ETV Bharat / state

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು: ಜಗದೀಶ್ ಶೆಟ್ಟರ್ ಟಾಂಗ್​

author img

By ETV Bharat Karnataka Team

Published : Nov 30, 2023, 4:07 PM IST

Updated : Nov 30, 2023, 4:30 PM IST

Former CM Jagadish Shettar
ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​

Jagadish Shettar counter against Pralhad Joshi: ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್​ ಉತ್ತಮ ಫಲಿತಾಂಶದೊಂದಿಗೆ ವಿಜಯ ಸಾಧಿಸಲಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ಸುಮ್ಮನೆ ಆರೋಪ ಮಾಡೋದು, ಪ್ರಚಾರ ತೆಗೆದುಕೊಳ್ಳುವುದನ್ನು ಬಿಟ್ಟರೆ ಇದರ ಹಿಂದೆ ಏನೂ ಇಲ್ಲ. ನೂರಕ್ಕೆ ನೂರು ಇದು ಆಧಾರ ರಹಿತ ಆರೋಪ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಆ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಶಶಿ ತರೂರ್ ಸಭೆಯಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಟಾಂಗ್​ ನೀಡಿ, ಶಶಿ ತರೂರ್​ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಕೇಂದ್ರ ಸಚಿವರಿಗೆ ಕನಸು ಬಿದ್ದಿತ್ತಾ? ಅವರಿಗೇನು ಅಂತರಾತ್ಮ ಇದೆಯಾ? ದೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯಾ ಎಂದು ಪ್ರಶ್ನೆ ಮಾಡಿದರು.

ಒಂದು ಸಾವಿರ ಕೋಟಿ ಕಲೆಕ್ಟ್ ಮಾಡಿ ತೆಲಂಗಾಣಕ್ಕೆ ರಾಜ್ಯ ಕಾಂಗ್ರೆಸ್ ನೀಡುತ್ತೆ ಅಂತ ಜೋಶಿ ಆರೋಪ ಮಾಡಿದ್ದರು. ಈಗ ಅದಕ್ಕೆ ಅವರು ಏನು ಉತ್ತರ ನೀಡುತ್ತಾರೆ. ಅವರು ಸುಮ್ಮನೆ ಆರೋಪ ಮಾಡುತ್ತಾರೆ. ಬೆಂಗಳೂರಿನಲ್ಲಿ ಸಿಕ್ಕ ಹಣ ಕಾಂಗ್ರೆಸ್ ಪಾರ್ಟಿಗೆ ಸೇರಿದ್ದು ಅಂತ ಜೋಶಿ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಳಿ‌ ಐಟಿ, ಇಡಿ, ಸಿಬಿಐ ಇದೆ. ಅದನ್ನು ತನಿಖೆ ಮಾಡಿ ಅದು ಯಾರ ಹಣ, ಅದು ಯಾರ ಮನೆ ಎನ್ನುವ ಮಾಹಿತಿ ಹೊರಗೆ ತರಲಿ. ದಾಳಿ ಆದಾಗ ಮಾತ್ರ ದೊಡ್ಡಕ್ಕೆ ಸುದ್ದಿಯಾಗುತ್ತದೆ. ನಂತರ ಏನಾಯ್ತು ಎನ್ನುವುದರ ಬಗ್ಗೆ ಸುದ್ದಿಯೇ ಇರುವುದಿಲ್ಲ ಎಂದು ಟಾಂಗ್​ ಕೊಟ್ಟರು.

ಕಾಂಗ್ರೆಸ್​ನಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಇದು ಸಾರ್ವಜನಿಕವಾಗಿ‌ ಚರ್ಚೆಯ ಮಾಡುವ ವಿಚಾರ ಅಲ್ಲ. ಆದರೆ, ಶಾಸಕರಿಗೆ ವೈಯಕ್ತಿಕ ಸಮಸ್ಯೆ ಆದಾಗ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಆ ರೀತಿ ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಅದನ್ನು ಸಿಎಂ ಕರೆದು ಚರ್ಚೆ ಮಾಡಿ ಸರಿ ಮಾಡುತ್ತಾರೆ. ನಿಗಮ ಮಂಡಳಿ ಆಯ್ಕೆ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ. ಯಾವುದೇ ಸರ್ಕಾರ ಬಂದಾಗ ಇಂತಹ ವಿಚಾರ ಬರೋದು ಸಹಜ. ಇದನ್ನು ಸರಿ ಮಾಡುವ ಕೆಲಸ ಸಹ ನಮ್ಮ ಪಕ್ಷದಲ್ಲಿ ನಡೆಯುತ್ತಿವೆ ಎಂದರು.

ರಾಜ್ಯ ಬಿಜೆಪಿ ಪಕ್ಷ ಸುಧಾರಣೆಯಾಗದಷ್ಟು ಹದಗೆಟ್ಟು ಹೋಗಿದೆ. ವಿಜಯೇಂದ್ರ ಅವರಲ್ಲ, ಬೇರೆ ಯಾರೇ ಅಧ್ಯಕ್ಷರಾಗಿ ಬಂದರೂ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಉತ್ತಮ ಫಲಿತಾಂಶದೊಂದಿಗೆ ವಿಜಯ ಸಾಧಿಸಲಿದೆ. ಮಧ್ಯಪ್ರದೇಶ, ಛತ್ತೀಸ್​ಗಢ ಎರಡೂ ಕಡೆಯೂ ಕಾಂಗ್ರೆಸ್​ಗೆ ಒಳ್ಳೆಯ ಫಲಿತಾಂಶ ಬರುತ್ತದೆ. ತೆಲಂಗಾಣದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯೆತಗಳಿವೆ. ರಾಜಸ್ಥಾನದಲ್ಲಿ ಎರಡೂ ಪಕ್ಷಗಳ ನಡುವೆಯೂ ಸಮಾನವಾದ ಫೈಟ್​ ಇದೆ ಎನ್ನುವ ವರದಿ ಇದೆ. ಆದರೆ, ಕಾಂಗ್ರೆಸ್​ ಹೆಚ್ಚಿನ ಸ್ಥಾನಗಳೊಂದಿಗೆ ವಿಜಯ ಸಾಧಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿ ಆರ್ ಪಾಟೀಲ್ ಜೊತೆ ಮಾತನಾಡಿದ್ದೇನೆ, ಅವರು ಅಧಿವೇಶನಕ್ಕೆ ಬರಲಿದ್ದಾರೆ: ಸಿಎಂ ಸಿದ್ದರಾಮಯ್ಯ

Last Updated :Nov 30, 2023, 4:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.