ETV Bharat / state

ಅಮಿತ್ ಶಾ ಸಂವಿಧಾನದ ವ್ಯವಸ್ಥೆ ತಿಳಿದುಕೊಂಡಿದ್ದಾರಾ?: ಹೆಚ್​ಡಿಕೆ ತಿರುಗೇಟು

author img

By

Published : Feb 14, 2023, 2:29 PM IST

HD Kumaraswamy
ಹೆಚ್​.ಡಿ ಕುಮಾರಸ್ವಾಮಿ.

ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣನಾ?, ಇದು ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಸಂವಿಧಾನದ ಚೌಕಟ್ಟಿನಲ್ಲಿ ಯಾರು ಬೇಕಾದರು ಚುನಾವಣೆಗೆ ನಿಲ್ಲಬಹುದು-ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ

ಅಮಿತ್ ಶಾ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಧಾರವಾಡ: ಮಂಡ್ಯದಲ್ಲಿ ನಾನು ಯಶಸ್ವಿಯಾಗಿ ರ‍್ಯಾಲಿ ಮಾಡಿದ್ದೇನೆ. ಆ ಭಾಗದಲ್ಲಿ ನೆಲೆಯೂರಿರುವ ಕುಟುಂಬದ ಪಕ್ಷವಾದ ಜೆಡಿಎಸ್​ ಈ ಬಾರಿ ಜನರು ದೂರ ಸರಿಸಲಿದ್ದಾರೆ ಎಂಬ ಗೃಹ ಸಚಿವ ಅಮಿತ್​ ಶಾ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 'ಅಮಿತ್ ಶಾ ಸಂವಿಧಾನದ ವ್ಯವಸ್ಥೆ ತಿಳಿದುಕೊಂಡಿದ್ದಾರಾ?. ಇದನ್ನ ನಾನು ಅವರಿಗೆ ಕೇಳಲು ಬಯಸುತ್ತೇನೆ. ಸ್ವಾತಂತ್ರ್ಯ ಬಂದಾಗ ನಮ್ಮ ಸಂವಿಧಾನ ಆಗಿದೆ. ನಮ್ಮ ಸಂವಿಧಾನ‌ ವಿಶ್ವಕ್ಕೆ ಮಾದರಿ. ಇದರ ಅನ್ವಯ ಯಾರು ಯಾವ‌ ವೃತ್ತಿಯಾದರೂ ಆರಿಸಿಕೊಳ್ಳಬಹುದು' ಎಂದರು.

ಇವರಿಂದ ಅನುಮತಿ ತಗೊಬೇಕಾ?: ಚುನಾವಣೆ ಬಂದಾಗ ಯಾರಾದರೂ ನಿಲ್ಲಬಹುದು. ಜನರ ಆಶೀರ್ವಾದದಿಂದ ಜನಪ್ರತಿನಿಧಿಯಾಗುತ್ತಾರೆ. ನಾವು ಯಾರೂ ಹಿಂಬಾಗಿಲು ಪ್ರವೇಶ ಮಾಡಿಲ್ಲ. ಹೋರಾಟದ ಮೂಲಕ ನಾವು ಬಂದಿದ್ದೇವೆ. ಜನ ಸ್ವೀಕಾರ ಮಾಡಿದಾಗಲೇ ನಾವು ಜನಪ್ರತಿನಿಧಿ ಆಗಿದ್ದೇವೆ. ಅದಕ್ಕೆ ನಾವು ಇವರಿಂದ ಅನುಮತಿ ತಗೊಬೇಕಾ?. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲಾ?, ಬಿಸಿಸಿಐಯಲ್ಲಿ ಅವರ ಮಗನೇ ಇದ್ದಾನೆ. ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧ ಅವನಿಗೆ ಅಧಿಕಾರ ಕೊಟ್ಟಿದ್ದಾರೆ. ಅವನ ಸಾಧನೆ ಏನು?, ಬಿಜೆಪಿಯಲ್ಲಿ ಎಷ್ಟು ಜನ ಅಪ್ಪ ಮಕ್ಕಳು ರಾಜಕಾರಣದಲ್ಲಿ ಇದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟು ಜ‌ನ ಇದ್ದಾರೆ ಎಂದು ಹರಿಹಾಯ್ದರು.

'ತ್ರಿಬಲ್ ಇಂಜಿನ್' ಸರ್ಕಾರ: ದೇವೆಗೌಡರದ್ದು ಮಾತ್ರ ಕುಟುಂಬ ರಾಜಕಾರಣನಾ?, ಇದು ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಸಂವಿಧಾನದ ಚೌಕಟ್ಟಿನಲ್ಲಿ ಯಾರು ಬೇಕಾದರು ಚುನಾವಣೆಯಲ್ಲಿ ನಿಲ್ಲಬಹುದು. ಅವರ ಸರ್ಟಿಫಿಕೇಟ್ ನನಗೆ ಬೇಡ. ನಾವು ಜನರ ನೋವಿಗೆ ಸ್ಪಂದಿಸಿ ರಾಜಕಾರಣ ಮಾಡುತ್ತೇವೆ. ಅವರಂತೆ ಅಮಾಯಕರನ್ನು ಬಲಿ‌ ಕೊಟ್ಟು ರಾಜಕಾರಣ‌ ಮಾಡಲ್ಲ. ಅವರ ದುರಹಂಕಾರ ಏನಾಗಲಿದೆ ಎಂದು‌ ನೋಡಿ. ಇದು ಯುಪಿ,‌ ಬಿಹಾರ ಅಲ್ಲ. ನಮ್ಮ ರಾಜ್ಯದಲ್ಲಿ ಅವರ ಕೊಡುಗೆ ಏನು ಎಂದು ಹೇಳಲಿ. ಮಹದಾಯಿ ಸರಿ‌ ಮಾಡಿದ್ದರಾ?, ಅಲ್ಲಿ ಗೋವಾದಿಂದ ತಕರಾರು ತೆಗಿಸಿದ್ದಾರೆ. ‌ಡಬಲ್​​ ಇಂಜಿನ್​​ ಸರ್ಕಾರ ಅಲ್ಲ. ಗೋವಾ ಸೇರಿ 'ತ್ರಿಬಲ್ ಇಂಜಿನ್' ಸರ್ಕಾರ ಎಂದು ಕುಟುಕಿದರು.

ಗುತ್ತಿಗೆ ನೌಕರರ ಮುಷ್ಕರಕ್ಕೆ ಬೆಂಬಲ: ನೀರು ಸರಬರಾಜು ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸ್ಥಳಕ್ಕೆ ಹೆಚ್.ಡಿ. ಕುಮಾರಸ್ವಾಮಿ ಭೇಟಿ‌ ನೀಡಿ ಬೆಂಬಲ ವ್ಯಕ್ತಪಡಿಸಿದರು. ಧಾರವಾಡದ ಮಹಾನಗರ ಪಾಲಿಕೆ ಆವರಣದಲ್ಲಿ ಮ‌ೂರು ವಾರಗಳಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ನೀರು ಸರಬರಾಜು ನೌಕರರ ಮುಷ್ಕರ ಬೆಂಬಲಿಸಿ ಮಾತನಾಡಿದ ಅವರು, ಬರುವ 16ಕ್ಕೆ ವಿಧಾನಸಭೆಯಲ್ಲಿ ಈ ಮುಷ್ಕರದ ಬಗ್ಗೆ ಪ್ರಸ್ತಾಪ ಮಾಡಿ ಮಾತನಾಡುವೆ. ಒಂದು ದಿನದ ಕಾರ್ಯ ಕಲಾಪದಲ್ಲಿ ನಾನು ಭಾಗವಹಿಸಲಿದ್ದೇನೆ. ಆಗ ಸರ್ಕಾರದ ಮುಂದೆ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಬೇಡಿಕೆ ಬಗ್ಗೆ ಸರ್ಕಾರವನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ. 15 ದಿನದಿಂದ ಮುಷ್ಕರ ನಡೆದಿದೆ. ಸಿಎಂ ಇದೇ‌ ಭಾಗದವರು. ಆದರೂ ಅವರ ಗಮನಕ್ಕೆ ಬಂದಿರುವುದಿಲ್ಲವಾ? ಈ ನಿರ್ಲಕ್ಷ್ಯವನ್ನು ನಾನು ಖಂಡಿಸುತ್ತೇನೆ. ಚುನಾವಣೆ ಬಳಿಕ ನನ್ನ ಪಾತ್ರ ಮಹತ್ವ ಇರುತ್ತದೆ. ಮುಂದೆ ಸರ್ಕಾರ ರಚಿಸುವಾಗ ನಾನೇ ಪ್ರಮುಖ ಪಾತ್ರ ವಹಿಸಲಿದ್ದೇನೆ. ನಾನು ಮುಷ್ಕರ ಬಗ್ಗೆ ಧ್ವನಿ ಎತ್ತಿದಾಗ ಅಧಿವೇಶನದಲ್ಲಿ ಗೌರವ ಸಿಗಬಹುದೆಂದು ಭಾವಿಸಿದ್ದೇನೆ. ಇಲ್ಲದೇ ಹೋದಲ್ಲಿ ಮೂರು ತಿಂಗಳ ಬಳಿಕ ನೋಡಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್​ ಹಿಡಿತ ಸಡಿಲ, ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದು ಖಚಿತ: ಅಮಿತ್​ ಶಾ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.