ETV Bharat / state

ನಗರೋತ್ಥಾನ ಸೇರಿ ಅನೇಕ ಅನುದಾನಗಳು ಸದ್ಬಳಕೆಯಾಗಲಿ: ಸಚಿವ ಎಂಟಿಬಿ

author img

By

Published : Aug 26, 2021, 12:25 PM IST

Updated : Aug 26, 2021, 12:42 PM IST

chikkaballapura
ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜ್

ಗೌರಿಬಿದನೂರಿಗೆ 2019-20ನೇ ಸಾಲಿನಲ್ಲಿ 25 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಬೇಕು. ಅಲ್ಲದೇ 14 ಮತ್ತು 15 ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನವನ್ನೂ ಕೂಡ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಬಳ್ಳಾಪುರ: 14 ಮತ್ತು 15ನೇ ಹಣಕಾಸು ಯೋಜನೆ, ನಗರೋತ್ಥಾನ ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಗಳಡಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಮತ್ತು ಸಂಪೂರ್ಣವಾಗಿ ಬಳಕೆ ಮಾಡುವ ಮೂಲಕ ಎಲ್ಲಾ ನಗರಗಳನ್ನು ಸ್ವಚ್ಛ, ಸುಂದರ ನಗರಗಳನ್ನಾಗಿ ಪರಿವರ್ತಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಗೌರಿಬಿದನೂರು ನಗರಸಭೆ ಕಚೇರಿಯಲ್ಲಿ ನಡೆದ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಗರೋತ್ಥಾನ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಯೋಜನೆಯಡಿ ಪ್ರತಿ ನಗರಸಭೆಗೆ ವಾರ್ಷಿಕ 25 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಗೌರಿಬಿದನೂರಿಗೆ 2019-20ನೇ ಸಾಲಿನಲ್ಲಿ 25 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನುಸಂಪೂರ್ಣವಾಗಿ ಬಳಕೆ ಮಾಡಬೇಕು. ಅಲ್ಲದೇ 14 ಮತ್ತು 15 ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನವನ್ನೂ ಕೂಡ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರೋತ್ಥಾನ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಕ್ರಿಯಾಯೋಜನೆಯಂತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್

ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲವೊಂದು ಅನುದಾನ ಕಡಿತ ಆಗಿದೆ. ಈ ಅವಧಿಯಲ್ಲಿ ಸರ್ಕಾರಕ್ಕೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ನಗರೋತ್ಥಾನದ ವಿವಿಧ ಹಂತಗಳು ಸೇರಿದಂತೆ ಇತರೆ ಅನುದಾನಗಳನ್ನು ಬಿಡುಗಡೆ ಮಾಡುವುದು ಬಾಕಿ ಇದೆ. ಬಾಕಿಯಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಗೌರಿಬಿದನೂರು ಕ್ಷೇತ್ರದ ಶಾಸಕರಾದ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ಗೌರಿಬಿದನೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿ ಮೂರು ವರ್ಷ ಕಳೆದಿದೆ. ಈ ಬಳಿಕ ನಗರದ ಸುತ್ತಮುತ್ತಲಿನ ಹಲವು ಗ್ರಾಮಗಳು ಮತ್ತು ಎರಡು ಮೂರು ಗ್ರಾಮ ಪಂಚಾಯಿತಿಗಳು ನಗರಸಭೆ ವ್ಯಾಪ್ತಿಗೆ ಬಂದಿವೆ. ಈ ಭಾಗದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಸಭೆಗೂ ಮುನ್ನ ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ನಗರದ ಹೊರವಲಯದ ಉತ್ತರ ಪಿನಾಕಿನಿ ನದಿಯ ಕಿಂಡಿ ಅಣೆಕಟ್ಟಿಗೆ ನೀರು ಬಂದಿದ್ದು, ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಬಾಗಿನ ಅರ್ಪಿಸಿದರು.

Last Updated :Aug 26, 2021, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.