ETV Bharat / state

ಮೂರು ಶೂಟೌಟ್ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜ ದೋಷಮುಕ್ತ

author img

By

Published : Apr 8, 2023, 9:46 AM IST

Mangalore
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಮೂರು ಶೂಟೌಟ್ ಪ್ರಕರಣ - ಬನ್ನಂಜೆ ರಾಜ ದೋಷಮುಕ್ತ- ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು.

ಮಂಗಳೂರು: ಮಂಗಳೂರಿನಲ್ಲಿ ದಾಖಲಾಗಿದ್ದ ಮೂರು ಶೂಟೌಟ್ ಪ್ರಕರಣಗಳಲ್ಲಿ ಬಂಧನದಲ್ಲಿರುವ ಭೂಗತ ದೊರೆ ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2000ನೇ ಇಸವಿಯಲ್ಲಿ ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಮತ್ತು ಅವರ ಪತ್ನಿ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿ ಮನೆಗೆ ವಾಪಸ್​ ಆಗುವ ವೇಳೆ ಹೊಯಿಗೆ ಬಜಾರ್ ಎಂಬಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತರು ಕಾರನ್ನು ಅಡ್ಡಗಟ್ಟಿ ಶೂಟೌಟ್ ಮಾಡಿ ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜ ಮತ್ತು ಆತನ ಸಹಚರರ ಮೇಲೆ ಪ್ರಕರಣ ದಾಖಲಾಗಿತ್ತು.

2004ನೇ ಇಸವಿಯಲ್ಲಿ ರೋಹನ್ ಕಾರ್ಪೋರೇಶನ್‌ ಮಾಲೀಕ ರೋಹನ್ ಮೊಂತೆರೊ ಅವರ ಕಚೇರಿಯ ಮೇಲೆ ಅಪರಿಚಿತರು ಗುಂಡು ಹಾರಿಸಿ, ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2011ರಲ್ಲಿ ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ಡರ್ಸ್‌ ಮಾಲಕ ಸುರೇಶ ಭಂಡಾರಿ ಅವರು ತನ್ನ ಪತ್ನಿ ಮತ್ತು ಮಗಳೊಂದಿಗೆ ಕದ್ರಿ ಪಾರ್ಕ್ ಬಳಿ ಕಾರಿನಲ್ಲಿದ್ದ ಸಮಯ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ರಿವಾಲ್ವರ್‌ನಿಂದ ಶೂಟೌಟ್ ಮಾಡಿ ಕೊಲೆ ಯತ್ನ ನಡೆಸಿದ್ದರು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಭೂಗತ ಪಾತಕಿ ಬನ್ನಂಜೆ ರಾಜ ಆಪ್ತ ಮನೀಶ್ ಶೆಟ್ಟಿ​ ಗುಂಡೇಟಿಗೆ ಬಲಿ...!

ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆ ರಾಜ ಮತ್ತು ಆತನ ಸಹಚರರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗಳ ಸಮಯ ಬನ್ನಂಜೆ ರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015ನೇ ಇಸ್ವಿಯಲ್ಲಿ ಆಫ್ರಿಕಾದ ಮೊರಾಕೋ ದೇಶದಲ್ಲಿ ಆತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಅನಂತರ ಈತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ 3 ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅವರು ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಪಿಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್‌ ಕುಮಾರ್ ಅಮ್ಟಾಡಿ ಅವರು ವಾದಿಸಿದ್ದರು.

ಬನ್ನಂಜೆ ರಾಜ ಯಾರು?: ಬನ್ನಂಜೆ ರಾಜ ಮೂಲತಃ ಉಡುಪಿಯ ಮಲ್ಪೆಯವನಾಗಿದ್ದು ಪದವಿ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಸುಮಾರು 1991ರಲ್ಲೇ ಉಡುಪಿಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಅಪರಾಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ರಾಜ ವಿದ್ಯಾರ್ಥಿಯ ಅತ್ಯಾಚಾರ ಪ್ರಕರಣದಲ್ಲಿ ಕೂಡ ಸಿಲುಕಿದ್ದ.

ಇದನ್ನೂ ಓದಿ: ಬನ್ನಂಜೆ ರಾಜನ ಸಹಚರ ಶಶಿಕುಮಾರ್​ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.