಲೇ ಕೊಡಬೇಕು ಎಂದು ಆಗ್ರಹಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಭತ್ತ ಹಾಗೂ ರಾಗಿ ಬೆಳೆ ನಷ್ಟವಾದಾಗ 25 ಸಾವಿರ ಪರಿಹಾರ ನೀಡಿದ್ದೆವು. ಈ ಸರ್ಕಾರ ಕೂಡ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತೇನೆ ಎಂದರು.

ಡಿ.13ರೊಳಗೆ ಬೆಳೆ ಹಾನಿ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕೃಷಿ ಇಲಾಖೆಯ ಪ್ರಕಾರ ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್ ಬೆಳೆ ಹಾನಿ ಉಂಟಾಗಿದೆ. ಕೋಲಾರದಲ್ಲೇ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

ಪರಿಷತ್​ ಚುನಾವಣೆ: ಬಿಜೆಪಿ-ಜೆಡಿಎಸ್​ ಮೈತ್ರಿ

ರಾಜ್ಯದಲ್ಲಿ 25 ಸ್ಥಾನಗಳ ಪೈಕಿ 7 ಕಡೆ ಜೆಡಿಎಸ್​ ಸ್ಪರ್ಧಿಸಿದೆ. ಇನ್ನೂ 14 ಕಡೆ ಅಭ್ಯರ್ಥಿಗಳನ್ನೇ ಹಾಕಿಲ್ಲ. ಇದು ಬಿಜೆಪಿ ಮತ್ತು ಜೆಡಿಎಸ್​ ನಡುವೆ ಹೊಂದಾಣಿಕೆ ಆಗಿದೆ ಅಂತಲೇ ಅರ್ಥ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಅವರು ಜೆಡಿಎಸ್​ ಅನ್ನು ಬೆಂಬಲಿಸಲು ಕೇಳಿದ್ದೇವೆ ಎಂದಿದ್ದಾರೆ. ಚುನಾವಣೆಗೂ ಮುನ್ನವೇ ಎರಡು ಪಕ್ಷಗಳ ನಡುವೆ ಮಾತುಕತೆ ನಡೆದಿದೆ. ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಚುನಾವಣೆಯಲ್ಲಿ ಕಾಂಗ್ರೆಸ್​ ಎಷ್ಟು ಸ್ಥಾನ ಗೆಲ್ಲುತ್ತೆ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನಾನೇನು ಜ್ಯೋತಿಷಿಯಾ? ಎಂದರು. ಬಳಿಕ ಕಳೆದ ಸಲ 14 ಸ್ಥಾನ ಗೆದ್ದಿದ್ದೆವು. ಈ ಬಾರಿ 15 ಸ್ಥಾನ ಗೆಲ್ಲುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.