ETV Bharat / state

ಕಳ್ಳತನ ಮಾಡಿದ್ದ ಹಣ ಹಂಚಿಕೆಯಲ್ಲಿ ಗಲಾಟೆ: ಸ್ನೇಹಿತನ ಕೊಲೆಗೈದವರು ಅರೆಸ್ಟ್

author img

By

Published : Aug 3, 2021, 8:22 AM IST

ಸ್ನೇಹಿತನನ್ನೆ ಕೊಲೆ ಮಾಡಿದ್ದ ಕಿರಾತಕರು ಅಂದರ್​
ಸ್ನೇಹಿತನನ್ನೆ ಕೊಲೆ ಮಾಡಿದ್ದ ಕಿರಾತಕರು ಅಂದರ್​

ಕಳೆದ ತಿಂಗಳು (ಜುಲೈ) 26 ರಂದು ನಗರ ಹೊರವಲಯದ ಕೆರಿ ಭೋಸಗಾ ಕ್ರಾಸ್ ಬಳಿ ಮಹೇಶ್ ಎಂಬಾತನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಐವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಕಲಬುರಗಿ: ಆತ ಖತರ್ನಾಕ್‌ ಕಳ್ಳ. ಮನೆ ಬಿಟ್ಟು ಕಳ್ಳತನವನ್ನೇ ಫುಲ್‌ಟೈಮ್ ಜಾಬ್ ಮಾಡಿಕೊಂಡು ಸ್ನೇಹಿತರೊಡನೆ ಮನೆಗಳಿಗೆ ಕನ್ನ ಹಾಕುತ್ತಿದ್ದ. ಅದೊಂದು ದಿನ ಕಳ್ಳತನ ಮಾಡಿದ್ದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದೆ.

ಸ್ನೇಹಿತನನ್ನೆ ಕೊಲೆ ಮಾಡಿದ್ದ ಆರೋಪಿಗಳ ಬಂಧನ​

ಕಳೆದ ತಿಂಗಳು 26 ರಂದು ನಗರ ಹೊರವಲಯದ ಕೆರಿ ಭೋಸಗಾ ಕ್ರಾಸ್ ಬಳಿ ಸುಲ್ತಾನಪುರ ಗ್ರಾಮದ ನಿವಾಸಿ ಹಾಗು ಕಳ್ಳತನ ಪ್ರಕರಣದ ಆರೋಪಿ ಮಹೇಶ್ ಎಂಬಾತನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಬಗೆಹರಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮಲ್ಲಿಕಾರ್ಜುನ ಅಲಿಯಾಸ್ ಕೋಳಿ‌ ಮಲ್ಲು, ಮಹ್ಮದ್ ಚಾಂದ್, ನಿಜಾಮ್, ಆಸೀಫ್ ಮತ್ತು ಕಿರಣ್ ಬಂಧಿತರು.

ಘಟನೆಯ ಹಿನ್ನಲೆ: ಹತ್ಯೆಯಾದ ಮಹೇಶ್ ಮತ್ತು ಐವರು ಆರೋಪಿಗಳು ಸೇರಿಕೊಂಡು ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಬಂದ ಹಣದಲ್ಲಿ ಸರಿಸಮಾನವಾಗಿ ಹಂಚಿಯಾಗದೇ ಇರೋದ್ರಿಂದ ಕೊಲೆಯಾದ ಮಹೇಶ್ ಮತ್ತು ಈ ಐವರ ಮಧ್ಯೆ ಜಗಳ ನಡೆದಿದೆ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಮಹೇಶ್, ಹೊರಬಂದ ಮೇಲೆ ನೀವು ನನಗೆ ಸರಿಸಮಾನ ಹಣ ಕೊಡದಿದ್ದರೆ ಪೊಲೀಸರಿಗೆ ತಿಳಿಸುತ್ತೇನೆ ಎಂದು ಧಮ್ಕಿ ಹಾಕಿದ್ದನಂತೆ. ಇದರಿಂದ ಕೆರಳಿದ ಮಲ್ಲಿಕಾರ್ಜುನ, ಮಹ್ಮದ್ ಚಾಂದ್, ನಿಜಾಮ್, ಆಸೀಫ್, ಮತ್ತು ಕಿರಣ್ ಸೇರಿಕೊಂಡು ಮಹೇಶ್‌ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ಹತ್ಯೆಯಾದ ಮಹೇಶನಿಗೆ ಮಡದಿ ಮತ್ತು ಎರಡು ಮಕ್ಕಳಿದ್ದಾರೆ. ಮೈಮುರಿದು ದುಡಿದು ಕುಟುಂಬ ನಿರ್ವಹಣೆ ಮಾಡೊದನ್ನು ಬಿಟ್ಟು ಕಳ್ಳತನ ಮಾಡುವುದನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿದ್ದ ಮಹೇಶ್‌ ಮನೆಗೆ ಬರದೇ ಬೀದಿಯಲ್ಲೆ ಕಾಲ ಕಳೆಯುತ್ತಿದ್ದನಂತೆ. ಕಳ್ಳತನ ಪ್ರಕರಣದಲ್ಲಿ ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಸಹ ಕಳ್ಳತನ ಮಾಡುವುದನ್ನು ಬಿಟ್ಟಿರಲಿಲ್ಲ.

ಈ ಬಗ್ಗೆ ಮಹೇಶನ ಕುಟುಂಬಸ್ಥರಲ್ಲದೇ ನೆರೆಹೊರೆಯವರು ಮತ್ತು ಪೊಲೀಸರು, ಕಳ್ಳತನ ಮಾಡುವುದನ್ನು ಬಿಟ್ಟು ಬೇರೆ ಏನಾದರು ಉದ್ಯೋಗ ಮಾಡು ಅಂತ ಬುದ್ದಿವಾದ ಹೇಳಿದ್ದರಂತೆ. ಆದರೆ ಮಹೇಶ್ ಮಾತ್ರ ಬುದ್ದಿ ಮಾತುಗಳನ್ನ ಕೇಳದೆ ಸ್ನೇಹಿತರ ಜೊತೆಗೂಡಿ ಕಳ್ಳತನ ಮಾಡುತ್ತಿದ್ದ.‌ ಆದರೆ ಕಳ್ಳತನ ಮಾಡಿದ್ದ ಬಂದ ಹಣ ಹಂಚಿಕೆ ವಿಚಾರದಲ್ಲಿ ಸ್ನೇಹಿತರೇ ಪರಲೋಕಕ್ಕೆ ದಾರಿ ತೋರಿಸಿ ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಸಹೋದರಿಯರ ಹತ್ಯೆ ಪ್ರಕರಣ​... ಅಕ್ಕನ ಗಂಡನೇ ಕೃತ್ಯವೆಸಗಿದ ಆರೋಪಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.