ETV Bharat / state

ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಜಗದೀಶ್ ಶೆಟ್ಟರ್

author img

By ETV Bharat Karnataka Team

Published : Oct 16, 2023, 4:36 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್

ಯಾವುದೇ ಸಾಕ್ಷ್ಯಧಾರಗಳಿಲ್ಲದೇ ಭ್ರಷ್ಟಚಾರ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

ಹುಬ್ಬಳ್ಳಿ : ಈ ಹಿಂದೆ ನಿಮ್ಮ ಮೇಲೆ ಭ್ರಷ್ಟಾಚಾರ ಆಪಾದನೆ ಬಂದು ಜನ ತಿರಸ್ಕರಿಸಿ ಮನೆಗೆ ಕಳುಹಿಸಿದ್ದಾರೆ. ಇದೀಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಗುಡುಗಿದ್ದಾರೆ. ನಗರದಲ್ಲಿಂದು ಮಾತನಾಡಿದ ಶೆಟ್ಟರ್​, ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕರೆಪ್ಷನ್ ಕಮಿಟಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ನಿಮಗೆ. ಭ್ರಷ್ಟಾಚಾರದ ಆಪಾದನೆ ಬಂದು ಜನರು ನಿಮ್ಮನ್ನು ತಿರಸ್ಕರಿಸಿ ಮನೆಗೆ ಕಳುಹಿಸಿದ್ದಾರೆ. ಈಗ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಕ್ಕೆ ಏನು ಹಕ್ಕಿದೆ ಎಂದು ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಕಾಂಗ್ರೆಸ್ ಬರುವ ಬಗ್ಗೆ ಕೇಳಿದಾಗ, ಸದಾನಂದಗೌಡರ ಜೊತೆಗೆ ನಾನು ಯಾವುದೇ ರೀತಿಯ ಮಾತನಾಡಿಲ್ಲ. ಸ‌ಂಪರ್ಕದಲ್ಲೂ ಇಲ್ಲ. ಹೀಗಾಗಿ ಅವರು ಕಾಂಗ್ರೆಸ್​ಗೆ ಬರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರಾಗಿಯೇ ಮಾತನಾಡಿದರೇ ಮಾತನಾಡುವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಪಂಚ ರಾಜ್ಯಗಳಿಗೆ 1000 ಕೋಟಿ ಹಣ ಸಂಗ್ರಹ ಜೋಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್​​, ಇದೊಂದು ಆಧಾರ ರಹಿತ ಆರೋಪ. ಆದಾಯ ತೆರಿಗೆ ಯಾರ ಕೈಯಲ್ಲಿ ಇದೆ. ತನಿಖೆ ಮಾಡಿಸಲಿ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಒಬ್ಬ ಜವಾಬ್ದಾರಿಯುತ ನಾಯಕರು. ಅವರು ಯಾವ ಆಧಾರದ ಮೇಲೆ ಹೇಳಿದರು ಅನ್ನುವುದು ಗೊತಿಲ್ಲ. ಈ ಬಗ್ಗೆ ಸ್ಪಷ್ಟತೆ ಮಾಡಬೇಕು. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದ ಹಾಗೇ , ಯಾವುದೇ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಕೊಟ್ಟಿಲ್ಲ. ಸಂಬಂಧಿಸಿದ ಇಲಾಖೆ ಯಾರ ಹಣ ಎಂದು ಮಾಹಿತಿ ಕೊಡಲಿ. ಅದು ಯಾರಿಗೆ ಸೇರಿದ್ದು, ಮೊದಲು ಹೇಳಲಿ. ನಂತರ ಅದರ ಬಗ್ಗೆ ಚರ್ಚೆ ಆಗಲಿ ಎಂದರು.

ಗುತ್ತಿಗೆದಾರರ ಮನೆಯಲ್ಲೇ ಹಣ ಸಿಕ್ಕ ವಿಚಾರಕ್ಕೆ ಬಗ್ಗೆ ಮಾತನಾಡಿ, ಸಂಘ ಬೇರೆ, ವ್ಯಕ್ತಿ ಬೇರೆ. ಸಂಘ ಹೋರಾಟ ಮಾಡಿದೆ. ವೈಯಕ್ತಿಕವಾಗಿ ಹಾಗೂ ಸಂಘ ಎರಡನ್ನೂ ಹೋಲಿಕೆ ಮಾಡಲು ಆಗಲ್ಲ. ಎಲ್ಲಾದರೂ ಹಣದ ಬಗ್ಗೆ ಸಂಪೂರ್ಣ ತನಿಖೆ ಆಗಲಿ. ತಪ್ಪು ಮಾಡಿದವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ. ಅದು ಬರುವುದಕ್ಕೆ ಮುಂಚೆನೇ ಸಿಬಿಐ ತನಿಖೆ ಅಂತಾರೆ ಎಂದು ಶೆಟ್ಟರ್​ ತಿಳಿಸಿದರು.

ಆಗಲೂ ಹೆಸ್ಕಾಂ- ಬೆಸ್ಕಾಂ ಸಾಲದಲ್ಲೇ ಇದ್ದವು: ಉಚಿತವಾಗಿ ವಿದ್ಯುತ್ ಕೊಡುವುದರಿಂದ ಲೋಡ್ ಶೆಡ್ಡಿಂಗ್ ಆಗೋದಿಲ್ಲ. ಮಳೆ ಬಾರದೇ ಇರುವುದರಿಂದ ನೀರು ಇಲ್ಲದೇ ವಿದ್ಯುತ್ ಉತ್ಪಾದನೆ ಆಗಿಲ್ಲ. ಉಚಿತವಾಗಿ ಕೊಟ್ಟರೆ ರಾಜ್ಯ ಬಜೆಟ್ ನಿಂದ ಹಣ ಕೊಡುತ್ತಾರೆ ಎಂದು ಶೆಟ್ಟರ್​, ಜೋಶಿ ಕೇಂದ್ರದಿಂದ ಕಲ್ಲಿದ್ದಲು ಕೊಟ್ಟಿದ್ದೇವಿ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿ, ’’ಸರ್ಕಾರ ಇದ್ದಾಗಲೂ ಹೆಸ್ಕಾಂ, ಬೆಸ್ಕಾಮ್ ಎಲ್ಲ ಲಾಸ್​​​ನಲ್ಲೇ ಇವೆ. ಬಿಜೆಪಿ ಸರ್ಕಾರ ಇದ್ದಾಗ ಏನು ಲಾಭದಲ್ಲಿತ್ತಾ? ಯಾವಾಗಲೂ ಪರಿಸ್ಥಿತಿ ಹಾಗೇ ಇತ್ತು. ಸಾಲ ತಗೊಂಡೆ ಮಾಡೋದು ಎಂದರು.

ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡಲು ನಿಮಗೇನು ನೈತಿಕತೆ ಇದೆ. ಕಳೆದ ಬಾರಿ ಬೊಮ್ಮಾಯಿ ಸರ್ಕಾರಕ್ಕೂ ಭ್ರಷ್ಟಾಚಾರದ ಆರೋಪ ಬಂತು. ಶೇ 40ರಷ್ಟು ಪೇ ಸಿಎಂ ಎಲ್ಲ ಕಡೆಗಳಲ್ಲೂ ಭ್ರಷ್ಟಾಚಾರ ನಡಿತಾ ಇದೆ ಅಂತ ಜನ ಮಾತಾಡಲಿಕ್ಕೆ ಶುರು ಮಾಡಿದರು.
ಗುತ್ತಿಗೆದಾರರು ಆರೋಪ ಮಾಡಿದರು. ನಿಮಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಮಾಡಲಿಕ್ಕೆ ಆಗಲಿಲ್ಲ. ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡ್ತೀರಿ ನೀವು? ನಿಮ್ಮ ವಿರುದ್ಧ ಪಕ್ಷದ ನಾಯಕ ಯಾರು? ಸುಮ್ಮನ್ನೆ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡೋದ್ರಲ್ಲಿ ಅರ್ಥ ಇಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

ಸಮಯಕ್ಕೆ ತಕ್ಕಂತೆ ನೀತಿಗಳು ಬದಲಾವಣೆ ಆಗುತ್ತವೆ: ಇಸ್ರೇಲ್ ಪ್ಯಾಲೆಸ್ಟೀನ್​​ ಯುದ್ಧ, ಕಾಂಗ್ರೆಸ್ ನಿಲುವಿನ ಬಗ್ಗೆ ಮಾತನಾಡಿ, ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ಎರಡು ದೇಶಗಳ ಯುದ್ಧಗಳು ಬಹಳ ವರ್ಷಗಳಿಂದ ನಡೆದುಕೊಂಡು ಬಂದಂತದ್ದು, ಇತಿಹಾಸ ನೋಡಿದರೇ ಮಹಾತ್ಮ ಗಾಂಧಿಯವರೇ ಪ್ಯಾಲೆಸ್ಟೀನ್​​​ಗೆ ಬೆಂಬಲ ನೀಡಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಪ್ಯಾಲೆಸ್ಟೀನ್​ಗೆ ಬೆಂಬಲ ನೀಡಿದ್ದರು. ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನೀತಿ ಬದಲಾವಣೆ ಆಗುತ್ತೆ.

ಎರಡು ದೇಶಗಳು ಯುದ್ಧ ಮಾಡುತ್ತಿದ್ದಾರೆ. ರಿಸಲ್ಟ್ ಏನ್ ಬರುತ್ತೆ ನೋಡೋಣ. ವಿದೇಶಿ ನೀತಿ ಬಗ್ಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಕೂತು ಚರ್ಚೆ ಮಾಡಬೇಕು. ನಮ್ಮ ನಿಲುವು ಏನು ಎಂಬುದನ್ನು ನಿರ್ಧಾರ ಮಾಡಬೇಕು. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಲ್ಲಾ? ಇಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರದಿಂದ ಅಲ್ಲಿ ಏನೂ ಆಗುವುದಿಲ್ಲ ಎಂದರು.

ಇದನ್ನೂ ಓದಿ : ಗುತ್ತಿಗೆದಾರರ ನಿವಾಸದಲ್ಲಿ ಕೋಟಿ ಕೋಟಿ ಹಣ ಪತ್ತೆ ಕೇಸ್ ಇಡಿಗೆ ವಹಿಸಿ: ಯಡಿಯೂರಪ್ಪ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.