ETV Bharat / state

ದಕ್ಷಿಣ ಕನ್ನಡದ ಗಾರೆ ಕೆಲಸಗಾರನಿಗೆ ಒಲಿದ ಅದೃಷ್ಟ: ಕೇರಳ ಲಾಟರಿಯಲ್ಲಿ 50 ಲಕ್ಷ ರೂ ಬಹುಮಾನ

author img

By ETV Bharat Karnataka Team

Published : Sep 29, 2023, 2:26 PM IST

Updated : Sep 29, 2023, 5:52 PM IST

Chandraya family
ಗಾರೆ ಕೆಲಸದ ಚಂದ್ರಯ್ಯ ಕುಂಬಾರರರ ಕುಟುಂಬ

ಓಣಂ ಬಂಪರ್‌ ಲಾಟರಿಯಲ್ಲಿ ದಕ್ಷಿಣ ಕನ್ನಡದ ಗಾರೆ ಕೆಲಸಗಾರನಿಗೆ ಮೂರನೇ ಬಹುಮಾನ ಸಿಕ್ಕಿದೆ.

ಉಪ್ಪಿನಂಗಡಿ: ಮನೆಯಲ್ಲಿ ಕಡು ಬಡತನವಿದ್ದರೂ ನಿಷ್ಠೆ, ಪ್ರಾಮಾಣಿಕತೆಯಿಂದ ಗಾರೆ ಕೆಲಸ ಮಾಡುತ್ತಾ ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿರುವ ಇಳಂತಿಲ ಗ್ರಾಮದ ಏನ್ಮಾಡಿಯ ಚಂದ್ರಯ್ಯ ಕುಂಬಾರ ಅವರನ್ನು ಅದೃಷ್ಟ ಲಕ್ಷ್ಮೀ ಕೈ ಹಿಡಿದಿದ್ದು, ಕೇರಳ ರಾಜ್ಯದ ಒಣಂ ಬಂಪರ್ ಲಾಟರಿಯಲ್ಲಿ 50 ಲಕ್ಷ ರೂ. ಗೆದ್ದಿದ್ದಾರೆ.

ವೃತ್ತಿಯಲ್ಲಿ ದೊಡ್ಡ ಮೇಸ್ತ್ರಿಯಲ್ಲದಿದ್ದರೂ ಗಾರೆ ಕೆಲಸ ಮಾಡುತ್ತಿದ್ದ ಚಂದ್ರಯ್ಯ ಅವರು ಕಾನತ್ತೂರಿನ ನಾಲ್ವರ್‌ ದೈವಸ್ಥಾನ ಕ್ಷೇತ್ರಕ್ಕೆ ಹೋದಾಗ 500 ರೂಪಾಯಿಯ ಓಣಂ ಬಂಪರ್‌ ಲಾಟರಿ ಟಿಕೆಟ್‌ ಖರೀದಿಸಿದ್ದರು. ಅದರ ಬಂಪರ್‌ ಬಹುಮಾನ 25 ಕೋಟಿ ಆಗಿದ್ದು, ಚಂದ್ರಯ್ಯ ಅವರು ಮೂರನೇ ಬಹುಮಾನ 50 ಲಕ್ಷ ರೂಪಾಯಿ ಗೆದ್ದುಕೊಂಡಿದ್ದಾರೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡ ಚಂದ್ರಯ್ಯ ಅವರು, ನಾನು ಉಪ್ಪಿನಂಗಡಿ ಸಮೀಪದ ಜನತಾ ಕಾಲನಿಯಲ್ಲಿ 5 ಸೆಂಟ್ಸ್‌ನಲ್ಲಿ ನನ್ನ ಪತ್ನಿ, ನಾಲ್ವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದೇನೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದೇನೆ. ದೊಡ್ಡವಳು ಪಿಯುಸಿ ತನಕ ಓದಿದ್ದರೆ, ಎರಡನೆಯವಳು ಎಂಬಿಎ ಓದುತ್ತಿದ್ದಾಳೆ. ಇನ್ನಿಬ್ಬರಲ್ಲಿ ಒಬ್ಬಳು ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಇನ್ನೊಬ್ಬಳು ಪ್ಯಾರಾಮೆಡಿಕಲ್‌ ಓದುತ್ತಿದ್ದಾಳೆ.

ನಾನೊಬ್ಬನೇ ದುಡಿದು ಸಂಸಾರ ಸಾಗಬೇಕು. ಬಡತನವಿದ್ದರೂ ನನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಅವಗಣಿಸಿಲ್ಲ. ಮಕ್ಕಳ ಮದುವೆ, ಶಿಕ್ಷಣ ಕೊಡಿಸುವ ಸಲುವಾಗಿ ಸುಮಾರು 10 ಲಕ್ಷದಷ್ಟು ಸಾಲ ಮಾಡಿದ್ದೇನೆ. ಈಗ ಬಂದ ಹಣದಿಂದ ಅದನ್ನು ತೀರಿಸಲು ಮೊದಲ ಆದ್ಯತೆ ನೀಡುತ್ತೇನೆ. ನನ್ನ ಕಷ್ಟವನ್ನು ದೇವರು ಅರಿತಿರಬೇಕು. ಕೇರಳ ರಾಜ್ಯದ ಮತ್ತು ಕರ್ನಾಟಕದ ತೆರಿಗೆಗಳು ಕಡಿತವಾಗಿ ಎಷ್ಟು ಹಣ ಕೈಸೇರುತ್ತದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತೂ ನಾನು ಮತ್ತು ನನ್ನ ಕುಟುಂಬದವರು ಇದೀಗ ಅತೀವ ಸಂತೋಷದಿಂದ ಇದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ₹25 ಕೋಟಿ ಲಾಟರಿ ಗೆದ್ದ ಕೇರಳದ ವ್ಯಕ್ತಿಯ ಕೈ ಸೇರುವುದು 15 ಕೋಟಿ ರೂಪಾಯಿ, 10 ಕೋಟಿ ಟ್ಯಾಕ್ಸ್!

Last Updated :Sep 29, 2023, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.