ETV Bharat / state

ಹುಬ್ಬಳ್ಳಿ: ಹೆಸರು ಬೆಳೆಗಿಲ್ಲ ಸೂಕ್ತ ಪರಿಹಾರ; ಸಂಕಷ್ಟದಲ್ಲಿ ಸಿಲುಕಿದ ರೈತ

author img

By

Published : Aug 24, 2022, 4:36 PM IST

ಕಳೆದೆರಡು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಹೆಸರು ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೆಸರು ಬೆಳೆ
ಹೆಸರು ಬೆಳೆ

ಹುಬ್ಬಳ್ಳಿ: ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಹೆಸರು ಬೆಳೆದ ರೈತರ ಸ್ಥಿತಿ. ಈ ವರ್ಷ ಅತಿಯಾದ ಮಳೆಯಿಂದ ಬೆಳೆಯೆಲ್ಲಾ ಕೊಳೆತು ಹೋಗಿವೆ. ಅದರಲ್ಲಿಯೇ ಅಲ್ಪ ಸ್ವಲ್ಪ ಬೆಳೆ ಬಂದಿದೆ. ಆದರೆ, ಸರ್ಕಾರ ಹೆಸರು ಖರೀದಿ ಕೇಂದ್ರಗಳನ್ನು ಇನ್ನೂ ಆರಂಭ ಮಾಡದೆ ಇರೋದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಕಳೆದೆರಡು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಹೆಸರು ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಹೆಸರು ಬೆಳೆ ನೀರು ಪಾಲಾಗಿ ಅಳಿದುಳಿದ ಬೆಳೆಯನ್ನು ಮಾರಾಟ ಮಾಡಲು ಕೂಡ ಖರೀದಿ ಕೇಂದ್ರ ಇಲ್ಲವಾಗಿದೆ. ಹಲವು ರೈತರು ಇನ್ನು ಮುಂದೆ ಹೆಸರು ಬೆಳೆಯುವುದೇ ಬೇಡ ಅಂತಾ ಪರ್ಯಾಯ ಬೆಳೆಯ ಮೊರೆ ಹೋಗಿದ್ದಾರೆ.

ಆದರೆ, ಈ ವರ್ಷವೂ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹೆಸರು ಬೆಳೆದ ರೈತರಿಗೆ ಬರಸಿಡಿಲು ಬಡಿದಿದೆ. ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಮಳೆಯಾಗಿ ಬೆಳೆಯೆಲ್ಲಾ ಕೊಳೆತು ಹೋಗಿವೆ. ಅಳಿದುಳಿದ ಬೆಳೆ ಅಷ್ಟೇ ಕೈಗೆ ಬಂದಿದೆ. ಆದರೆ, ಇದನ್ನು ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ರೈತರ ಬಳಿ ಅಲ್ಪ ಸ್ವಲ್ಪ ಬೆಳೆ ಇದ್ದರೂ ಈಗ ಮಾರಲಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಹೆಸರು ಖರೀದಿ ಕೇಂದ್ರ ಆರಂಭ ಮಾಡಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಸರು ಬೆಳೆ ಹಾಳಾಗಿರುವ ಬಗ್ಗೆ ರೈತ ಶಿವಾನಂದ ಅವರು ಅಳಲು ತೋಡಿಕೊಂಡಿದ್ದಾರೆ

ದಿಕ್ಕು ತೋಚದಂತಾಗಿದೆ: ಹೊಲದಲ್ಲಿ ಹೆಸರು ರಾಶಿ ಹಾಕಿದ್ದು, ಒಂದಿಷ್ಟು ರೈತರು ಕಟಾವು ಮಾಡುತ್ತಿದ್ದಾರೆ. ಮತ್ತೆ ಮಳೆ ಬಂದರೆ ಬೆಳೆ ನೀರು ಪಾಲಾಗಲಿದೆ ಎನ್ನುವ ಆತಂಕ ರೈತರದ್ದು. 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 7200 ರೂಪಾಯಿ ಬೆಂಬಲ ಬೆಲೆಯಡಿಯಲ್ಲಿ ಸರ್ಕಾರ ಖರೀದಿ ಮಾಡಬೇಕಿದೆ. ಆದರೆ, ಖರೀದಿ ಕೇಂದ್ರವನ್ನು ಆರಂಭಿಸಿಲ್ಲ. ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಹುಬ್ಬಳ್ಳಿ ಭಾಗದಲ್ಲಿ ಹೆಚ್ಚಾಗಿ ರೈತರು ಹೆಸರು ಬೆಳೆದಿದ್ದಾರೆ. ಈ ಹೆಸರು ಬೆಳೆದವರಿಗೆ ಈಗ ದಿಕ್ಕು ತೋಚದಂತಾಗಿದೆ.

ಸಾಕಷ್ಟು ನಷ್ಟವಾಗಿದೆ: 'ಈ ವರ್ಷವೂ ಅತಿವೃಷ್ಠಿಯಿಂದಾಗಿ ಹೆಸರು ಬೆಳೆ ಹಾಳಾಗಿದೆ. ನಿರಂತರವಾಗಿ 20 ದಿನಗಳ ಕಾಲ ಮಳೆಬಂದು ಸಾಕಷ್ಟು ಬೆಳೆ ನಷ್ಟವಾಗಿದೆ. 20 ಕ್ವಿಂಟಾಲ್ ಬೆಳೆ ಬರುವಲ್ಲಿ ಈಗ ಕೇವಲ 8 ಕ್ವಿಂಟಾಲ್​, 6 ಕ್ವಿಂಟಾಲ್ ಬೆಳೆ ಬಂದಿದೆ. ಹೆಸರು ಈಗ ಹತ್ತಿಯಂತಾಗಿದ್ದು, ಮಳೆಗೆ ಸಿಲುಕಿ ರೈತರ ಕೈಗೆ ಸಿಗದಂತಾಗಿದೆ. ಎಪಿಎಂಸಿಯವರು ಖರೀದಿ ಮಾಡುತ್ತೇವೆ ಎನ್ನುತ್ತಾರೆ. ಆದರೆ ಅದಿನ್ನೂ ಪ್ರಾರಂಭವಾಗಿಲ್ಲ. ಅಲ್ಲದೇ, ಸರ್ಕಾರದವರು ಬೆಂಬಲ ಬೆಲೆ ಕೊಡುತ್ತೇನೆ ಎನ್ನುತ್ತಾರೆ. ಅದನ್ನು ಕೂಡಾ ಕೊಟ್ಟಿಲ್ಲ. ರೈತರಿಗೆ ಬೆಳೆ ಪರಿಹಾರ ಕೊಡುತ್ತೇನೆ ಅನ್ನುತ್ತಾರೆ. ಇದು ಒಬ್ಬರಿಗೆ ಮುಟ್ಟಿದರೂ ಇನ್ನೊಬ್ಬರಿಗೆ ಮುಟ್ಟದಂತಹ ಪರಿಸ್ಥಿತಿ ಇದೆ' ಎನ್ನುತ್ತಾರೆ ರೈತ ಶಿವಾನಂದ.

ರೈತರ ನೆರವಿಗೆ ಬರಬೇಕಿದೆ: ಪ್ರತಿವರ್ಷ ಮಳೆಯಿಂದಾಗಿ ಹೆಸರು ಬೆಳೆ ಹಾಳಾಗುತ್ತಿತ್ತು. ಈ ವರ್ಷವೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಅಲ್ಪ ಪ್ರಮಾಣದ ಫಸಲು ಬಂದಿದ್ದು, ಸರ್ಕಾರ ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕಿದೆ.

ಓದಿ: ರಾತ್ರೋರಾತ್ರಿ ಗಡಿಗಿ ಚೆನ್ನಪ್ಪ ವೃತ್ತದ ಗಡಿಯಾರ ಗೋಪುರ ತೆರವು.. ಬಳ್ಳಾರಿಯಲ್ಲಿ ಕಾಂಗ್ರೆಸ್​​ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.