ETV Bharat / bharat

ಕೌಟುಂಬಿಕ ಕಲಹ: ಪತ್ನಿ, ಇಬ್ಬರು ಮಕ್ಕಳ ಭೀಕರ ಕೊಲೆ

author img

By ETV Bharat Karnataka Team

Published : Nov 20, 2023, 2:28 PM IST

triple murder in rajasthan; man killed wife and two daughters with hammer in jaipur
triple murder in rajasthan; man killed wife and two daughters with hammer in jaipur

Triple murder in Rajasthan: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ರಾಜಸ್ಥಾನ: ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜೈಪುರದ ಕರ್ಧಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರೋಪಿ ಅಮಿತ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಕೌಟುಂಬಿಕ ಕಲಹದಿಂದ ತ್ರಿವಳಿ ಕೊಲೆಗಳು ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಕರ್ಧಾನಿ ಪೊಲೀಸ್ ಠಾಣಾಧಿಕಾರಿ ಉದಯ್ ಸಿಂಗ್ ತಿಳಿಸಿದ್ದಾರೆ.

ಅಮಿತ್ ಕುಮಾರ್ ತನ್ನ ಕರ್ಧಾನಿ ಪ್ರದೇಶವೊಂದರಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮೂಲತಃ ಉತ್ತರ ಪ್ರದೇಶದ ಫತೇಪುರ್ ಮೂಲದವರಾಗಿದ್ದ ಇವರು, ಜೈಪುರದಲ್ಲಿ ಅಗರಬತ್ತಿ ತಯಾರಿಸುವ ಕೆಲಸ ಮಾಡುತ್ತಿದ್ದರು. ನವೆಂಬರ್ 17ರಂದು ರಾತ್ರಿ ಪತ್ನಿ ಹಾಗೂ ಹಿರಿಯ ಮಗಳನ್ನು ಕೊಂದ ಅಮಿತ್, ಶವಗಳನ್ನು ಕೋಣೆಯಲ್ಲಿಯೇ ಬಚ್ಚಿಟ್ಟಿದ್ದ. ನಂತರ ತನ್ನ ಕಿರಿಯ ಮಗಳೊಂದಿಗೆ ಅನುಮಾನ ಬರದಂತೆ ಓಡಾಡಿಕೊಂಡಿದ್ದ. ಭಾನುವಾರ ನಸುಕಿನ ವೇಳೆ ಆಕೆಯನ್ನು ಕೊಂದು, ಶವವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.

ಆರೋಪಿಯು ತರಾತುರಿಯಲ್ಲಿ ಮನೆಯಿಂದ ಹೊರಬಂದು ಮನೆಗೆ ಬೀಗ ಹಾಕುತ್ತಿರುವುದನ್ನು ಕಂಡ ನೆರೆಹೊರೆಯವರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆತನ ಮೊಬೈಲ್ ಸಿಗ್ನಲ್​ ಮೂಲಕ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಅಮಿತ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ. ಮುದ್ದಾದ ಇಬ್ಬರು ಮಕ್ಕಳಿದ್ದರು. ಕೆಲವು ಕಾರಣಾಂತರಗಳಿಂದ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಜೈಪುರದಲ್ಲಿ ಅಗರಬತ್ತಿಗಳನ್ನು ತಯಾರಿಸುತ್ತಿದ್ದರು. ಕೌಟುಂಬಿಕ ಕಾರಣಗಳಿಂದ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಈ ತ್ರಿವಳಿ ಕೊಲೆಗೆ ಇದೇ ಕಾರಣ ಇರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಉದಯ್ ಸಿಂಗ್ ಹೇಳಿದ್ದಾರೆ.

ಶನಿವಾರ ಪತ್ನಿ ಮತ್ತು ಹಿರಿಯ ಮಗಳು ಕಾಣದಿರುವ ಬಗ್ಗೆ ಸ್ಥಳೀಯರು ಕೇಳಿದಾಗ ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದನು. ಆದರೆ, ಮರುದಿನ ಇದ್ದಕ್ಕಿದ್ದಂತೆ ಮನೆಗೆ ಬೀಗ ಹಾಕಿ ಓಡಿ ಹೋಗಿದ್ದನು. ಇದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಮೂವರ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತ ದೇಹಗಳನ್ನು ಕಣ್ವಟಿಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಘಟನೆ ಕುರಿತು ಮೃತ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ 6 ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ ಭಗ್ನಪ್ರೇಮಿ; ಯುವತಿ ಸೇರಿ ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.