ETV Bharat / state

ಹಾಸನ: ಭವಾನಿ ರೇವಣ್ಣಗೆ ಟಿಕೆಟ್​ ನೀಡುವಂತೆ ಸೂರಜ್​ ಮತ್ತು ಪ್ರಜ್ವಲ್​ ರೇವಣ್ಣ ಪರೋಕ್ಷ ಬೆಂಬಲ

author img

By

Published : Jan 28, 2023, 6:50 PM IST

Updated : Jan 28, 2023, 8:01 PM IST

sooraj revanna
ಸೂರಜ್​ ರೇವಣ್ಣ ಬೆಂಬಲ

ಹಾಸನದಲ್ಲಿ ಬವಾನಿ ರೇವಣ್ಣ ಸ್ಪರ್ಧಿಸುವ ಕುರಿತು ಚರ್ಚೆ - ಪರೋಕ್ಷವಾಗಿ ಸೂರಜ್​ ರೇವಣ್ಣ ಬೆಂಬಲ - ಕುಟುಂಬದವರಿಗೆ ಟಿಕೆಟ್​ ಕೊಡುವುದು ಒಳಿತು ಎಂಬ ಅಭಿಪ್ರಾಯ

ಭವಾನಿ ರೇವಣ್ಣಗೆ ಟಿಕೆಟ್​ ನೀಡುವಂತೆ ಸೂರಜ್​ ಮತ್ತು ಪ್ರಜ್ವಲ್​ ರೇವಣ್ಣ ಪರೋಕ್ಷ ಬೆಂಬಲ

ಹಾಸನ: ಭವಾನಿ ರೇವಣ್ಣಗೆ ಕೊಡಿ ಅಂತ ನಾನು ಹೇಳುತ್ತಿಲ್ಲ. ಜೆಡಿಎಸ್​​ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ನಮ್ಮ ಕುಟುಂಬದವರಲ್ಲೇ ಯಾರಿಗಾದರೂ ಒಬ್ಬರಿಗೆ ಟಿಕೆಟ್​ ನೀಡಿದರೆ ಪಕ್ಷವನ್ನು ಸುಲಭವಾಗಿ ಅಧಿಕಾರಕ್ಕೆ ತರಬಹುದು ಎಂಬುದು ನನ್ನ ಭಾವನೆ. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಪರೋಕ್ಷವಾಗಿ ತಾಯಿ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ವಿಧಾನಪರಿಷತ್​ ಸದಸ್ಯ ಸೂರಜ್​ ರೇವಣ್ಣ ಹೇಳಿದರು.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನ ಜಿಲ್ಲೆಯು ಜೆಡಿಎಸ್ ಭದ್ರಕೋಟೆಯಾಗಿದೆ. ಆದರೆ, ಕಳೆದ ಬಾರಿ ನಮ್ಮ ಅಸ್ತಿತ್ವ ಕಳೆದುಕೊಂಡಿದ್ದೇವೆ. ಈ ಬಾರಿಯಾದರೂ ನಾವು ಅದನ್ನು ವಾಪಸ್ ಪಡೆಯಬೇಕು. ಕ್ಷೇತ್ರದಲ್ಲಿ ಟಿಕೆಟ್​ ಗೊಂದಲಗಳಿ ಇರುವುದು ಸಹಜ. ಆದರೆ, ಟಿಕೆಟ್​ಗಾಗಿ ಜನರು ನಡೆಸುತ್ತಿರುವುದು ಪ್ರತಿಭಟನೆ ಅಲ್ಲ, ಇದೊಂದು ಒತ್ತಾಯ ಮಾತ್ರ ಎಂದು ಸೂರಜ್ ಸ್ಪಷ್ಟಪಡಿಸಿದರು.

ಇದು ಪ್ರತಿಭಟನೆ ಇಲ್ಲ, ಪಕ್ಷದ ಕಾರ್ಯಕರ್ತರ ನೋವಾಗಿದೆ. ಟಿಕೆಟ್​ ನೀಡಬೇಕೆಂದು ಕಾರ್ಯಕರ್ತರು ತಮ್ಮ ನೋವನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಒಬ್ಬ ಜವಾಬ್ದಾರಿ ನಾಯಕ ಬೇಕಾಗಿದ್ದಾರೆ. ಹಾಗಾಗಿ ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರು ಗೆದ್ದರೆ ಒಳಿತು ಎನ್ನುವುದು ಅವರ ಮಾತಾಗಿದೆ. ಹೀಗಾಗಿಯೇ ಅವರು ಒತ್ತಾಯ ಮಾಡುತ್ತಿದ್ದಾರೆ ಎಂದರು.

ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ಸಂಸದರು: ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಅಂತ ಸಂಸದರ ನಿವಾಸದ ಮುಂದೆ ಕಾರ್ಯಕರ್ತರು ಶಾಮಿಯಾನ ಹಾಕಿ ಭವಾನಿ ರೇವಣ್ಣರ ಭಾವಚಿತ್ರವನ್ನು ಹಿಡಿದು, ಪ್ರತಿಭಟನೆಗೆ ಮುಂದಾಗಿದ್ದರು, ಇದೇ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ತನಗೇನು ಗೊತ್ತೇ ಇಲ್ಲ ಎಂಬಂತೆ ಏನಿದು ಎಲ್ಲ ಯಾಕೆ ಬಂದು ಇಲ್ಲಿ ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದೀರಾ ಅಂತೆಲ್ಲಾ ವಿಚಾರಿಸಿ, ಕೊನೆಗೆ ನಿಮ್ಮ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಬಂದಿದ್ದವರಿಗೆ ಸಮಾಧಾನ ಹೇಳಿದರು.

ವರಿಷ್ಠರ ಸಮ್ಮುಖದಲ್ಲಿ ಚರ್ಚೆ ನಡೆಸಿ ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ದಯಮಾಡಿ ಈ ರೀತಿ ಗೊಂದಲ ಸೃಷ್ಟಿ ಮಾಡುವುದು ಬೇಡ. ನಿಮ್ಮ ನೋವು ಕಷ್ಟ ನನಗೂ ಅರ್ಥವಾಗುತ್ತದೆ. ಆದರೆ ಇಂಥ ಸಮಯದಲ್ಲಿ ಈ ರೀತಿ ಪ್ರತಿಭಟನೆ ಮಾಡೋದು ಸರಿಯಲ್ಲ ಅಂತ ಮನವೊಲಿಸುವ ಪ್ರಯತ್ನ ಮಾಡಿದರು.

ಪ್ರಜ್ವಲ್​ ರೇವಣ್ಣ ಪ್ರತಿಕ್ರಿಯೆ: ಆ ಬಳಿಕ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ’’ನಂಗೇನು ಗೊತ್ತಿಲ್ಲ ಸರ್, ನನಗೆ ಯಾರೋ ಹೇಳಿದರು. ನಿಮ್ಮ ಮನೆ ಮುಂದೆ ಶಾಮಿಯಾನ ಹಾಕಿದ್ದಾರೆ ಅಂತ ನೋಡಲಿಕ್ಕೆ ಅಂತ ಬಂದೆ. ಆದರೆ ಈ ಎಲ್ಲ ಕಾರ್ಯಕರ್ತರು ಭವಾನಿ ರೇವಣ್ಣ ಅವರಿಗೆ ಟಿಕೆಟ್​ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದಾಗಿ ಗೊತ್ತಾಯಿತು’’ ಎಂದರು.

ಸೂರಜ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ: ಸೂರಜ್ ರೇವಣ್ಣ ಯಾವ ಸಂದರ್ಭದಲ್ಲಿ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂಬುದು ನಂಗೊತ್ತಿಲ್ಲ. ಆದರೆ ಜೆಡಿಎಸ್ ಭದ್ರಕೋಟೆ ಅಂತ ಕರೆಯೋದಕ್ಕೆ ಪ್ರಮುಖವಾಗಿ ಕಾರಣ ಕಾರ್ಯಕರ್ತರು ಮತ್ತು ರೇವಣ್ಣನವರು. ಈ ಚುನಾವಣೆಯಲ್ಲಿ ಕೂಡಾ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವಲ್ಲಿ ರೇವಣ್ಣ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಆ ದೃಷ್ಟಿ ಕೋನದಲ್ಲಿ ಮಾತನಾಡಿರಬಹುದು ಅಷ್ಟೇ ಎಂದು ಸಮಜಾಯಿಷಿ ಕೊಟ್ಟರು.

ಇನ್ನು ಭವಾನಿ ರೇವಣ್ಣ ನಿಂತರ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಇದು ಕೇವಲ ಸೂರಜ್ ರೇವಣ್ಣ ಮಾತ್ರ ಹೇಳೋದಲ್ಲ ಇಡೀ ಹಾಸನ ಜನ ಹೇಳುತ್ತಿದ್ದಾರೆ. ಪ್ರತಿ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ಕೂಡ ಪ್ರಚಾರ ಮಾಡುವ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುತ್ತಾರೆ. ಮುಂದಿನ ದಿನಗಳಲ್ಲಿ ಅವರು ಪಕ್ಷದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಅಂತ ನಿರ್ಧಾರ ಮಾಡುತ್ತಾರೆ, ಕಾದು ನೋಡೋಣ ಎಂದರು.

ಇದನ್ನೂ ಓದಿ: ನಿಮ್ಮ ಪಾರ್ಟಿ ಅವರನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ: ಸಿದ್ದರಾಮಯ್ಯಗೆ ಹೆಚ್​ಡಿಕೆ ಟಾಂಗ್

Last Updated :Jan 28, 2023, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.