ETV Bharat / state

ಬುದ್ಧಿಮಾಂದ್ಯ ಮಕ್ಕಳ ಸಾಕಲಾಗದೆ ತಾಯಿಯ ರೋಧನೆ; ಅನಾಥಾಶ್ರಮಕ್ಕೆ ಸೇರಿಸಿ ಸ್ಥಳೀಯರ ಮಾನವೀಯತೆ

author img

By

Published : Sep 26, 2021, 3:32 PM IST

family-of-bedridden-mother-story-melts-hearts-of-public
ಬುದ್ಧಿಮಾಂದ್ಯ ಮಕ್ಕಳ ಸಾಕಲಾಗದೆ ತಾಯಿಯ ಅಸಹಾಯಕತೆ

ಕುಟುಂಬ ನಡೆಸುತ್ತಿದ್ದ ತಂದೆ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ಹಣದಾಸೆಗೆ ಮಗ ತಂದೆಯ ಹತ್ಯೆ ಮಾಡಿ ಜೈಲು ಸೇರಿದ್ದ. ಹೀಗಿರುವಾಗ ತಾಯಿಯ ಮೇಲೂ ಸಂಬಂಧಿಕರೊಬ್ಬರು ಹಲ್ಲೆ ನಡೆಸಿದ್ದು, ಅವರೂ ಆಸ್ಪತ್ರೆ ಸೇರಿದ್ದರು.

ಚಿಕ್ಕಮಗಳೂರು: ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಬ್ಬರು ಬುದ್ಧಿಮಾಂದ್ಯ ಮತ್ತು ವಿಶೇಷಚೇತನ ಮಕ್ಕಳನ್ನು ಸ್ಥಳೀಯರೇ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಈ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೆನ್ನಡಲು ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿದ್ದ ಹಿರಿಯ ಮಗ ತಂದೆಯನ್ನು ಕೊಲೆ ಮಾಡಿ ಜೈಲಿನಲ್ಲಿದ್ದಾನೆ. ತಾಯಿಯೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಈ ಮಕ್ಕಳನ್ನು ನೋಡಿಕೊಳ್ಳುವವರಿಲ್ಲದೆ ಗ್ರಾಮಸ್ಥರ ನೆರವಿನಿಂದ ಬೆಂಗಳೂರಿನ ಬನ್ನೇರುಘಟ್ಟದ ಆರ್‌ವಿಎನ್ ಫೌಂಡೇಶನ್ ಅನಾಥಾಶ್ರಮಕ್ಕೆ ಸೇರಿಸಲಾಗಿದೆ.

ಬುದ್ಧಿಮಾಂದ್ಯ ಮಕ್ಕಳ ಸಾಕಲಾಗದೆ ತಾಯಿಯ ಅಸಹಾಯಕತೆ

ಅನಾಥ ಕುಟುಂಬದ ಕಥೆ

ಚೆನ್ನಡಲು ಗ್ರಾಮದ ಸುಂದರ ಪೂಜಾರಿ ಹಾಗೂ ಅರುಣ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರಿಗೆ ಹುಟ್ಟಿನಿಂದ ಬುದ್ಧಿಮಾಂದ್ಯತೆ ಹಾಗೂ ವೈಕಲ್ಯ ಇದೆ. ಹಿರಿಯ ಮಗ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಂದರ ಪೂಜಾರಿ ಕೂಲಿ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ಅರುಣ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿಯೇ ಇರುತ್ತಿದ್ದರು. ಸುಂದರ ಪೂಜಾರಿ 2020ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದರು. ಈ ವಿಷಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಹಲವಾರು ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ದಾನಿಗಳು, ಲಕ್ಷಾಂತರ ರೂಪಾಯಿ ನೆರವು ನೀಡಿದ್ದರು.

ಮಗನಿಂದ ತಂದೆಯ ಹತ್ಯೆ

ಬೆಂಗಳೂರಿನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಗ ಲಾಕ್​ಡೌನ್​ ವೇಳೆ ಮನೆಗೆ ಬಂದು ದಾನಿಗಳು ನೀಡಿದ ಹಣ ನೀಡುವಂತೆ ಪೀಡಿಸುತ್ತಿದ್ದ. ಆದರೆ ಹಣ ನೀಡದೇ ಇದ್ದಾಗ ತಂದೆಯನ್ನು ಹತ್ಯೆ ಮಾಡಿ ಜೈಲು ಪಾಲಾಗಿದ್ದ.

ಇದಾದ ಬಳಿಕ ಕ್ಷುಲ್ಲಕ ಕಾರಣಕ್ಕೆ ತಾಯಿ ಅರುಣ ಮೇಲೂ ಸಂಬಂಧಿಕರೊಬ್ಬರು ಹಲ್ಲೆ ಮಾಡಿದ್ದರು. ಈ ಘಟನೆಯಲ್ಲಿ ಅರುಣ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಎಲ್ಲಾ ಘಟನೆಗಳ ಬಳಿಕ ಅವರಿಗೆ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಇದನೆಲ್ಲಾ ಗಮನಿಸಿದ್ದ ಸ್ಥಳೀಯರು ಇವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ತಾಯಿಯ ಮನವೊಲಿಸಿರುವ ಅವರು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದರು.

ಇದನ್ನೂ ಓದಿ: ಚಿಕ್ಕಮಗಳೂರು ಕಾಫಿ ಎಸ್ಟೇಟ್​ನಲ್ಲಿ 50ಕ್ಕೂ ಹೆಚ್ಚು ಕಾಡುಕೋಣಗಳು ಪ್ರತ್ಯಕ್ಷ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.