ETV Bharat / state

ಕೋಲಾರ: ಕೂಲಿ ಹಣ ಕೇಳಿದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

author img

By ETV Bharat Karnataka Team

Published : Oct 21, 2023, 1:30 PM IST

ಕೋಲಾರ ಜಿಲ್ಲೆಯಲ್ಲಿ ಕೂಲಿ ಕೆಲಸದ ಹಣ ಕೇಳಿದ ದಲಿತ ಯುವಕನಿಗೆ ಥಳಿಸಿದ ಘಟನೆ ನಡೆದಿದೆ.

ದಲಿತ ಯುವಕನ ಮೇಲೆ ಗಂಭೀರ ಹಲ್ಲೆ
ದಲಿತ ಯುವಕನ ಮೇಲೆ ಗಂಭೀರ ಹಲ್ಲೆ

ಕೋಲಾರ: ಜಿಲ್ಲೆಯ ಬಂಗಾರಪೇಟೆಯಲ್ಲಿ ಕೂಲಿ ಹಣ ಕೇಳಿದ್ದಕ್ಕಾಗಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಅಮರೇಶ್ ಎಂಬುವನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಅಮರೇಶ್ ಗಾರೆ ಕೆಲಸ ಮಾಡಿಕೊಂಡಿದ್ದು, ಅದೇ ಗ್ರಾಮದ ಜಗದೀಶ್ ಸಿಂಗ್ ಎಂಬುವರ ಹೊಸ ಮನೆ ನಿರ್ಮಾಣದ ಕೆಲಸಕ್ಕೆ ಹೋಗುತ್ತಿದ್ದ.

ಅಲ್ಲಿ ಕೆಲಸ ಮಾಡಿದ್ದರಿಂದ ಕೂಲಿ ಕೇಳಿದ್ದಕ್ಕೆ ಜಗದೀಶ್ ಸಿಂಗ್ ಎಂಬುವರು ಅಮರೇಶ್ ಮೇಲೆ ಹಲ್ಲೆ ನಡೆಸಿದ್ದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಜಗದೀಶ್ ಸಿಂಗ್ ಜೊತೆಗೆ ರವೀಂದ್ರ ಸಿಂಗ್ ಹಾಗೂ ಸತೀಶ್ ಸಿಂಗ್ ಎಂಬುವರು ಸಹ ಹಲ್ಲೆ ನಡೆಸಿದ್ದಾರೆ. ಜೊತೆಗೆ ಮನೆಯ ಬಳಿ ಕರೆದುಕೊಂಡು ಹೋಗಿ ಹಗ್ಗದಿಂದ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ಗಾಯಗೊಂಡ ಅಮರೇಶನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಜಗದೀಶ್ ಸಿಂಗ್ ಹಾಗೂ ರವೀಂದ್ರ ಸಿಂಗ್ ಎಂಬುವರನ್ನು ಬಂಧಿಸಿದ್ದು, ಸತೀಶ್ ಸಿಂಗ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಜಿಲ್ಲೆಯ ಇತರ ಸುದ್ದಿ:

ಇನ್ನು ಜಿಲ್ಲೆಯಲ್ಲಿ ಸರಣಿಗಳ್ಳತನ, ದರೋಡೆ, ಹಲ್ಲೆಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಜಿಲ್ಲೆಯ ಮಾಲೂರಿನಲ್ಲಿ ಒಂಟಿ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ದರೋಡೆ ಮಾಡಿದ್ದು ಮಾತ್ರವಲ್ಲದೆ ನಂತರ ಸರಣಿ ಕಳ್ಳತನ ಮಾಡಿದ್ದಾರೆ. ಮಾಲೂರು ತಾಲೂಕಿನ ತೊಳಕನಹಳ್ಳಿ ಗ್ರಾಮದ ತೋಟದ ಒಂಟಿ ಮನೆಯಲ್ಲಿ ಗ್ರಾಮದ ಅರ್ಚಕ ದೊಡ್ಡನರಸಯ್ಯ ಮತ್ತು ಪತ್ನಿ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆ ಮೇಲೆ ಆರು ಜನ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಲಾಂಗು ಮಚ್ಚು ತೋರಿಸಿ ಅರ್ಚಕ ಹಾಗೂ ಅರ್ಚಕನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.

ಮನೆಯಲ್ಲಿದ್ದ ಸಾವಿರಾರು ರೂಪಾಯಿ ನಗನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ. ಇನ್ನು ಗಾಯಗೊಂಡ ಅರ್ಚಕ ಹಾಗೂ ಅವರ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಆರೋಪಿಗಳು ಅದೇ ಮಾರ್ಗ ಮಧ್ಯೆ ಯಟ್ಟಕೋಡಿ ಗ್ರಾಮದ ಬಳಿ‌ ಇರುವ ಮೂರು ಅಂಗಡಿಗಳಿಗೆ ನುಗ್ಗಿ ಮೂರು ಅಂಗಡಿಯಲ್ಲಿದ್ದ ಸುಮಾರು 15 ಲಕ್ಷ ಮೌಲ್ಯದ ಗುಟ್ಕಾ ಕದ್ದೊಯ್ದಿದ್ದಾರೆ. ಘಟನೆ ಕುರಿತು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮತ್ತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಯುವಕನ ಬರ್ಬರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.