ETV Bharat / state

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 368 ಚಾಲಕ, ನಿರ್ವಾಹಕರುಗಳ ವರ್ಗಾವಣೆ

author img

By ETV Bharat Karnataka Team

Published : Oct 8, 2023, 8:22 AM IST

nwkrtc 368 Conductors and drivers transfer
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 368 ಚಾಲಕ, ನಿರ್ವಾಹಕರುಗಳ ವರ್ಗಾವಣೆ

ವಿಶೇಷ ಪ್ರಕರಣಗಳು ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 368 ಚಾಲಕ, ನಿರ್ವಾಹಕರುಗಳನ್ನು ವರ್ಗಾವಣೆ ಮಾಡಲಾಗಿದೆ.

ಹುಬ್ಬಳ್ಳಿ: 2023ನೇ ಸಾಲಿನ ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ ಹಾಗೂ ಪತಿ ಮತ್ತು ಪತ್ನಿ ಮತ್ತಿತರ ವಿಶೇಷ ಪ್ರಕರಣಗಳು ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 368 ಚಾಲಕ, ನಿರ್ವಾಹಕರುಗಳನ್ನು ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಆದೇಶ ಹೊರಡಿಸಿದ್ದಾರೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟಾರೆ ಹಾಗೂ ಕೆಲವು ವಿಭಾಗಗಳಲ್ಲಿ ಬಹಳಷ್ಟು ಚಾಲಕರ ಕೊರತೆ ಇದ್ದರೂ ಸಹ, ವರ್ಗಾವಣೆ ನಿರೀಕ್ಷೆಯಲ್ಲಿದ್ದ ಅರ್ಹ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2023ರ ಸಾಲಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ವರ್ಗಾವಣೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಆಗಸ್ಟ್ 23ರಿಂದ ಸೆಪ್ಟೆಂಬರ್ 4ರವರೆಗೆ ಒಟ್ಟು 1,003 ಚಾಲಕರು, ನಿರ್ವಾಹಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 727 ಮಂದಿ ಅರ್ಹರಿದ್ದರು. ಸಂಸ್ಥೆಯ ಒಂಬತ್ತು ವಿಭಾಗಗಳಲ್ಲಿ ಚಾಲನಾ ಸಿಬ್ಬಂದಿಗಳ ಮಂಜೂರಾತಿ, ಲಭ್ಯತೆ ಹಾಗೂ ಖಾಲಿ ಸ್ಥಾನ ಪರಿಗಣಿಸಿ 309 ಸಾಮಾನ್ಯ, 34 ಪರಸ್ಪರ ಹಾಗೂ 25 ವಿಶೇಷ ಪ್ರಕರಣಗಳು ಸೇರಿದಂತೆ ಒಟ್ಟು 368 ಅರ್ಹ ಚಾಲನಾ ಸಿಬ್ಬಂದಿಗಳನ್ನು ವರ್ಗಾಯಿಸಿ ಅಕ್ಟೋಬರ್​ 6ರಂದು ಆದೇಶ ಹೊರಡಿಸಲಾಗಿದೆ.

ಆನ್‌ಲೈನ್ ಮೂಲಕ ಸಲ್ಲಿಕೆಯಾದ ಸಾಮಾನ್ಯ ವರ್ಗಾವಣೆ ಕೋರಿಕೆಗಳಲ್ಲಿ ಹೆಚ್ಚಿನವರು ಉತ್ತರ ಕನ್ನಡ ವಿಭಾಗದಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಬಯಸಿದ್ದಾರೆ. ಅದೇ ರೀತಿ ಬೇರೆ ವಿಭಾಗಗಳಿಂದ ಬಾಗಲಕೋಟೆ ವಿಭಾಗಕ್ಕೆ ವರ್ಗಾವಣೆ ಕೋರಿದ್ದಾರೆ. ಉತ್ತರ ಕನ್ನಡ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಕೊರತೆ ಹೆಚ್ಚಾಗಿರುವುದರಿಂದ ಹಾಗೂ ಬಾಗಲಕೋಟೆ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಲಭ್ಯತೆ ಹೆಚ್ಚಿರುವುದರಿಂದ ಈ ಅರ್ಜಿಗಳಲ್ಲಿ ಪ್ರಸ್ತುತ ವಿಭಾಗದಲ್ಲಿ 8 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಕಾರ್ಯನಿರ್ವಹಿಸಿದ ಚಾಲನಾ ಸಿಬ್ಬಂದಿಗಳ ಕೋರಿಕೆಗಳನ್ನು ಮಾತ್ರ ಪರಿಗಣಿಸಲಾಗಿದೆ.

ಹಾವೇರಿ ವಿಭಾಗದಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಾಗೂ ಗದಗ ವಿಭಾಗದಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇಲ್ಲದಿರುವುದರಿಂದ ಹಾವೇರಿಯಿಂದ ಗದಗ ವಿಭಾಗದ ಕೋರಿಕೆಗಳನ್ನು ಪರಿಗಣಿಸಿಲ್ಲ. ಪರಸ್ಪರ ವರ್ಗಾವಣೆ ಹಾಗೂ ವಿಶೇಷ ಪ್ರಕರಣಗಳಲ್ಲಿ ಪರಿಗಣಿಸಲಾದ ನೌಕರರನ್ನು ಕೂಡಲೇ ಪ್ರಸ್ತುತ ಸ್ಥಳದಿಂದ ಬಿಡುಗಡೆಗೊಳಿಸಲಾಗುವುದು. ಆದರೆ, ಬಸ್​ಗಳ ಕಾರ್ಯಾಚರಣೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಾವಣೆಯಲ್ಲಿ ಪರಿಗಣಿಸಲಾದ 309 ಚಾಲನಾ ಸಿಬ್ಬಂದಿಗಳ ತಕ್ಷಣ ಬಿಡುಗಡೆಗೊಳಿಸಲು ಸಾಧ್ಯವಾಗುವುದಿಲ್ಲ.

ವಿಶೇಷವಾಗಿ ಉತ್ತರ ಕನ್ನಡ, ಹಾವೇರಿ, ಧಾರವಾಡ (ಗ್ರಾ), ಚಿಕ್ಕೋಡಿಯಂತಹ ಹೆಚ್ಚು ಚಾಲನಾ ಸಿಬ್ಬಂದಿಗಳ ಕೋರಿಕೆ ಇರುವ ವಿಭಾಗಗಳಿಗೆ ಚಾಲನಾ ಸಿಬ್ಬಂದಿಗಳನ್ನು ಪರ್ಯಾಯವಾಗಿ ಒದಗಿಸುವವವರೆಗೆ ವರ್ಗಾವಣೆಗೊಂಡ ಚಾಲನಾ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡ ಚಾಲನಾ ಸಿಬ್ಬಂದಿಗಳು ಪ್ರಸ್ತುತ ವಿಭಾಗದಲ್ಲಿಯೇ ಮುಂದಿನ ಆದೇಶದವರೆಗೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.

ಈ ವರ್ಗಾವಣೆ ಆದೇಶಗಳನ್ನು ಪಾರದರ್ಶಕವಾಗಿ ಮತ್ತು ಮೇಲ್ಕಂಡ ಮಾನದಂಡಗಳಂತೆ ಕೈಗೊಳ್ಳಲಾಗಿದ್ದು, ಮೇಲೆ ತಿಳಿಸಿದ ಕಾರಣಗಳಿಗಾಗಿ ವರ್ಗಾವಣೆಗೆ ಅರ್ಹರಿದ್ದ ಕೆಲವೊಂದು ಚಾಲನಾ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಲು ಸಾಧ್ಯವಾಗಿಲ್ಲ ಮತ್ತು ವರ್ಗಾವಣೆಗೊಂಡವರನ್ನು ತಕ್ಷಣವೇ ಬಿಡುಗಡೆಗೊಳಿಸಲು ಸಾಧ್ಯವಿರುವುದಿಲ್ಲ. ಈ ಬಗ್ಗೆ ಸಿಬ್ಬಂದಿ ಸಹಕರಿಸಲು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಕೋರಿದ್ದಾರೆ.

ಇದನ್ನೂ ಓದಿ: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಐಜಿ ಆಗಿ ರವಿ ಚನ್ನಣ್ಣನವರ್ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.