ETV Bharat / state

ದೀಪಾವಳಿ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ವಿವಿಧ ತಳಿಯ 5 ಲಕ್ಷ ಹೂವುಗಳಿಂದ ಕಲಾಕೃತಿ ನಿರ್ಮಾಣ

author img

By ETV Bharat Karnataka Team

Published : Nov 16, 2023, 5:19 PM IST

Updated : Nov 16, 2023, 5:55 PM IST

Flower Show in Davangere Glasshouse
ದೀಪಾವಳಿ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ವಿವಿಧ ತಳಿಯ 5 ಲಕ್ಷ ಹೂವುಗಳಿಂದ ಕಲಾಕೃತಿಗಳು ನಿರ್ಮಾಣ

Flower Show in Davanagere: ವಿವಿಧ ತಳಿಯ ಹೂವುಗಳಿಂದ ಚಂದ್ರಯಾನ - 03ರ ಪಿಎಸ್ಎಲ್​ವಿ ಮಾದರಿ ಹಾಗೂ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್‌ಗಳ ನಿರ್ಮಾಣ ಜನರನ್ನು ಹೆಚ್ಚು ಆಕರ್ಷಿಸಿವೆ.

ದೀಪಾವಳಿ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ವಿವಿಧ ತಳಿಯ 5 ಲಕ್ಷ ಹೂವುಗಳಿಂದ ಕಲಾಕೃತಿಗಳು ನಿರ್ಮಾಣ

ದಾವಣಗೆರೆ: ದೀಪಾವಳಿ ಪ್ರಯುಕ್ತ ದಾವಣಗೆರೆ ಗಾಜಿನ ಮನೆಯಲ್ಲಿ ನ. 13 ರಂದು ಪ್ರಾರಂಭಗೊಂಡು ನಾಲ್ಕು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜನೆಗೊಂಡಿದ್ದ ಈ ಪ್ರದರ್ಶನದಲ್ಲಿ ಐದು ಲಕ್ಷ ವಿವಿಧ ತಳಿಯ ಹೂವುಗಳಿಂದ ತಯಾರಿಸಿದ್ದ ಚಂದ್ರಯಾನ - 03, ವರ್ಲ್ಡ್ ಕಪ್, ಭಾರತದ ಭೂಪಟ, ವಿಕೆಟ್ ಬ್ಯಾಟ್​ಗಳು ಸೇರಿದಂತೆ ವಿವಿಧ ಕಲಾಕೃತಿಗಳು, ಸಿದ್ಧಗಂಗಾ ಶ್ರೀಗಳ ಮೂರ್ತಿಗೆ ಮಾಡಿರುವ ಹೂವಿನ ಅಲಂಕಾರ ಜನರ ಕಣ್ಮನ ಸೆಳೆದವು.

ಸಾವಿರಾರು ಸಂಖ್ಯೆಯಲ್ಲಿ ಜನರು ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಬಂದಿದ್ದು, ಕಲಾಕೃತಿಗಳ ಮುಂದೆ ಸೆಲ್ಫಿಗೆ ಪೋಸ್​ ನೀಡಿದರು. ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು ಐದು ಲಕ್ಷ ವಿವಿಧ ತಳಿಯ ಹೂವುಗಳಿಂದ ವಿವಿಧ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ.‌ ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷಗಳು ತುಂಬಿರುವುದರಿಂದ ರಾಜ್ಯದ ಭೂಪಟವನ್ನು ವಿಶೇಷವಾಗಿ ವಿವಿಧ ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಿದ್ದು, ಜನರನ್ನು ಹೆಚ್ಚು ಆಕರ್ಷಿಸಿತು. ಇನ್ನು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ ವಿವಿಧ ಚಿತ್ರಕಲೆ, ಶಿಲ್ಪ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.

Flower Show in Davangere Glasshouse
ದೀಪಾವಳಿ ಪ್ರಯುಕ್ತ ಫಲಪುಷ್ಪ ಪ್ರದರ್ಶನ: ವಿವಿಧ ತಳಿಯ 5 ಲಕ್ಷ ಹೂವುಗಳಿಂದ ಕಲಾಕೃತಿಗಳು ನಿರ್ಮಾಣ

ಪ್ರವಾಸಿಗರಾದ ಸುನೀತ್ ಎಂಬುವರು ಮಾತನಾಡಿ "ಫಲಪುಷ್ಪ ಪ್ರದರ್ಶನ ತುಂಬಾ ಚೆನ್ನಾಗಿತ್ತು, ಹೂವುಗಳಲ್ಲೇ ಕಲಾಕೃತಿಗಳನ್ನು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಇದರಲ್ಲಿ ಚಂದ್ರಯಾನ - 03 ಮಾಡಿರುವುದು ವಿಶೇಷ. ಕಲ್ಲಿನ ಮಾದರಿಯಲ್ಲಿ ಬಸವಣ್ಣ, ಹಂಪಿ, ಸಿದ್ಧಗಂಗಾ ಶ್ರೀಯವರ ಕಲಾಕೃತಿ ಚೆನ್ನಾಗಿ ಮೂಡಿಬಂದಿದೆ. ಈ ರೀತಿ ನಮ್ಮ ದಾವಣಗೆರೆಯಲ್ಲಿ ಮಾಡಿರುವುದರಿಂದ ಎಲ್ಲರೂ ಕಣ್ತುಂಬಿಕೊಂಡೆವು" ಎಂದರು.‌

ಫಲಪುಷ್ಪ ಪ್ರದರ್ಶನದಲ್ಲಿ ವಿಶೇಷತೆ ಏನು?: ಈ ಬಾರಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನಲ್ಲಿ ಹೂವುಗಳಲ್ಲೇ 11 ಅಡಿ ಅಗಲ 25 ಅಡಿ ಎತ್ತರದ ಪಿಎಸ್ಎಲ್​ವಿ ಮಾದರಿ ನಿರ್ಮಿಸಲಾಗಿದ್ದು, 9 ಅಡಿ ಎತ್ತರದ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳ ನಿರ್ಮಾಣ ಆಕರ್ಷಕವಾಗಿತ್ತು. ಸುಮಾರು 4-5 ಲಕ್ಷ ಸೇವಂತಿಗೆ, ಗುಲಾಬಿ, ಕಾರ್ನೇಷನ್, ಆರ್ಕಿಡ್, ಆಂಥೋರಿಯಂ, ಜಿಫ್ಸೋಫಿಲ, ಲಿಲಿಯಮ್ಸ್ ಹೂವುಗಳನ್ನು ಅಲಂಕಾರಕ್ಕೆ ಬಳಕೆ‌ ಮಾಡಲಾಗಿದೆ. 16 ಅಡಿ ಎತ್ತರ ಮತ್ತು 10 ಅಡಿ ಅಗಲದ ಕಲ್ಲಿನ‌ ಮಾದರಿಯಲ್ಲಿ ಶಿವನಂದಿಯ ಕಲಾಕೃತಿಯ ನಿರ್ಮಿಸಲಾಗಿದೆ. ತೋಟಗಾರಿಗೆ ಇಲಾಖೆಯಿಂದ 8 ಅಡಿ ಎತ್ತರದ ವರ್ಲ್ಡ್ ಕಪ್ ಹೂವುಗಳಲ್ಲಿ ಅರಳಿದ್ದು, 7 ಅಡಿ ಎತ್ತರದ ಭಾರತ ಭೂಪಟದ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಇನ್ನು ಸಾಲ್ವಿಯಾ, ಪೆಟುನಿಯಾ, ಬೆಗೋನಿಯಾ, ಟೋರೆನಿಯಾ, ಜಿನಿಯಾ, ಸೇವಂತಿಗೆ, ಚೆಂಡು ಹೂವು, ಪೆಂಟಾಸ್, ಸೆಲೋಸಿಯಾ, ಡೇರೆ ಸೇರಿದಂತೆ, ಕಾಗದ ಹೂವು, ಟೇಬಲ್ ಪಾಮ್ ಮತ್ತು ಸಾಗೊ ಪಾಮ್‍ಗಳನ್ನು ಪ್ರದರ್ಶನಕ್ಕಿಡಲಾಗಿದೆ.

Davangere Glasshouse
ದಾವಣಗೆರೆ ಗಾಜಿನ ಮನೆ

ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಪ್ರತಿಕ್ರಿಯಿಸಿ, ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ವಯಸ್ಕರಿಗೆ 30 ರೂ. ಟಿಕೆಟ್ ಮಾಡಲಾಗಿತ್ತು. ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಪ್ರದರ್ಶನ ನೋಡಲು ಅವಕಾಶವಿತ್ತು. ದಾವಣಗೆರೆ ಮಾತ್ರವಲ್ಲದೇ ಜಿಲ್ಲೆಯ ಸುತ್ತಮುತ್ತಲಿನ ಜನ ಆಗಮಿಸಿ ಈ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: 5 ದಿನ, 2 ಕೋಟಿಗೂ ಹೆಚ್ಚು ಹಣ: ಮಾದಪ್ಪನ ಬೆಟ್ಟದ ಜಾತ್ರೆ - ಭಕ್ತರಿಂದ ಆದಾಯ "ಅಕ್ಷಯ ಪಾತ್ರೆ"!!

Last Updated :Nov 16, 2023, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.