ETV Bharat / state

"ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ": ಖರ್ಗೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

author img

By

Published : Apr 27, 2023, 7:49 PM IST

cm-bommai-reacts-to-mallikarjun-kharge-statement
"ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ": ಖರ್ಗೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಕುರಿತು ಹೇಳಿರುವ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಖರ್ಗೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

ಶಿಗ್ಗಾಂವಿ (ಹಾವೇರಿ): ಪ್ರಧಾನಿ ಬಗ್ಗೆ ಅವರು ಆಡಿದ ಮಾತುಗಳು ಕಾಂಗ್ರೆಸ್‌ ಸಂಸ್ಕೃತಿ ತೋರಿಸುತ್ತದೆ. ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕೋಣನಕೆರೆಯಲ್ಲಿ ಮಾತನಾಡಿದ ಅವರು, "ರಾಷ್ಟ ದ್ರೋಹಿಗಳಿಗೆ, ಭಯೋತ್ಪಾದಕರಿಗೆ, ರಾಷ್ಟ್ರ ವಿರೋಧಿಗಳಿಗೆ, ಶಾಂತಿ ಕದಡುವವರಿಗೆ ಪ್ರಧಾನಿ ಮೋದಿ ಸಿಂಹ ಸ್ವಪ್ನವಾಗಿದ್ದಾರೆ. ಖರ್ಗೆ ಅವರಿಗೆ ಯಾಕೆ ಹಾಗೇ ಅನ್ನಿಸಿತೋ ಗೊತ್ತಿಲ್ಲ. ದೇಶದ ಪ್ರಧಾನಿಗಳಿಗೆ ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಈ ಹಿಂದೆ ಹೀಗೆಲ್ಲಾ ಮಾತನಾಡಿಯೇ ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಬಂದಿದೆ. ಕಾಂಗ್ರೆಸ್​ನವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ. ಹಿಂದಿನ ಅಮಲಿನಲ್ಲಿಯೇ ಇನ್ನೂ ಮಾತನಾಡುತ್ತಿದ್ದಾರೆ. ಕರ್ನಾಟಕ ಸುಸಂಸ್ಕೃತ ನಾಡು. ಎಲ್ಲರಿಗೂ ನಾವು ಗೌರವವನ್ನು ಕೊಡುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರಗಳ ಬಗ್ಗೆ ವಿರೋಧ ಇದ್ದರೂ ಅವರ ಹಿರಿತನಕ್ಕೆ ನಾವು ಗೌರವ ಕೊಡುತ್ತೇವೆ. ಹಿರಿಯರಾಗಿ ಅವರು ಈ ರೀತಿ ಮಾತನಾಡಿದ್ದು ಖೇದ ಅನ್ನಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್​​ಗೆ ಸೋಲಿನ ಭೀತಿ ಎದುರಾಗಿದೆ: ಅಮಿತ್ ಶಾ ವಿರುದ್ಧ ಕಾಂಗ್ರೆಸ್​​​ ನಾಯಕರಿಂದ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂದು ತಿಳಿದು ದೂರು ನೀಡುವುದು, ಚುನಾವಣಾ ಆಯೋಗಕ್ಕೆ ಹೋಗುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾನೂನು ಪ್ರಕಾರ ಏನು ಆಗಬೇಕೋ ಆಗುತ್ತದೆ. ಅದರಲ್ಲಿ ಯಾವುದೇ ಸತ್ಯ ಇಲ್ಲ, ಯಾವುದೇ ಹುರುಳಿಲ್ಲ. ದೂರು ತಿರಸ್ಕಾರವಾಗುತ್ತೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ರಾಜಕೀಯ ಪಕ್ಷವಾಗಿ ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ: ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತೋಳ್ಬಲ, ಹಣಬಲದಿಂದ ಚುನಾವಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಹಿಂದೆ ಹಲವಾರು ಸಂದರ್ಭಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಪೆಟ್ಟು, ನೋವು ಸಹ ಆಗಿದೆ. ಅದು ಆಗಬಾರದು ಎಂದು ನಮ್ಮ ರಕ್ಷಣೆಗೆ, ನಮ್ಮ ಮತದಾರರ ಸುರಕ್ಷತೆಗೆ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ರಾಜಕೀಯ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಇದರಲ್ಲಿ ಏನು ಬಹಳ ದೊಡ್ಡ ಅಪರಾಧ ಆಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೋ ಗೊತ್ತಿಲ್ಲ. ಚುನಾವಣಾ ಆಯೋಗ ತನ್ನ ಕೆಲಸ ಮಾಡುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದು ಖರ್ಗೆ ಸ್ಪಷ್ಟನೆ: ತಮ್ಮ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ, ನಾನು ಬಿಜೆಪಿಯ ಸಿದ್ಧಾಂತದ ಕುರಿತಂತೆ 'ಹಾವು ಇದ್ದಂತೆ' ಎಂದು ಅರ್ಥೈಸಿ ಹೇಳಿದ್ದೇನೆ. ನಾನು ಪ್ರಧಾನಿ ಮೋದಿಯವರನ್ನು ಕುರಿತಂತೆ ವೈಯಕ್ತಿಕವಾಗಿ ಹೇಳಿಲ್ಲ, ಅವರ ಸಿದ್ಧಾಂತ ಹಾವಿನಂತಿದೆ ಮತ್ತು ಅದನ್ನು ಮುಟ್ಟಲು ಪ್ರಯತ್ನಿಸಿದರೆ ನಿಮ್ಮ ಸಾವು ಖಚಿತ ಎಂದಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರ ಕುರಿತ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಸಾವು ಬಯಸುತ್ತಿರುವ ಕಾಂಗ್ರೆಸ್ ನಿರ್ಲಜ್ಜ ಪಕ್ಷ: ಕೇಂದ್ರ ಸಚಿವೆ ಸ್ಮೃತಿ‌ ಇರಾನಿ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.