ETV Bharat / state

ಚಿಕ್ಕಮಗಳೂರು: ಕಾಲುವೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಮೂವರು ಸಾವು

author img

By

Published : May 23, 2023, 7:13 AM IST

Chikkamagaluru
ಚಿಕ್ಕಮಗಳೂರು

ಕಾಲುವೆಯಲ್ಲಿ ಆಟ ಆಡುವಾಗ ಕಾಲು ಜಾರಿ ಬಿದ್ದು ತರೀಕೆರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು: ಕಾಲುವೆಯ ಬಳಿ ಆಟವಾಡಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದವರನ್ನು ಕಾಪಾಡಲು ಹೋಗಿ ಒಬ್ಬೊಬ್ಬರಂತೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮೃತರನ್ನು ರವಿ (31), ಅನನ್ಯ (17) ಹಾಗೂ ಶಾಮವೇಣಿ (16) ಎಂದು ಗುರುತಿಸಲಾಗಿದೆ.

ರವಿ ಮೂಲತಃ ಲಕ್ಕವಳ್ಳಿ ನಿವಾಸಿ. ಅನನ್ಯ ಮತ್ತು ಶಾಮವೇಣಿ ರವಿಯ ಸಹೋದರಿಯರ ಮಕ್ಕಳು. ಮಕ್ಕಳು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಲಕ್ಕವಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದರು. ಬೆಳಗ್ಗೆ ತರೀಕೆರೆ ತಾಲೂಕಿನ ಭದ್ರಾ ಜಲಾಶಯದ ಕಾಲುವೆಯ ಬಳಿ ಆಟವಾಡಲು ಹೋಗಿದ್ದು, ಮೂವರಲ್ಲಿ ಒಬ್ಬರು ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ಈ ದುರಂತ ಸಂಭವಿಸಿದೆ.

ಅನನ್ಯ ಮೃತದೇಹ ಪತ್ತೆಯಾಗಿದೆ. ರವಿ ಹಾಗೂ ಶಾಮವೇಣಿ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ರವಿ ಅವರ ಅಕ್ಕಂದಿರನ್ನು ಶಿವಮೊಗ್ಗ ಮತ್ತು ನಂಜನಗೂಡಿಗೆ ಮದುವೆ ಮಾಡಿ ಕೊಡಲಾಗಿತ್ತು. ಅನನ್ಯ ಶಿವಮೊಗ್ಗದ ನಿವಾಸಿಯಾಗಿದ್ದು, ಶಾಮವೇಣಿ ನಂಜನಗೂಡಿನವರು ಎಂದು ತಿಳಿದು ಬಂದಿದೆ.

ಈ ಘಟನೆ ಕುರಿತಂತೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರಂತರವಾಗಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ತುಂಗಾ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳು ಸಾವು: ಭಾನುವಾರ (21 ರಂದು) ಕಾಲೇಜು ವಿದ್ಯಾರ್ಥಿಗಳ ಗುಂಪು ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಒಬ್ಬ ವಿದ್ಯಾರ್ಥಿ ನೀರಿನಲ್ಲಿ ಮುಳುಗುತ್ತಿದ್ದಾಗ ಆತನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರೂ ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬಳಿಯ ನೆಮ್ಮಾರು ಸಮೀಪದ ತುಂಗಾ ನದಿಯಲ್ಲಿ ವಿದ್ಯಾರ್ಥಿಗಳು ಕೊಚ್ಚಿಕೊಂಡು ಹೋಗಿದ್ದರು. ಮೃತ ವಿದ್ಯಾರ್ಥಿಗಳನ್ನು ಹರಿಪುರದ ರಕ್ಷಿತ್​ ಹಾಗೂ ಸುಂಕದ ಮಕ್ಕಿಯ ಪ್ರಜ್ವಲ್​ ಎಂದು ಗುರುತಿಸಲಾಗಿದೆ.

ತಂದೆ- ಮಕ್ಕಳಿಬ್ಬರು ಕೆರೆಗೆ ಬಿದ್ದು ಸಾವು: ರಾಯಚೂರಿನ ಸಿರವಾರ ಪಟ್ಟಣದ ನಿವಾಸಿ ಶಿವಕುಮಾರ ಎನ್ನುವ ಜಮೀನಿನಲ್ಲಿ ನಿರ್ಮಿಸಲಾಗಿರುವ ಕೆರೆಯಲ್ಲಿ ಈ ಘಟನೆ ನಡೆದಿದೆ. ಮುದುಕಪ್ಪ (60), ಶಿವು ಮುದುಕಪ್ಪ (23), ಬಸವರಾಜ ಮುದುಕಪ್ಪ (20) ಮೃತರು. ಮುದುಕಪ್ಪ ಎನ್ನುವವರಿಗೆ ಇಬ್ಬರು ಮಕ್ಕಳಿದ್ದರು. ಇದರಲ್ಲಿ ಕಿರಿಯ ಮಗ ಬಸವರಾಜ ಕೆಲ ತಿಂಗಳ ಹಿಂದೆ ಮಾಯಮ್ಮ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಹಣದ ವಿಚಾರವಾಗಿ ಕಿರಿಯ ಮಗ ಬಸವರಾಜ ಹಾಗೂ ತಂದೆ ಮುದುಕಪ್ಪ ನಡುವೆ ಜಗಳವಾಗಿದೆ. ಆಗ ಸೊಸೆ ಮಾಯಮ್ಮ ಕೆರೆಗೆ ಹಾರಿದ್ದಾರೆ. ಮುದುಕಪ್ಪ ಸೊಸೆಯನ್ನು ರಕ್ಷಿಸಿದ್ದಾನೆ. ಆದರೆ ಇತ್ತ ಇಬ್ಬರು ಮಕ್ಕಳು ಪರಸ್ಪರ ಜಗಳವಾಡುತ್ತ ಕರೆಯಲ್ಲಿ ಬಿದ್ದಿದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ. ಮತ್ತೆ ಮಕ್ಕಳ ರಕ್ಷಣೆ ಮಾಡಲು ಮುದುಕಪ್ಪ ಕರೆಗೆ ಹಾರಿ ರಕ್ಷಣೆಗೆ ಮುಂದಾದಾಗ ಕೆರೆಯಲ್ಲಿ ಮೂವರೂ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗಂಗಾನದಿಯಲ್ಲಿ ದೋಣಿ ಮುಳುಗಿ 4 ಸಾವು, 24 ಮಂದಿ ನಾಪತ್ತೆ: ಭೀಕರ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.