ETV Bharat / state

ಕಲಬುರಗಿಯಲ್ಲಿ ಮುಂದುವರೆದ ಭೂಕಂಪನ: ನೆರವಿಗೆ ಧಾವಿಸುವಂತೆ ಜಿಲ್ಲಾಡಳಿತಕ್ಕೆ ಜನರ ಮನವಿ

author img

By

Published : Jan 13, 2022, 10:19 PM IST

earthquake-in-kalaburagi
ಕಲಬುರಗಿಯಲ್ಲಿ ಮುಂದುವರೆದ ಭೂಕಂಪನ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಭೂಕಂಪನ ಸಂಭವಿಸುತ್ತಿದೆ. ಕಂಪನದ ಜೊತೆಗೆ ಭೂಮಿಯಿಂದ ಬರುತ್ತಿರುವ ಭಾರಿ ಶಬ್ದ ಜನರನ್ನು ಅಕ್ಷರಶಃ ಬೆಚ್ಚಿಬಿಳಿಸುತ್ತಿದೆ.

ಕಲಬುರಗಿ: ಅದು ಭೂಕಂಪನಕ್ಕೆ ಗಡ ಗಡ ನಡುಗುತ್ತಿರುವ ಗ್ರಾಮ. ಕಂಪನ, ಭಾರಿ ಶಬ್ದಕ್ಕೆ ಬೆಚ್ಚಿಬಿದ್ದಿರುವ ಜನರು ಪ್ರಾಣ ಉಳಿಸಿಕೊಳ್ಳಲು ಹುಟ್ಟುರನ್ನೇ ತೊರೆದಿದ್ರು. ಇದನ್ನೆಲ್ಲಾ ಮನಗಂಡ ಕಂದಾಯ ಸಚಿವ ಆರ್. ಆಶೋಕ್ ಅವರು ಗ್ರಾಮಕ್ಕೆ ಭೇಟಿ ನೀಡಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದ್ರೀಗ ಸರ್ಕಾರ ಹಣ ನೀಡಿದೆ. ಆದರೆ, ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ಜಿಲ್ಲಾಡಳಿತ ಶೆಡ್ ನಿರ್ಮಾಣ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ.


ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಭೂ ಕಂಪನ ಸಂಭವಿಸುತ್ತಿದೆ. ಕಂಪನದ ಜೊತೆಗೆ ಭೂಮಿಯಿಂದ ಬರುತ್ತಿರೋ ದೊಡ್ಡ ಪ್ರಮಾಣದ ಶಬ್ದ ಜನರನ್ನು ಬೆಚ್ಚಿಬೀಳಿಸುತ್ತಿದೆ. ಆದರೆ, ಕಳೆದ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಭೂಕಂಪನ ಹೆಚ್ಚಾಗಿದ್ದು, ಕಂಪನದ ತೀವ್ರತೆಗೆ ಗ್ರಾಮದಲ್ಲಿ ನೂರಾರು ಮನೆಗಳು ಜಖಂ ಆಗಿವೆ. ಹತ್ತಾರು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.

ನಿರಂತರ ಕಂಪನಕ್ಕೆ ಬೆದರಿದ ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಗಂಟುಮೂಟೆಗಳೊಂದಿಗೆ ಊರು ತೊರೆದಿದ್ರು‌‌. ಇಷ್ಟಾದ್ರೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿತ್ತು. ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಬೇಸತ್ತು ಗ್ರಾಮಸ್ಥರು ಕಲಬುರಗಿ-ಚಿಂಚೋಳಿ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ದ ಆಕ್ರೋಶ ಹೊರಹಾಕಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ, ಸರ್ಕಾರ ಗ್ರಾಮದತ್ತ ಮುಖ ಮಾಡಿದ್ದು, ಖುದ್ದು ಕಂದಾಯ ಸಚಿವ ಆರ್. ಅಶೋಕ್ ಕೂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ರು.

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವ ಅಶೋಕ್, ಮನೆಗಳ ಮುಂಭಾಗದಲ್ಲಿ ತಾತ್ಕಾಲಿಕ ಟಿನ್ ಶೆಡ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಟಿನ್ ಶೆಡ್​ಗಳ ನಿರ್ಮಾಣಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿ ಜಿಲ್ಲಾಡಳಿತದ ಅಕೌಂಟ್​ಗೆ 3 ಕೋಟಿ ರೂ ಹಣ ಜಮಾ ಕೂಡ ಮಾಡಿದೆ. ಆದರೆ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ಹಣ ಬಂದು ಒಂದು ತಿಂಗಳಾಗ್ತಿದ್ರೂ ಜಿಲ್ಲಾಡಳಿತ ಟಿನ್ ಶೆಡ್ ನಿರ್ಮಾಣ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ.

ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿದ್ದು, ಗಡಿಕೇಶ್ವರ ಗ್ರಾಮದಲ್ಲಿನ 1047 ಮನೆಗಳ ಪೈಕಿ 853 ಮನೆಗಳು ಭೂ ಕಂಪನಕ್ಕೆ ಬಿರುಕು ಬಿಟ್ಟು ಜಖಂ ಆಗಿವೆ. ಹೀಗಾಗಿ, 853 ಮನೆಗಳ (ಕುಟುಂಬಗಳ) ಮುಂಭಾಗ ಅಥವಾ ಸುತ್ತಮುತ್ತ ಖಾಲಿ ಇರುವ ಜಾಗದಲ್ಲಿ 10x10 ಜಾಗದಲ್ಲಿ ಪ್ರತಿ ಶೆಡ್​ಗೆ 23,500 ರೂ. ಖರ್ಚು ಮಾಡಿ ಶೆಡ್ ನಿರ್ಮಾಣ ಮಾಡಿಕೊಡಲು ಸರ್ಕಾರ 3 ಕೋಟಿ ಹಣ ಬಿಡುಗಡೆ ಮಾಡಿದೆ.

ಜಿಲ್ಲಾಧಿಕಾರಿಗಳ ವಿಪತ್ತು ಪರಿಹಾರ ನಿಧಿಯಲ್ಲಿ ಹಣ ಜಮಾ ಆಗಿ ಒಂದು ತಿಂಗಳು ಕಳೆಯುತ್ತಿದ್ರೂ, ಈವರೆಗೆ ಟೆಂಡರ್ ಪ್ರಕ್ರಿಯೆ ಆರಂಭ ಆಗಿಲ್ಲ. ಹೀಗಾಗಿ, ಜಿಲ್ಲಾಡಳಿತದ ಬೇಜವಾಬ್ದಾರಿ, ನಿರ್ಲಕ್ಷ್ಯತನಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದು, ಶೀಘ್ರ ಟಿನ್ ಶೆಡ್​ಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡ್ತಿದ್ದಾರೆ. ಒಂದು ವೇಳೆ ವಿಳಂಬ ನೀತಿ ಮುಂದುವರೆಸಿದರೆ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ.. ಅಂದಿನಿಂದ ಇಂದಿನವರೆಗೆ ಏನೆಲ್ಲಾ ಬೆಳವಣಿಗೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.