ETV Bharat / state

NWKRTC: ಶ್ಲಾಘನೀಯ ಸೇವಾ ಪ್ರಶಸ್ತಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 503 ಸಿಬ್ಬಂದಿಗಳು ಆಯ್ಕೆ

author img

By

Published : Aug 14, 2023, 4:41 PM IST

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶ್ಲಾಘನೀಯ ಸೇವಾ ಪ್ರಶಸ್ತಿಗೆ 503 ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರ ಭರತ್ ಎಸ್. ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಎನ್‌ಡಬ್ಲ್ಯೂಕೆಆರ್‌ಟಿಸಿ) ಪ್ರಸ್ತುತ ವರ್ಷ 503 ಸಿಬ್ಬಂದಿಗಳು ಶ್ಲಾಘನೀಯ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಗದು ಬಹುಮಾನದ ಮೊತ್ತವನ್ನು ರೂ.500 ರಿಂದ ರೂ.2,000 ಕ್ಕೆ ಹೆಚ್ಚಿಸಿ ವ್ಯವಸ್ಥಾಪಕ ನಿರ್ದೇಶಕರ ಭರತ್ ಎಸ್. ಆದೇಶ ಹೊರಡಿಸಿದ್ದಾರೆ.

ಎನ್‌ಡಬ್ಲ್ಯೂಕೆಆರ್‌ಟಿಸಿ ವಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 9 ಸಾರಿಗೆ ವಿಭಾಗಗಳಿವೆ. ಒಟ್ಡು 20ಸಾವಿರಕ್ಕೂ ಹೆಚ್ಚು ನೌಕರರಿದ್ದಾರೆ. ಅವರಲ್ಲಿ ಸಂಸ್ಥೆ ಹಾಗೂ ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಶ್ಲಾಘನೀಯ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯ ದಿನಾಚರಣೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರತಿ ಪ್ರಕರಣಕ್ಕೆ ತಕ್ಕಂತೆ ಇದುವರೆಗೂ ರೂ.500ರ ವರೆಗೆ ನಗದು ಬಹುಮಾನ ಮಂಜೂರು ಮಾಡಲಾಗುತ್ತಿತ್ತು. ಸದರಿ ಮೊತ್ತವನ್ನು 1999ರಲ್ಲಿ ನಿಗದಿಪಡಿಸಿದ್ದು, ಕಳೆದ 15 ವರ್ಷಗಳಿಂದ ಪರಿಷ್ಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ರೂ.2,000 ಗಳಿಗೆ ಹೆಚ್ಚಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.

ಪ್ರಶಸ್ತಿಗೆ ಮಾನದಂಡಗಳು : ಏಪ್ರಿಲ್ 1 ರಿಂದ ಮಾರ್ಚ್ 31ರ ವರೆಗಿನ ಅವಧಿಯಲ್ಲಿ ಕನಿಷ್ಠ 258 ದಿನಗಳ ಹಾಜರಾತಿ ಹೊಂದಿರಬೇಕು. ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯಯುತ ನಡವಳಿಕೆ ಹೊಂದಿರಬೇಕು. ಅಪಘಾತ, ಅಪರಾಧ ಪ್ರಕರಣಗಳು ದಾಖಲಾಗಿರಬಾರದು. ಸಾರ್ವಜನಿಕ ದೂರುಗಳಿರಬಾರದು.

ಸಂಸ್ಥೆ, ಸಾರ್ಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಮಾಡಿದ ವಿಶಿಷ್ಠ ಸಾಧನೆ, ವಹಿಸಿದ ಕೆಲಸವನ್ನು ಅತ್ಯಲ್ಪ ಸಮಯದಲ್ಲಿ ಸಮರ್ಪಕ ನಿರ್ವಹಣೆ, ದೈನಂದಿನ ಕರ್ತವ್ಯದಲ್ಲಿ ತೋರಿದ ಶ್ರದ್ಧೆ, ಆಸಕ್ತಿ ಮುಂತಾದ ಮಾನದಂಡಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಯು ರೂ. 2,000 ನಗದು ಹಾಗೂ ಪ್ರಶಂಸನಾ ಪತ್ರ ಒಳಗೊಂಡಿದೆ. ಪ್ರಸ್ತುತ ವರ್ಷದಲ್ಲಿ ಒಟ್ಟು 503 ಸಿಬ್ಬಂದಿಗಳು ಶ್ಲಾಘನೀಯ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾರಿಗೆ ವಿಭಾಗವಾರು ಮಾಹಿತಿ :

  • ಹು-ಧಾ ನಗರ ಸಾರಿಗೆ 35
  • ಹುಬ್ಬಳ್ಳಿ ಗ್ರಾಮಾಂತರ 37
  • ಧಾರವಾಡ 50
  • ಬೆಳಗಾವಿ 38
  • ಚಿಕ್ಕೋಡಿ 63
  • ಬಾಗಲಕೋಟೆ 78
  • ಗದಗ 58
  • ಹಾವೇರಿ 55
  • ಉತ್ತರ ಕನ್ನಡ 54
  • ಪ್ರಾದೇಶಿಕ ಕಾರ್ಯಾಗಾರ 15
  • ಕೇಂದ್ರ ಕಚೇರಿ 20

ಎನ್‌ಡಬ್ಲ್ಯೂಕೆಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ : ಇತ್ತೀಚಿಗೆ ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವಾರು ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾರಾಂತ್ಯ ಹಾಗೂ ರಜಾ ದಿನಗಳಂದು ಹುಬ್ಬಳ್ಳಿಯಿಂದ ಜೋಗ್​ ಫಾಲ್ಸ್​ಗೆ, ಧಾರವಾಡದಿಂದ ಗೋಕಾಕ್ ಫಾಲ್ಸ್ ಮತ್ತು ದಾಂಡೇಲಿಗೆ ಹಾಗೂ ಬೆಳಗಾವಿಯಿಂದ ಅಂಬೋಲಿ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್​ಗೆ ಎನ್‌ಡಬ್ಲ್ಯೂಕೆಆರ್‌ಟಿಸಿ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : NWKRTC: ಸಿಬ್ಬಂದಿ ವೇತನಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದ ವಾಯವ್ಯ ಸಾರಿಗೆ ನಿಗಮ.. ಜುಲೈ ತಿಂಗಳ ಸ್ಯಾಲರಿ ಪಾವತಿಗೆ ಬೇಕು ₹ 65 ಕೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.