ETV Bharat / state

ಕೈತಪ್ಪಿದ ಟಿಕೆಟ್​.. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್ ರಾಜೀನಾಮೆ, ಹಲವರಲ್ಲಿ ಅಸಮಾಧಾನ

author img

By

Published : Mar 28, 2023, 10:23 PM IST

Updated : Mar 28, 2023, 10:49 PM IST

ಎಂ ಎಂ ಹಿರೇಮಠ್
ಎಂ ಎಂ ಹಿರೇಮಠ್

ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್​ಗೆ ಟಿಕೆಟ್​ ತಪ್ಪಿದೆ. ಹೀಗಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್

ಹಾವೇರಿ: ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸಮಾಧಾನದ ಹೊಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಂ ಹಿರೇಮಠ್​ಗೆ ಟಿಕೆಟ್ ತಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿರೇಮಠ್​ : ಕಳೆದ 30 ವರ್ಷದಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನಾಲ್ಕು ವರ್ಷದಿಂದ ಪಕ್ಷದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಮಧ್ಯೆ ಬೇಡ ಜಂಗಮ ಎಂದು ಎಸ್ಸಿ ಪ್ರಮಾಣಪತ್ರ ಸಹ ಪಡೆದಿದ್ದೇನೆ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿತನಾಗಿ ಅರ್ಜಿ ಸಹ ಸಲ್ಲಿಸಿದ್ದೇನೆ. ಆದರೆ ಪಕ್ಷ ನನ್ನ ಕೈಬಿಟ್ಟಿದೆ ಎಂದು ಹಿರೇಮಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಹೈಕಮಾಂಡ್​ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ ತಿಳಿಸಿದ್ದಾರೆ. ಈಗಾಗಲೇ ಪಕ್ಷದಲ್ಲಿ ಇದ್ದುಕೊಂಡು ನನಗೆ ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗುವುದಿಲ್ಲ. ಹೀಗಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ನಾನು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಟಿಕೆಟ್ ಅಕಾಂಕ್ಷಿ ಶಿವಕುಮಾರ್ ತಾವರಗಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಾನು ರಾಜೀನಾಮೆ ನೀಡಿದ ವಿಷಯ ತಿಳಿಯುತ್ತಿದ್ದಂತೆ ಹಲವು ಮುಖಂಡರು ದೂರವಾಣಿ ಕರೆ ಮಾಡಿದ್ದಾರೆ. ಪಕ್ಷ ಬಿಡದಂತೆ ತಿಳಿಸಿದ್ದಾರೆ. ಇದನ್ನ ಬುಧವಾರ ನಡೆಯುವ ನನ್ನ ಬೆಂಬಲಿಗರ ಸಭೆಯಲ್ಲಿ ಚರ್ಚಿಸುತ್ತೇನೆ. ನನ್ನ ಬೆಂಬಲಿಗರು ಯಾವ ನಿರ್ಣಯ ಕೈಗೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುವುದಾಗಿ ಹಿರೇಮಠ ಹೇಳಿದ್ದಾರೆ.

ಎಲ್ಲ ಸಹಜ ಸ್ಥಿತಿಗೆ ಬರುತ್ತದೆ-ರುದ್ರಪ್ಪ ಲಮಾಣಿ: ಈ ಹಿಂದೆ ಸಚಿವರಾಗಿದ್ದ ಮತ್ತು ಹಾವೇರಿ ಕ್ಷೇತ್ರದಲ್ಲಿ ಒಂದು ಬಾರಿ ಜಯ ಗಳಿಸಿದ್ದ ರುದ್ರಪ್ಪ ಲಮಾಣಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಲಭಿಸಿದೆ. ನಾನು ಸೇರಿದಂತೆ ಸುಮಾರು 10 ಜನ ಆಕಾಂಕ್ಷಿತರು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಹೈಕಮಾಂಡ್ ಒಬ್ಬರಿಗೆ ಟಿಕೆಟ್ ನೀಡುವುದಾಗಿ ತಿಳಿಸಿತ್ತು. ಅದರಲ್ಲಿ ನನಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಕ್ಕ ನಂತರ ಜಿಲ್ಲಾಧ್ಯಕ್ಷ ಎಂ. ಎಂ ಹಿರೇಮಠ ರಾಜೀನಾಮೆ ವಿಷಯ ಸಹ ತಿಳಿದಿದೆ. ಅವರು ಯಾಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಇದು ನಮ್ಮ ಮನೆಯಲ್ಲಿನ ಜಗಳ. ಮನೆ ಎಂದ ಮೇಲೆ ಪಕ್ಷ ಎಂದ ಮೇಲೆ ಈ ರೀತಿ ಇರುವುದೇ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿಕೊಂಡು ಎಲ್ಲ ಸಹಜ ಸ್ಥಿತಿಗೆ ಬರುತ್ತದೆ ಎಂಬ ವಿಶ್ವಾಸವನ್ನು ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ವ್ಯಕ್ತಪಡಿಸಿದ್ದಾರೆ.

ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ

ಶಿವಕುಮಾರ್ ತಾವರಗಿ ಅಸಮಾಧಾನ: ಈ ಮಧ್ಯೆ ಕಾಂಗ್ರೆಸ್‌ ಮತ್ತೊಬ್ಬ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿ ಶಿವಕುಮಾರ್ ತಾವರಗಿ ಸಹ ರುದ್ರಪ್ಪ ಲಮಾಣಿ ಅಭ್ಯರ್ಥಿ ಘೋಷಣೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರುದ್ರಪ್ಪ ಲಮಾಣಿ ಈಗಾಗಲೇ ಬ್ಯಾಡಗಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದಾರೆ. ಅವರು ಹಾವೇರಿಗೆ ಹೊರಗಿನ ಕ್ಷೇತ್ರದವರು. ಅವರಿಗೆ ಟಿಕೆಟ್ ನೀಡಿದ್ದು ತಪ್ಪು. ಕಾಂಗ್ರೆಸ್ ಹೈಕಮಾಂಡ್​ ಈ ಕೂಡಲೇ ಅಭ್ಯರ್ಥಿ ಬದಲಾವಣೆ ಮಾಡಬೇಕು. ಹಾವೇರಿ ಕ್ಷೇತ್ರದವನಾದ ನನಗೆ ಟಿಕೆಟ್ ನೀಡಬೇಕು ಎಂದು ಶಿವಕುಮಾರ್ ತಾವರಗಿ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಆರು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ತೀವ್ರ ಅಸಮಾಧಾನ ಪಕ್ಷದಲ್ಲಿ ಕಾಣಿಸಲಾರಂಭಿಸಿದೆ. ರಾಣೆಬೆನ್ನೂರು ಕ್ಷೇತ್ರಕ್ಕೆ ಕೆ.ಬಿ. ಕೋಳಿವಾಡ್ ಮಗ ಪ್ರಕಾಶ್ ಕೋಳಿವಾಡ್‌ಗೆ ಟಿಕೆಟ್ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಅಕಾಂಕ್ಷಿ ಜಟ್ಟೆಪ್ಪಗೌಡ ಅಸಮಾಧಾನಗೊಂಡಿದ್ದಾರೆ. ಹಿರೇಕೆರೂರಲ್ಲಿ ಯು. ಬಿ ಬಣಕಾರ್‌ಗೆ ಟಿಕೆಟ್ ಸಿಕ್ಕಿರುವುದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಹೆಚ್ ಬನ್ನಿಕೋಡ್‌ ಅವರ ಬೆಂಬಲಿಗರಿಗೆ ಇರಿಸು ಮುರಿಸು ತಂದಿದೆ.

ಮಾಜಿ ಸಚಿವ ಬಸವರಾಜ್ ಶಿವಣ್ಣನವರ್‌ಗೆ ಟಿಕೆಟ್: ಬ್ಯಾಡಗಿಯಲ್ಲಿ ಮಾಜಿ ಸಚಿವ ಬಸವರಾಜ್ ಶಿವಣ್ಣನವರ್‌ಗೆ ಟಿಕೆಟ್ ನೀಡಿರುವುದು ಕಳೆದ ಬಾರಿ ಸ್ಪರ್ಧಿಸಿ ಸೋತಿರುವ ಎಸ್. ಆರ್ ಪಾಟೀಲ್‌ಗೆ ಅಸಮಾಧಾನ ತಂದಿದೆ. ಹಾನಗಲ್‌ನಲ್ಲಿ ಹಾಲಿ ಶಾಸಕ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಿರುವುದು ಮಾಜಿ ಸಚಿವ ಮನೋಹರ್ ತಹಶೀಲ್ದಾರ್‌ಗೆ ಬೇಸರ ತರಿಸಿದೆ.

ಇನ್ನು ಶಿಗ್ಗಾಂವಿಯಲ್ಲಿ ಮಾತ್ರ ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಪ್ರಕಟಿಸದಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಆದರೆ ಅಲ್ಲಿಯೂ ಸಹ ಮೂರು ಬಾರಿ ಸೋತಿರುವ ಅಜ್ಜಂಪೀರ್ ಖಾದ್ರಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎನ್ನುತ್ತಿದ್ದಾರೆ. ಇನ್ನು ವಿನಯ ಕುಲಕರ್ಣಿ ಸ್ಪರ್ಧಿಸುವ ವಿಚಾರ ಪಕ್ಕಾ ಆಗಿಲ್ಲ. ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ನಿನ್ನೆಯಷ್ಟೇ ಕಾಂಗ್ರೆಸ್ ಸೇರಿರುವ ಮಾಜಿ ಸಂಸದ ಮಂಜುನಾಥ್ ಕುನ್ನೂರು ಹೆಸರುಗಳು ಅಕಾಂಕ್ಷಿತರಲ್ಲಿ ಹೆಚ್ಚು ಕೇಳಿ ಬರುತ್ತಿವೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವ ನಡೆ ಅನುಸರಿಸುತ್ತೆ. ಅಲ್ಲಿಯೂ ಸಹ ಅಸಮಾಧಾನ ಇದ್ದರೆ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಕಾಂಕ್ಷಿತರಲ್ಲಿ ಅಸಮಾಧಾನ ವ್ಯಕ್ತವಾದಂತಾಗಿದೆ. ಈ ಅಸಮಾಧಾನದ ಹೊಗೆ ಬರುವ ಚುನಾವಣೆಯಲ್ಲಿ ಯಾವ ಪರಿಣಾಮ ಬೀಳುತ್ತೆ ಎಂಬುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಸಿಎಂಗೆ ಶಕುನಿ ಎಂದ ಸುರ್ಜೇವಾಲಾ.. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು

Last Updated :Mar 28, 2023, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.