ETV Bharat / state

ಹಾಸನ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದ ಪತಿ

author img

By ETV Bharat Karnataka Team

Published : Dec 31, 2023, 8:23 PM IST

husband-killed-wife-in-hasan
ಹಾಸನ : ಕ್ಷುಲ್ಲಕ ಕಾರಣಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಪಾಪಿ ಪತಿ

ಕೌಟುಂಬಿಕ ಕಲಹ ಹಿನ್ನೆಲೆ ಪತಿಯೋರ್ವ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ : ಕೌಟುಂಬಿಕ ಕಲಹ ಹಿನ್ನೆಲೆ ಪತಿಯೋರ್ವ ಪತ್ನಿಯನ್ನು ದಾರುಣವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಹುಬ್ಬಳ್ಳಿ ಮೂಲದ ಜ್ಯೋತಿ (22) ಎಂದು ಗುರುತಿಸಲಾಗಿದೆ. ರಾಂಪುರ ಗ್ರಾಮದ ಜೀವನ್​ ಕೊಲೆಗೈದ ಆರೋಪಿ ಎಂದು ಹೇಳಲಾಗಿದೆ.

ಮೃತ ಜ್ಯೋತಿ ಮತ್ತು ಜೀವನ್​ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಆರು ತಿಂಗಳ ಹಿಂದೆಯಷ್ಟೇ ಇಬ್ಬರು ಮದುವೆಯಾಗಿದ್ದರು. ಮದುವೆಯಾದ ಬಳಿಕ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ ಪತ್ನಿ ಮಾಡರ್ನ್​ ಬಟ್ಟೆ ತೊಡುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.

ಕಳೆದ ಡಿಸೆಂಬರ್​ 30ರಂದು ಜೀವನ್​, ಜ್ಯೋತಿಯನ್ನು ಡ್ರಾಪ್​ ನೀಡುವ ನೆಪದಲ್ಲಿ ಜೆಸಿಪುರದ ಬಳಿ ಇರುವ ರಾಂಪುರ ಅರಣ್ಯ ಪ್ರದೇಶದಲ್ಲಿ ಕರೆತಂದು ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಪತಿ ಜೀವನ್ ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಎಫ್​ಐಆರ್​ ವಿವರ : ರಾಂಪುರ ಗ್ರಾಮದ ಜೀವನ್​ ರಾಗಿ ಕಟಾವು ಯಂತ್ರವನ್ನು ನಿರ್ವಹಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಎರಡು ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುವಾಗ ಜ್ಯೋತಿ ಎಂಬರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಜೀವನ್​ ಕುರ್ಕೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಡಿಸೆಂಬರ್ 30ರಂದು ಸುಮಾರು ಮ. 3 ಗಂಟೆ ಹೊತ್ತಿಗೆ ರಾಂಪುರದಲ್ಲಿರುವ ಜಮೀನು ಒಂದರಲ್ಲಿ ಜೀವನ್​ ಮತ್ತು ಜ್ಯೋತಿ ಪರಸ್ಪರ ಜಗಳವಾಡುತ್ತಿದ್ದರು. ಈ ವೇಳೆ ಜೀವನ್​ ಜ್ಯೋತಿ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡ ಜ್ಯೋತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜ್ಯೋತಿ ಅವರ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಜೀವನ್​ ಮತ್ತು ಜ್ಯೋತಿ ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ, ಯಾವ ದುರುದ್ದೇಶ ಇಟ್ಟುಕೊಂಡಿದ್ದರು ಎಂಬುದು ಗೊತ್ತಿಲ್ಲ ಎಂದು ದೂರುದಾರರು ಎಫ್​ಐಆರ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೌಟುಂಬಿಕ ಕಲಹ: ಪತ್ನಿ, ಇಬ್ಬರು ಮಕ್ಕಳ ಭೀಕರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.