ETV Bharat / state

ದೇಶಕ್ಕೆ ಬೇಕಾಗುವಷ್ಟು ಅಡಕೆ ಬೆಳೆದ್ರೂ ಭೂತಾನ್​ನಿಂದ ಆಮದು: ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ

author img

By

Published : Oct 18, 2022, 3:52 PM IST

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ

ಪ್ರಸ್ತುತ ಅಡಕೆ ದರ ಹಿಂದೆಗಿಂತಲೂ ಎರಡು ಪಟ್ಟು ಜಾಸ್ತಿಯಾಗಿದ್ದರೂ, ರಾಸಾಯನಿಕ ಗೊಬ್ಬರ, ಕೂಲಿ ದರದಲ್ಲಿ ಮೂರ್ನಾಲ್ಕು ಪಟ್ಟು ಜಾಸ್ತಿಯಾಗಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಹೇಳಿದ್ದಾರೆ.

ಪುತ್ತೂರು(ದಕ್ಷಿಣ ಕನ್ನಡ): ನಮ್ಮ ದೇಶದಲ್ಲಿ ಸುಮಾರು 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದೇಶಕ್ಕೆ ಬೇಕಾಗುವಷ್ಟು ಅಡಕೆ ಬೆಳೆಯಲಾಗುತ್ತಿದ್ದರೂ ಇದೀಗ ಭೂತಾನ್‍ನಿಂದ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಅಡಕೆ ಬೆಳೆಗಾರರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಕೇಂದ್ರ ಸರ್ಕಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಯನ್ನೇ ನೆಚ್ಚಿಕೊಂಡಿರುವ ದ. ಕ ಜಿಲ್ಲೆಯಲ್ಲಿ ರಬ್ಬರ್, ತೆಂಗು, ಕೊಕ್ಕೊ, ಬಾಳೆ ಮುಂತಾದ ಉಪಬೆಳೆಯನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಅಡಕೆ ದರ ಹಿಂದೆಗಿಂತಲೂ ಎರಡು ಪಟ್ಟು ಜಾಸ್ತಿಯಾಗಿದ್ದರೂ, ರಾಸಾಯನಿಕ ಗೊಬ್ಬರ, ಕೂಲಿ ದರದಲ್ಲಿ ಮೂರ್ನಾಲ್ಕು ಪಟ್ಟು ಜಾಸ್ತಿಯಾಗಿದೆ.

ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ: ಪರಿಣಾಮ ಅಡಕೆ ದರದಲ್ಲಿ ಏರಿಕೆಯಾದರೂ ಜಿಲ್ಲೆಯ ಆರ್ಥಿಕ ಸುಧಾರಣೆ, ಅಡಕೆ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ನಡುವೆ ಅಡಕೆ ಆಮದಿನಿಂದಾಗಿ ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು, ಜಿಲ್ಲೆಯ ಸಂಸದರು, ಶಾಸಕರು ಈ ವಿಚಾರದಲ್ಲಿ ಚಕಾರವೆತ್ತುತ್ತಿಲ್ಲ. ಈ ವಿಚಾರದಲ್ಲಿ ಅವರ ನಿಲುವು ಏನು? ಎಂಬುದು ಗೊತ್ತಾಗುತ್ತಿಲ್ಲ. ಇದನ್ನು ಜನಸಾಮಾನ್ಯರು ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿದರು

ಹಳದಿ ಎಲೆ ರೋಗಕ್ಕೆ ಪರಿಹಾರ: ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ರೈತರಿಗೆ ಹೆಚ್ಚಿನ ಆದ್ಯತೆ ನೀಡಿ ಆಮದು ವಿಚಾರದಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅಡಕೆಯ ವಿವಿಧ ಉತ್ಪನ್ನಗಳಿಗೆ ವಿಶೇಷ ನಿಧಿ ಇಟ್ಟು ಅಡಕೆ ಉತ್ಪನ್ನಗಳತ್ತ ವಿಶೇಷ ಒಲವು ತೋರಿಸಬೇಕಾಗಿದೆ. ಅಲ್ಲದೆ ಅಡಕೆ ಹಳದಿ ರೋಗದ ಕುರಿತು ಈವರೆಗೂ ಪರಿಹಾರ ಕಂಡುಕೊಳ್ಳಲಾಗಿಲ್ಲ. ತಕ್ಷಣ ಕೇಂದ್ರ ಸರ್ಕಾರದ ಕೃಷಿ ವಿಜ್ಞಾನಿಗಳ ಮೂಲಕ ಒಳ್ಳೆಯ ಪ್ರಯೋಗಾಲಯವನ್ನು ತೆರೆದು ಹಳದಿ ಎಲೆ ರೋಗಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಆರ್ಯಾಪು ಗ್ರಾಪಂ ಸದಸ್ಯ ಸದಾನಂದ ಶೆಟ್ಟಿ ಕೂರೇಲು ಉಪಸ್ಥಿತರಿದ್ದರು.

ಓದಿ: ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣ: ಸಿಐಡಿ ತನಿಖೆಗೆ ವರ್ಗಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.