ETV Bharat / state

ಮುಳಬಾಗಿಲು: ​ಎರಡನೇ ಹಂತದ ಕಾಂಗ್ರೆಸ್‌ ಪ್ರಜಾಧ್ವನಿ ಬಸ್​ ಯಾತ್ರೆ

author img

By

Published : Feb 3, 2023, 9:54 PM IST

Prajadhwani Bus Yatra of Congress Party at the mulabagilu
ಮುಳಬಾಗಿಲಿನಲ್ಲಿ ಕಾಂಗ್ರೆಸ್​​ ಪಕ್ಷದ 2ನೇ ಹಂತದ ಪ್ರಜಾಧ್ವನಿ ಬಸ್​ ಯಾತ್ರೆ

ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಕಾಂಗ್ರೆಸ್​​ ಪಕ್ಷದ 2ನೇ ಹಂತದ ಪ್ರಜಾಧ್ವನಿ ಬಸ್​ ಯಾತ್ರೆ ಸಮಾರಂಭ ನಡೆಯಿತು.

ಕೋಲಾರ: ರಾಜ್ಯದ ಮೂಡಣ ಬಾಗಿಲು ಎಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಕಾಂಗ್ರೆಸ್​​ ಪಕ್ಷದ ಎರಡನೇ ಹಂತದ ಪ್ರಜಾಧ್ವನಿ ಬಸ್​ ಯಾತ್ರೆ ನಡೆಯಿತು. ಕೈ ನಾಯಕರು ಶಕ್ತಿ ದೇವರು ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಜಾಧ್ವನಿ ಬಸ್​ ಯಾತ್ರೆ ಆರಂಭಿಸಿದರು. ಸಮಾರಂಭದಲ್ಲಿ ಸೇರಿದ್ದ ಅಪಾರ ಜನಸ್ತೋಮ ನೋಡಿ, ರಾಜ್ಯದಲ್ಲಿ ಮತ್ತೊಮ್ಮೆ 1999 ಇತಿಹಾಸ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುರುಡುಮಲೆ ವಿನಾಯಕನೆದುರು ಪ್ರಾರ್ಥನೆ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಳಬಾಗಿಲಿನ ಹೈದರಾಲಿ ದರ್ಗಾದಲ್ಲಿ ತಲೆಯ ಮೇಲೆ ಗಲಫ್ ಹೊತ್ತು ಪ್ರಾರ್ಥಿಸಿದರು. ನಂತರ ಮುಳಬಾಗಿಲು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪರಮೇಶ್ವರ್​ ಸೇರಿದಂತೆ ರಾಜ್ಯ ನಾಯಕರು ಕಪ್ಪಲಮಡಗು ಬಳಿ ಆಯೋಜಿಸಿದ್ದ ಸಮಾವೇಶಕ್ಕೆ ಆಗಮಿಸಿದರು. ಸಮಾವೇಶದಲ್ಲಿ ಸೇರಿದ್ದ ಜನರ ಕಡೆಗೆ ಡಿಕೆಶಿ ಜನರತ್ತ ಕೈಬೀಸಿ, ಸಂತಸ ವ್ಯಕ್ತಪಡಿಸಿದರು.

ಮುಳಬಾಗಿಲಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶ ಇತಿಹಾಸದ ಪುಟ ಸೇರಲಿದೆ. ಇಂಥ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ,​ ಪುರಂದರದಾಸರ ವಚನವನ್ನು ಹೇಳಿದರು. ಇದೇ ವೇಳೆ ತಮ್ಮ ಪಕ್ಷದ ಪ್ರಣಾಳಿಕೆಯ ಹೊಸ ಹೊಸ ಯೋಜನೆಗಳನ್ನು ಜನರ ಮುಂದಿಟ್ಟರು. ರೈತರ ಬೆಳೆದ ಬೆಳೆಗೆ ಯೋಗ್ಯ ಬೆಲೆ ನೀಡದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಾವು ಘೋಷಣೆ ಮಾಡಿರುವ ಯೋಜನೆಗಳಿಗೆ ಮಹಿಳೆಯರಿಂದ ಕೈ ಎತ್ತಿ ಎನ್ನುವ ಮೂಲಕ ಅಭಿಪ್ರಾಯ ಸಂಗ್ರಹಿಸಿದರು.

ಪ್ರಜಾಧ್ವನಿ ಸಮಾವೇಶಕ್ಕೆ ಮಹಿಳೆಯರು, ಯುವಕರು, ವೃದ್ದರು ಸೇರಿದಂತೆ ಸಹಸ್ರಾರು ಜನರು ಬಂದಿದ್ದರು. ಒಂದೆಡೆ ಸಮಾವೇಶ ನಡೆಯುತ್ತಿದ್ದರೆ ಮತ್ತೊಂದೆಡೆ ವೇದಿಕೆ ಪಕ್ಕದಲ್ಲೇ ಆಯೋಜನೆ ಮಾಡಿದ್ದ ಪಲಾವ್​ ಹಾಗೂ ಮೊಸರನ್ನ ಪಡೆಯಲು ಕಾರ್ಯಕರ್ತರು ಮುಗಿಬಿದ್ದರು. ಊಟಕ್ಕಾಗಿ ಮುಗಿಬಿದ್ದ ಜನರನ್ನು ನಿಯಂತ್ರಿಸಲಾಗದೇ ಪೊಲೀಸರು ಜನರಿಗೆ ಊಟ ಬಡಿಸಲು ಮುಂದಾದ್ರೆ, ಊಟ ಬಡಿಸುತ್ತಿದ್ದ ಜನರು ತಟ್ಟೆಗಳನ್ನು ಹಾರಿಬಿಡುತ್ತಿದ್ದರು. ತಟ್ಟೆ ಹಿಡಿದುಕೊಂಡ ಕಾರ್ಯಕರ್ತರು ಹರಸಾಹಸ ಪಟ್ಟು ಊಟ ಸವಿದರು.

ಕಾಂಗ್ರೆಸ್​ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್​ ಪಕ್ಷ ಬಡವರಿಗೆ ಹಾಗೂ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ, ಉಚಿತ ವಿದ್ಯುತ್​ ನೀಡುವ ಕುರಿತು ಬಿಜೆಪಿ ಟೀಕಿಸುತ್ತಿದೆ. ಅದಕ್ಕೆ ಹಣ ಎಲ್ಲಿ ಬರುತ್ತದೆ ಎಂದು ಟೀಕಿಸುತ್ತಿದ್ದಾರೆ. ಆದರೆ ಅದಕ್ಕೆ ಹಣ ಹೊಂದಿಸೋದು ನಮಗೆ ಗೊತ್ತು. ನಮ್ಮ ಸರ್ಕಾರದಲ್ಲಿ 40 ಪರ್ಸೆಂಟ್​ ಹಣ ಪಡೆಯುವ ನಾಯಕರಿಲ್ಲ. ಹಾಗಾಗಿ ಜನರ ತೆರಿಗೆ ಹಣವನ್ನು ಜನರಿಗೆ ಕೊಡುತ್ತೇವೆ ಎಂದರು.

ಮುಳಬಾಗಿಲು ಸಮಾವೇಶ ಮುಗಿದ ಬಳಿಕ ಕೆಜಿಎಫ್​ನಗರದ ಮುನಿಸಿಪಲ್​ ಗ್ರೌಂಡ್​ನಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶ ಕಾರ್ಯಕ್ರಮಕ್ಕೆ ನಾಯಕರ ದಂಡು ಭಾಗವಹಿಸಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಿಡಿ ಪ್ರಕರಣ: ಸಿಬಿಐಗೆ ತನಿಖೆ ಕುರಿತು ಜಾರಕಿಹೊಳಿ ಮಾತುಕತೆ ನಡೆಸಿಲ್ಲ- ಪ್ರಹ್ಲಾದ್ ಜೋಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.