ETV Bharat / state

ಸಿದ್ದರಾಮಯ್ಯರಿಂದ ಹಾಸನಾಂಬೆ, ಸಿದ್ದೇಶ್ವರಸ್ವಾಮಿ ದೇವರ ದರ್ಶನ; ಮಳೆಗಾಗಿ ಸಿಎಂ ಪ್ರಾರ್ಥನೆ

author img

By ETV Bharat Karnataka Team

Published : Nov 7, 2023, 6:00 PM IST

Updated : Nov 7, 2023, 7:14 PM IST

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಹಾಸನಾಂಬೆ ದೇವಿ ಮತ್ತು ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದು ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ಹಾಸನಾಂಬೆ, ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಹಾಸನಾಂಬೆ, ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಾಲಯಕ್ಕೆ ಭೇಟಿ ಕೊಟ್ಟ ಸಿಎಂ ಸಿದ್ದರಾಮಯ್ಯ

ಹಾಸನ: ಸಿಎಂ ಸಿದ್ದರಾಮಯ್ಯನವರು ಮಂಗಳವಾರ ಹಾಸನಾಂಬೆ ದೇವಿ ಮತ್ತು ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದು ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ದೇವರ ದರ್ಶನದ ಬಳಿಕ ಮಾತನಾಡಿ, ಉಸ್ತುವಾರಿ ಸಚಿವ ರಾಜಣ್ಣ ಅವರು ನನಗೆ ಹಾಸನಾಂಬೆ ದೇವಿಯ ಪೂಜೆ ಇದೆ, ಆಶೀರ್ವಾದ ಪಡೆಯಿರಿ ಎಂದು ಹೇಳಿದರು. ಹೀಗಾಗಿ ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನ ಪಡೆದಿದ್ದೇನೆ. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಹಾಸನಾಂಬೆ ಪೂಜೆ ಚೆನ್ನಾಗಿ ಆಗಿದೆ. ಲಕ್ಷಾಂತರ ಜನರು ಭಾಗಿಯಾಗಿ ಹಾಸನಾಂಬೆಯ ಕೃಪೆಯನ್ನು ಪಡೆದಿದ್ದಾರೆ. ಹಾಸನಾಂಬೆ ದೇವಿ ಐತಿಹಾಸಿಕ ಮಹತ್ವ ಹೊಂದಿದ್ದು, ದೇವಾಲಯದ ಸಮೀಪವೇ ಸಿದ್ದೇಶ್ವರಸ್ವಾಮಿ ದೇವಾಲಯ ಇದೆ. ಎರಡೂ ದೇವರ ಆಶೀರ್ವಾದ ಬೇಡಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ. ರಾಜ್ಯದಲ್ಲಿ ಬರಗಾಲ ಇದೆ. ಹಿಂಗಾರು ಮಳೆಯಾದರೂ ಆಗಿ ರೈತರಿಗೆ ಅನುಕೂಲ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ವರ್ಷ ತೀವ್ರ ಬರಗಾಲ ಇದೆ. 214 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದ್ದೇವೆ. ಇಡೀ ರಾಜ್ಯ ಬರಗಾಲಕ್ಕೆ ತುತ್ತಾದ ಕಾಲ ಇರಲಿಲ್ಲ. ಶೇಕಡಾ 50ಕ್ಕೂ ಹೆಚ್ಚು ಪ್ರಮಾಣದ ಬೆಳೆ ನಷ್ಟವಾಗಿದೆ. ಪರಿಹಾರಕ್ಕೆ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೆವು. ಕೇಂದ್ರ ಸರ್ಕಾರದ ನಾಲ್ಕು ತಂಡದವರು ಬರ ಪ್ರವಾಸ ಮಾಡಿ, ಅಧಿಕಾರಿಗಳಿಂದ ಜನರಿಂದ ಮಾಹಿತಿ ಪಡೆದು ಹೋಗಿದ್ದಾರೆ.

ಅವರು ಭೇಟಿ ನೀಡಿ 20 ದಿನ ಆಗಿದೆ, ಈವರೆಗೆ ಅವರು ವರದಿ ಕೊಟ್ಟಿದ್ದಾರೊ ಇಲ್ಲವೊ ಗೊತ್ತಿಲ್ಲ. ಇದುವರೆಗೆ ಕೇಂದ್ರ ಸರ್ಕಾರ ಗೈಡ್​​ ಲೈನ್ ಪ್ರಕಾರ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಬೆಳೆ ನಷ್ಟ ಆಗಿರೋದು 33 ಸಾವಿರದ 700 ಕೋಟಿ ಆಗಿದೆ. ನಾವು 17,900 ಕೋಟಿ ಪರಿಹಾರ ಕೇಳಿದ್ದೇವೆ. ಕೆಲವರು ಕೇಂದ್ರ ರಾಜ್ಯಕ್ಕೆ ಉಚಿತವಾಗಿ ಕೊಡ್ತಾರೆ ಎಂದು ತಪ್ಪು ತಿಳಿದಿದ್ದಾರೆ. ನಮ್ಮ ರಾಜ್ಯದಿಂದ 4 ಲಕ್ಷ ಕೋಟಿ ಹಣ ತೆರಿಗೆ ಸಂಗ್ರಹ ಆಗುತ್ತೆ. ರಾಷ್ಟ್ರೀಯ ಹಣಕಾಸು ಆಯೋಗ 5 ವರ್ಷಕ್ಕೆ ಒಮ್ಮೆ ವರದಿ ಕೊಡುತ್ತಾರೆ. ಬರ ಆದಾಗ ಏನು ಮಾಡಬೇಕು ಎಂದು ವರದಿ ನೀಡುತ್ತಾರೆ. ಹಾಗಾಗಿ ನಮ್ಮ ಪಾಲಿನ ಹಣ ಕೇಳುತ್ತಿರುವುದು. ಎನ್.ಡಿ.ಆರ್.ಎಫ್ ಮಾನದಂಡದಡಿ ನಾವು ಪರಿಹಾರ ಕೇಳುತ್ತಿದ್ದೇವೆ. ನಾವೇನು ಜಗಳ ಮಾಡ್ತಾ ಇಲ್ಲ, ಕೇಳ್ತಾ ಇದೀವಿ ಅಷ್ಟೆ ಅಲ್ವಾ ಎಂದರು.

ನಮ್ಮ ಸಚಿವರು ಕೇಂದ್ರಕ್ಕೆ ಹೋಗಿ ಭೇಟಿ ಮಾಡಲು ಮುಂದಾದರೆ ಸಮಯ ಕೊಡಲಿಲ್ಲ. ಕಡೆಗೆ ನಾನು ಅಧಿಕಾರಿಗಳನ್ನಾದರು ಭೇಟಿ ಮಾಡಲು ಹೇಳಿದೆ. ಹಾಗಾಗಿ ಭೇಟಿ ಮಾಡಿ ಮನವಿ ಮಾಡಿ ಬಂದಿದ್ದಾರೆ. ಹೀಗಾದ್ರೆ ಏನು ಮಾಡಬೇಕು ಹೇಳಿ? ವಿರೋಧ ಪಕ್ಷದವರು ಜಗಳ‌ ಮಾಡಬೇಡಿ ಅಂತಾರೆ. ನಾವು ಯಾಕೆ ಜಗಳ ಮಾಡೋಣ, ನಮಗೆ ಕೆಲಸ ಇಲ್ವಾ. ಹಾಸನಾಂಬೆ ಎಲ್ಲರಿಗೂ ಒಳ್ಳೆಯದು ಮಾಡಲಿ. ಎನ್​.ಡಿ.ಆರ್​.ಎಫ್ ಮಾನದಂಡ ಬದಲಾಯಿಸಲು ನಾವು ಪತ್ರ ಬರೆದಿದ್ದೇವೆ. ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: ಮೋದಿ ನನ್ನ ಬಗ್ಗೆ ಮಾತನಾಡಬಹುದಾ? ಅವರಿಗೆ ನನ್ನ ಬಗ್ಗೆ ಭಯ ಇರಬಹುದೇನೋ : ಸಿಎಂ ಸಿದ್ದರಾಮಯ್ಯ

Last Updated : Nov 7, 2023, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.