ETV Bharat / state

ಹುಬ್ಬಳ್ಳಿ ಬನಾರಸ್ ನಡುವೆ ಬೇಸಿಗೆಯ ವಿಶೇಷ ರೈಲು

author img

By

Published : Mar 16, 2023, 6:59 PM IST

ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ
ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ

ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.

ಹುಬ್ಬಳ್ಳಿ : ಬೇಸಿಗೆ ರಜೆಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಒಂದು ಟ್ರಿಪ್‌ ಬೇಡಿಕೆಯ ಮೇರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಬನಾರಸ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (07347 ಮತ್ತು 07348) ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ.

ರೈಲು ಸಂಖ್ಯೆ 07347 ಮಾರ್ಚ್ 27 (ಸೋಮವಾರ), 2023 ರಂದು ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8:30 ಗಂಟೆಗೆ ಹೊರಟು, ಬುಧವಾರ ಬೆಳಗ್ಗೆ 9:10 ಗಂಟೆಗೆ ಉತ್ತರ ಪ್ರದೇಶದ ಬನಾರಸ್ ನಿಲ್ದಾಣವನ್ನು ತಲುಪಲಿದೆ. ಪುನಃ ಇದೇ ರೈಲು (07348) ಮಾರ್ಚ್ 29 (ಬುಧವಾರ), 2023 ರಂದು ಬನಾರಸ್‌ನಿಂದ ರಾತ್ರಿ 8: 40 ಗಂಟೆಗೆ ಹೊರಡುವ ರೈಲು, ಶುಕ್ರವಾರ ಬೆಳಗ್ಗೆ 11: 45 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ, ವಿಜಯಪುರ, ಇಂಡಿ ರೋಡ, ಸೋಲಾಪುರ, ದೌಂಡ್, ಅಹ್ಮದನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಖಂಡ್ವಾ, ಇಟಾರಸಿ, ಪಿಪಾರಿಯಾ, ಜಬ್ಬಲ್‌ಪುರ, ಕಟನಿ, ಮೈಹಾರ್, ಸತನಾ, ಮಾಣಿಕ್‌ಪುರ, ಪ್ರಯಾಗರಾಜ್ ಚೌಕಿ ಜಂಕ್ಷನ್ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳು- ಎಸಿ ಟು-ಟೈರ್ (1), ಎಸಿ ತ್ರೀ-ಟೈರ್ (1), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ ಬೋಗಿಗಳು (10), ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟ್​ಗಳಿಂದ ಕೂಡಿದ ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು ಹೊಂದಿರುತ್ತದೆ.

ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳುವಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದಾರೂಢ ರೈಲು ನಿಲ್ದಾಣ ಗಿನ್ನಿಸ್​ ಪುಟ ಸೇರ್ಪಡೆ : ಇನ್ನೊಂದೆಡೆ ನೈಋತ್ಯ ರೈಲ್ವೆ ವಲಯದ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಈಗ ಮತ್ತೊಂದು ಗೌರವದ ಗರಿ ಮುಡಿಗೇರಿದೆ. ರೈಲು ನಿಲ್ದಾಣದಲ್ಲಿರುವ 1,507 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.

ವಿಶ್ವದ ಅತಿ ಉದ್ದನೆಯ ರೈಲ್ವೆ ಫ್ಲಾಟ್‌ಫಾರ್ಮ್ ಇದಾಗಿದೆ. ಮಾರ್ಚ್‌ 12ರಂದು ಧಾರವಾಡದಲ್ಲಿ ಏರ್ಪಡಿಸಲಾಗಿದ್ದ ಐಐಟಿ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಇಲೆಕ್ಟ್ರಿಕ್ ಇಂಜಿನ್ ಅಳವಡಿಸಿದ್ದ ಹುಬ್ಬಳ್ಳಿ-ದಾದರ್​ ಎಕ್ಸ್‌ಪ್ರೆಸ್ ಮತ್ತು ಬೆಳಗಾವಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲುಗಳಿಗೂ ಹಸಿರು ನಿಶಾನೆ ತೋರಿಸಿದ್ದರು.

ಗೋರಖ್​ಪುರ ನಿಲ್ದಾಣ ಹಿಂದಿಕ್ಕಿದ ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರಂದು ಲೋಕಾರ್ಪಣೆಗೊಳಿಸಿದ್ದಾರೆ.

10 ಮೀಟರ್‌ ಅಗಲ ಮತ್ತು 1,507 ಮೀಟರ್ ಉದ್ದ​ದ ಪ್ಲಾಟ್​ಫಾರ್ಮ್: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೂ ಮುನ್ನ 1ನೇ ಪ್ಲಾಟ್‌ಫಾರ್ಮ್‌ 550 ಮೀಟರ್‌ ಉದ್ದ ಹೊಂದಿತ್ತು. ಇದೀಗ ಈ ಪ್ಲಾಟ್‌ಫಾರ್ಮ್‌ನ್ನು ವಿಸ್ತರಿಸಿ 10 ಮೀಟರ್‌ ಅಗಲ ಮತ್ತು 1,505 ಮೀಟರ್ ಉದ್ದ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಇದು ಸದ್ಯ ವಿಶ್ವದ ಅತಿ ಉದ್ಧದ ರೈಲ್ವೆ ಪ್ಲಾಟ್​ಫಾರ್ಮ್ ಆಗಿ ದಾಖಲೆ ಬರೆದಿದೆ. ಈ ಮೂಲಕ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಿದೆ. ಈ ಮೊದಲು ವಿಶ್ವದ ಅತಿ ಉದ್ದದ ಪ್ಲಾಟ್​ಫಾರ್ಮ್ ಎಂಬ ಹೆಗ್ಗಳಿಕೆಯನ್ನು ಗೋರಖ್​ಪುರ ನಿಲ್ದಾಣ ಹೊಂದಿತ್ತು.

ಇದನ್ನೂ ಓದಿ : ಗಿನ್ನಿಸ್ ದಾಖಲೆಯ ಪುಟ ಸೇರಿದ ಹುಬ್ಬಳ್ಳಿಯ ಸಿದ್ದಾರೂಢ ರೈಲು ನಿಲ್ದಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.