ETV Bharat / state

ಬಂಡೀಪುರ ಕಾಡಲ್ಲಿ ಗುಂಡಿನ ಚಕಮಕಿ: ಬೇಟೆಗೆ ತೆರಳಿದ್ದ ಯುವಕ ಸಾವು

author img

By ETV Bharat Karnataka Team

Published : Nov 5, 2023, 9:17 AM IST

Updated : Nov 5, 2023, 9:46 PM IST

Bandipur forest
ಬಂಡೀಪುರ ಅರಣ್ಯ

Fire exchange at Bandipur forest: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಬೇಟೆಗಾರ ಮೃತಪಟ್ಟಿದ್ದಾನೆ.

ಚಾಮರಾಜನಗರ: ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು, ಓರ್ವ ಯುವಕ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಮನು (27) ಮೃತ ಯುವಕ.

ಮೂರರಿಂದ ನಾಲ್ಕು ಕಡವೆ ಬೇಟೆಯಾಡಿ ಅರಣ್ಯದಿಂದ ಹೊರಗೆ ಬರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೇಟೆಗಾರರನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮುಂದಾಗಿದ್ದಾರೆ‌. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಬೇಟೆಗಾರರು ‌ನಾಡಬಂದೂಕಿನಿಂದ ದಾಳಿ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಅರಣ್ಯ ಇಲಾಖೆಯವರು ಪ್ರತಿದಾಳಿ ನಡೆಸಿ, ಬೇಟೆಗಾರರ ಮೇಲೆ ಗುಂಡು ಹಾರಿಸಿದ್ದಾರೆ.

ದಾಳಿ ವೇಳೆ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡು ಬೇಟೆಗೆ ತೆರಳಿದ್ದ ಯುವಕನ ಬೆನ್ನಿಗೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಉಳಿದ ಬೇಟೆಗಾರರು ಪರಾರಿಯಾಗಿದ್ದಾರೆ. ಸುಮಾರು 10 ಮಂದಿ ಬೇಟೆಗಾರರ ತಂಡ ಜಿಂಕೆ, ಕಡವೆ ಬೇಟೆಗೆ ಕಾಡಿನ ಒಳಗೆ ನುಗ್ಗಿದ್ದರು ಎಂದು ತಿಳಿದುಬಂದಿದೆ.

ನಾಡಬಂದೂಕುಗಳಿಂದ ಕಳ್ಳಬೇಟೆಗೆ ಬಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಈ ಘಟನೆ ನಡೆದಿದೆ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ತಿಳಿಸಿದ್ದಾರೆ.

ಎಸ್ಪಿ, ತಹಶೀಲ್ದಾರ್ ಭೇಟಿ: ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿನಿಂದ ಯುವಕ ಮೃತಪಟ್ಟಿರುವ ಮಾಹಿತಿ ಅರಿತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ತಹಶೀಲ್ದಾರ್ ಟಿ.ರಮೇಶ್ ಬಾಬು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: 'ವನ್ಯಜೀವಿ ಸಂರಕ್ಷಣಾ ಕಾಯ್ದೆ-1972'ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಡಿಸಿಎಫ್- ವಿಡಿಯೋ ನೋಡಿ

ವನ್ಯಜೀವಿ ಸಂರಕ್ಷಣೆಗೆ 1972ರಲ್ಲಿ ಕಾಯ್ದೆ: ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ 1972ರಲ್ಲಿ ಕಾಯ್ದೆ ಜಾರಿಗೊಳಿಸಲಾಯಿತು. ಹಲವು ಬಾರಿ ತಿದ್ದುಪಡಿ ಮಾಡಿ ವನ್ಯಜೀವಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ತರಲಾಗಿದೆ. ಈ ಕಾಯ್ದೆಯಡಿ ಪಟ್ಟಿ ಮಾಡಿದ ವನ್ಯಜೀವಿ ಮತ್ತು ಸಸ್ಯವರ್ಗಗಳಿಗೆ ಯಾವುದೇ ರೀತಿಯ ಹಾನಿ ಉಂಟುಮಾಡುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿದೆ ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ. 1972 ಕಾಯ್ದೆ ನಂತರ ಕಳ್ಳಬೇಟೆಗೆ ಸಾಕಷ್ಟು ಕಡಿವಾಣ ಬಿದ್ದಿದೆ. ಆದರೂ ಅಲ್ಲಲ್ಲಿ ನಡೆಯುತ್ತಿವೆ.

Last Updated :Nov 5, 2023, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.