ETV Bharat / state

ರಾಜ್ಯದ 1000 ಸ್ಮಾರಕಗಳನ್ನು ದತ್ತು ಕೊಡುವ ಉದ್ದೇಶವಿದೆ: ಸಚಿವ ಹೆಚ್ ಕೆ ಪಾಟೀಲ್

author img

By ETV Bharat Karnataka Team

Published : Nov 7, 2023, 10:14 PM IST

Etv Bharattourism-minister-hk-patil-reaction-on-monuments
ರಾಜ್ಯದ 1000 ಸ್ಮಾರಕಗಳನ್ನು ದತ್ತು ಕೊಡುವ ಉದ್ದೇಶವಿದೆ: ಸಚಿವ ಹೆಚ್ ಕೆ ಪಾಟೀಲ್

ಸಂಸ್ಕೃತಿ, ಪರಂಪರೆ ವಾರಸುದಾರರಾಗಿರುವ ನಾವು ಸ್ಮಾರಕಗಳನ್ನು ಹೆಮ್ಮೆಯಿಂದ ರಕ್ಷಿಸಬೇಕು ಎಂದು ಸಚಿವ ಹೆಚ್ ಕೆ ಪಾಟೀಲ್ ಕರೆ ನೀಡಿದರು.

ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ

ಕಲಬುರಗಿ: ರಾಜ್ಯದಲ್ಲಿ ಒಟ್ಟು 1000 ಸ್ಮಾರಕಗಳನ್ನು ದತ್ತು ಕೊಡುವ ಉದ್ದೇಶವಿದ್ದು, ಇದನ್ನು ಎರಡು ವರ್ಷದಲ್ಲಿ ಈಡೇರಿಸುವ ಆಸೆ ಇದೆ. ಈ ಎಲ್ಲ ಸ್ಮಾರಕಗಳ ರಕ್ಷಣೆ ಆ ಬಗ್ಗೆ ಪುಸ್ತಕಗಳ ಪ್ರಕಟಣೆ ಸೇರಿದಂತೆ ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ‌ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು. ನಮ್ಮ ಸ್ಮಾರಕದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಇತಿಹಾಸಕಾರರು ನಾಗಾವಿ ನಾಡಿನ ಗತವೈಭವ ಸಾರುವ ನಾಗಾವಿ ಘಟಿಕಾಸ್ಥಾನದ ಕುರಿತು ವಿವರಿಸುವಾಗ ನನಗೆ ಹಂಡೆ ಹಾಲು ಕುಡಿದಷ್ಟೇ ಸಂತಸವಾಯಿತು. ಕನ್ನಡದ ಮೊಟ್ಟ ಮೊದಲ ವಿಶ್ವವಿದ್ಯಾಲಯ ನಾಗಾವಿ ವಿವಿ ಎಂದು ತಿಳಿದು ಖುಷಿ ಪಟ್ಟೆ. ಎಲ್ಲರೂ ನಳಂದ ವಿವಿ ಮೊಟ್ಟಮೊದಲ ವಿವಿ ಎಂದು ಹೇಳುತ್ತಾರೆ. ಆದರೆ, ಕನ್ನಡದ ಮೊಟ್ಟಮೊದಲ ವಿಶ್ವವಿದ್ಯಾಲಯ ನಾಗಾವಿ ವಿವಿ ಇಲ್ಲಿ ಕಾನೂನು, ಗಣಿತ, ವೇದ, ಮನು ಸಾಹಿತ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿತ್ತು. ಸುಮಾರು 1800 ವರ್ಷಗಳ ಹಿಂದೆ ವಿವಿ ಕೆಲಸ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದೇ ಹಿರಿಮೆ ಎಂದು ಹೇಳಿದರು.

ಈ ನಾಡಿನ ಬಗ್ಗೆ ನಮಗೆಲ್ಲ ಅಭಿಮಾನ ಇರಬೇಕು. ಇಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಇದ್ದು ನಾವೆಲ್ಲ ಇದರ ವಾರಸುದಾರರು. ಹಾಗಾಗಿ ಈ ಸ್ಮಾರಕಗಳನ್ನು ನಾವೆಲ್ಲ ಹೆಮ್ಮೆಯಿಂದ ರಕ್ಷಿಸಬೇಕು. ಇವುಗಳ ರಕ್ಷಣೆಗೆ ಈಗಾಗಲೇ ಹಲವರು ಕೈಜೋಡಿಸಿದ್ದಾರೆ. ಇದು ಖುಷಿಯ ಸಂಗತಿಯಾಗಿದೆ.
ನಾಗಾವಿ ವಿವಿ ಪುನರುಜ್ಜೀವನ ಗೊಳ್ಳಬೇಕು ಇದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಸಚಿವ ಪ್ರಿಯಾಂಕ್ ಅವರಿಗೆ ಭರವಸೆ ನೀಡಿದ ಸಚಿವ ಪಾಟೀಲ್ ಮತ್ತೆ ಈ ವಿವಿಯನ್ನು ನಾವು ಕಟ್ಟಬೇಕು. ನಾಗಾವಿ ಹೆಸರನ್ನು ಯಾವುದೇ ವಿವಿಗೆ ಇಡುವ ಮೂಲಕ ಸಿಮಿತಗೊಳಿಸುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ಹಲವಾರು ವೈವಿದ್ಯತೆಗಳಿಂದ‌ ಕೂಡಿದೆ. ಪ್ರತಿ 150 ಕಿ.ಮೀಗಳಿಗೆ ಭಾಷೆ, ಆಚಾರ ವಿಚಾರ ಸಂಸ್ಕೃತಿ ಬದಲಾಗುತ್ತದೆ. ಹಾಗಾಗಿ ನಮ್ಮ ರಾಜ್ಯವನ್ನು ಒಂದು ರಾಜ್ಯ ಹಲವು ಜಗತ್ತುಗಳು ಎಂದೇ ಕರೆಯಲಾಗುತ್ತದೆ. ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ, ಇತಿಹಾಸ ಹಾಗೂ ಸ್ಮಾರಕಗಳನ್ನು ಜನರಿಗೆ ತಿಳಿಸಬೇಕಿದೆ. ಹುಲಿ ಸಂರಕ್ಷತ ಅರಣ್ಯ, ಅಪರೂಪದ ಸ್ಮಾರಕಗಳು ಸೇರಿದಂತೆ ಹಲವಾರು ಪ್ರಾಣಿಗಳ-ಪಕ್ಷಿಗಳ ರಕ್ಷಿತಾರಣ್ಯ ಇದೆ. ಈ ಎಲ್ಲವೂ ನಮ್ಮ ಸಂಸ್ಕೃತಿಯ ಭಾಗವಾಗಿವೆ. ಈ ಎಲ್ಲವೂಗಳನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲರಿಗೂ ಇದೆ. ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಮತ್ತಿತರರು ಇದ್ದರು.

ಇದನ್ನೂ ಓದಿ: ಸಿದ್ದರಾಮಯ್ಯರಿಂದ ಹಾಸನಾಂಬೆ, ಸಿದ್ದೇಶ್ವರಸ್ವಾಮಿ ದೇವರ ದರ್ಶನ; ಮಳೆಗಾಗಿ ಸಿಎಂ ಪ್ರಾರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.