ETV Bharat / state

ಗಂಡು ಮಕ್ಕಳಿಗೆ ಮಿನಿ ಬಸ್ ವ್ಯವಸ್ಥೆಯನ್ನಾದ್ರೂ ಮಾಡಿ: ಮಾಜಿ ಸಚಿವ ಸಿ.ಸಿ. ಪಾಟೀಲ್

author img

By

Published : Jun 22, 2023, 9:49 PM IST

former-minister-cc-patil-slams-state-govt
ಗಂಡು ಮಕ್ಕಳಿಗೆ ಮಿನಿ ಬಸ್ ವ್ಯವಸ್ಥೆಯನ್ನಾದ್ರೂ ಮಾಡಿ : ಮಾಜಿ ಸಚಿವ ಸಿಸಿ ಪಾಟೀಲ್

ರಾಜ್ಯ ಕಾಂಗ್ರೆಸ್​ ಸರ್ಕಾರ ಸಾಲ ಮಾಡಿಯಾದರೂ ಲೋಕಸಭೆ ಚುನಾವಣೆಯವರೆಗೆ ಉಚಿತ ಯೋಜನೆ ಜಾರಿ ಮಾಡಲಿದೆ. ಚುನಾವಣೆ ನಂತರ ಎಲ್ಲ ಯೋಜನೆಗಳೂ ಬಂದ್ ಎಂಬ ಹೊಸ ಗ್ಯಾರಂಟಿ ಬರಲಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್​ ವ್ಯಂಗ್ಯವಾಡಿದ್ದಾರೆ.

ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿಕೆ

ಗದಗ : ಕಳಪೆ ಅಕ್ಕಿ ನಮಗೆ ಬೇಡ. ನಮ್ಮ ರಾಜ್ಯದ ಅಕ್ಕಿಯನ್ನೇ ಸರ್ಕಾರ ಖರೀದಿ ಮಾಡಬೇಕು. ಒಂದು ವೇಳೆ ಅಕ್ಕಿ ಕೊಡಲು ಆಗದಿದ್ದರೆ ಜನರ ಖಾತೆಗೆ ಹಣ ವರ್ಗಾವಣೆ ಮಾಡಿ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ರಾಜ್ಯದಲ್ಲೇ ಅಕ್ಕಿ ಖರೀದಿ ಮಾಡಬೇಕು. ಈ ಹಿಂದೆ ಗುಜರಾತ್​ ಹಾಲಿಗೆ ವಿರೋಧ ಮಾಡಿದ್ರಿ, ಈಗ ಬೇರೆ ರಾಜ್ಯದ ಅಕ್ಕಿ ಯಾಕೆ ಎಂದು ಪ್ರಶ್ನಿಸಿದರು.

ಗೃಹ ಜ್ಯೋತಿ ಯೋಜನೆ ವಿಚಾರವಾಗಿ ಮಾತನಾಡಿ, ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ರು. ಈ ಬಗ್ಗೆ ಇನ್ನೂ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ. ದಿನಕ್ಕೊಂದು ಮಾರ್ಪಾಡು ಮಾಡುತ್ತೀರಿ. ನನಗೂ ಉಚಿತ, ನನ್ನ ಧರ್ಮಪತ್ನಿಗೂ ಉಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದರು. ಅದರಂತೆ 200 ಯುನಿಟ್ ನೇರವಾಗಿ ಉಚಿತವಾಗಿ ಕೊಡಿ. 200 ಯುನಿಟ್​ಗಿಂತ ಹೆಚ್ಚು ಬಳಕೆಯಾದರೆ ಅದಕ್ಕೆ ಶುಲ್ಕ ವಿಧಿಸಿ. ಉಚಿತ ವಿದ್ಯುತ್​ ಕೊಡುವ ಮೊದಲು ವಿದ್ಯುತ್ ದರ ಕಡಿಮೆ ಮಾಡಿ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ಒತ್ತಾಯಿಸಿದರು.

ಸಂಪುಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದೀರಿ. ಮತಾಂತರ ಕಾಯ್ದೆ ವಾಪಸಾತಿಗೆ ನಿರ್ಣಯ ಮಾಡಿದ್ದೀರಿ. ಆದರೆ, ವಿದ್ಯುತ್ ದರ ಇಳಿಕೆ ಏಕೆ ಸಾಧ್ಯವಿಲ್ಲ? ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ ಅಂತೀರಿ. ಇದೇ ರೀತಿಯಾಗಿ ಈಡೇರಿಸಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಸಚಿವ ಸತೀಶ್ ಜಾರಕಿಹೊಳಿ ಸರ್ವರ್ ಹ್ಯಾಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವರೊಬ್ಬರು ಸರ್ವರ್ ಹ್ಯಾಕ್ ಮಾಡಿದ್ದಾರೆ ಅಂತಾರೆ. ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇವರ ಮಾತು ಕೇಳಿ ಸಚಿವ ಸಂಪುಟದ ಬಹುತೇಕ ಸಚಿವರಿಗೆ ಹುಚ್ಚು, ಮಬ್ಬು ಎರಡೂ ಹಿಡಿದಿದೆ ಅನ್ನಿಸುತ್ತಿದೆ. ಅಭಿವೃದ್ಧಿ ಕೆಲಸದ ಬಗ್ಗೆ ಏನಾದ್ರೂ ಮಾತಾಡಿದ್ದಾರಾ? ಮಹಿಳೆಯರಿಗೆ ಬಸ್ ಸಂಚಾರ ಉಚಿತ ಅಂತಾ ಹೇಳಿದ್ದೀರಿ. ಘೋಷಣೆ ಮಾಡಿದರೆ ಸಾಲದು, ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಹೆಣ್ಣಮಕ್ಕಳು, ತಾಯಂದಿರು ಓಡಾಡಲಿ. ಆದ್ರೆ ಗಂಡುಮಕ್ಕಳು ಮನೆಯಲ್ಲಿ ಕೂರುವ ಪರಿಸ್ಥಿತಿ ಇದೆ. ಗಂಡು ಮಕ್ಕಳಿಗೆ ಮಿನಿ ಬಸ್ ವ್ಯವಸ್ಥೆಯನ್ನಾದ್ರೂ ಮಾಡಿ ಎಂದು ಹೇಳಿದರು.

ಸಿದ್ದರಾಮಯ್ಯ ಆರ್ಥಿಕ ಸ್ಥಿರತೆಯ ಬಜೆಟ್ ಮಂಡಿಸಿದವರು. ಆದ್ರೆ ಕರ್ನಾಟಕದ ಹಣಕಾಸು ವ್ಯವಸ್ಥೆ ನೋಡದೇ ಉಚಿತ ಯೋಜನೆ ಘೋಷಿಸಿದರು. ವಿಧಾನಸಭೆಯ ಮೂರನೇ ಮಹಡಿಯ ಆಸೆಗೋಸ್ಕರ ಉಚಿತ ಯೋಜನೆ ಘೋಷಣೆ ಮಾಡಿದರು. ಸಾಲ ಮಾಡಿಯಾದ್ರೂ ಲೋಕಸಭಾ ಚುನಾವಣೆವರೆಗೂ ಈ ಯೋಜನೆ ತರಬಲ್ಲರು. ಚುನಾವಣೆ ನಂತರ ಎಲ್ಲ ಯೋಜನೆ ಬಂದ್ ಎಂಬ ಹೊಸ ಗ್ಯಾರಂಟಿ ಬರಲಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಗೆ ವಿರೋಧ ಪಕ್ಷದ ನಾಯಕ ಇಲ್ಲ ಅಂತಾರೆ. ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಾ ಅಂತಾ ಮೊದಲು ಸ್ಪಷ್ಟ ಪಡಿಸಲಿ. ನಮ್ಮ ವಿರೋಧ ಪಕ್ಷದ ನಾಯಕರನ್ನು ಯಾವಾಗ ಆರಿಸಬೇಕೋ ಆರಿಸಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ : ಶಕ್ತಿ ಯೋಜನೆಯಡಿ ಮಹಿಳೆಯರ ಭರ್ಜರಿ ಓಡಾಟ: ವಾಯುವ್ಯ ಸಾರಿಗೆಯಲ್ಲಿ ನಾರಿಯರ ಸಂಚಾರದಿಂದ ಆದ ಟಿಕೆಟ್​ ಮೌಲ್ಯ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.