ETV Bharat / state

ಬರ ಪರಿಹಾರ ಒದಗಿಸಲು ಸರ್ಕಾರ ರೈತರ ಬೆನ್ನೆಲುಬಾಗಿ ನಿಂತಿದೆ: ಸಚಿವ ಬಿ ನಾಗೇಂದ್ರ

author img

By ETV Bharat Karnataka Team

Published : Nov 10, 2023, 8:45 PM IST

Etv Bharatminister-b-nagendra-did-drought-survey-in-bellary-district
ಬರ ಪರಿಹಾರ ಒದಗಿಸಲು ಸರ್ಕಾರ ರೈತರ ಬೆನ್ನೆಲುಬಾಗಿ ನಿಂತಿದೆ: ಸಚಿವ ಬಿ ನಾಗೇಂದ್ರ

ಬಳ್ಳಾರಿ ಜಿಲ್ಲೆಯ 5 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಅವಲೋಕಿಸಿ, ಇದೇ ತಿಂಗಳ ನ.15 ರೊಳಗಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವ ಬಿ ನಾಗೇಂದ್ರ ತಿಳಿಸಿದ್ದಾರೆ.

ಸಚಿವ ಬಿ ನಾಗೇಂದ್ರ ಪ್ರತಿಕ್ರಿಯೆ

ಬಳ್ಳಾರಿ: ಈ ಬಾರಿಯ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಯಾರೂ ಆತಂಕ ಪಡಬಾರದು. ಸರ್ಕಾರ ಮತ್ತು ಜಿಲ್ಲಾಡಳಿತ ನಿಮ್ಮ ಜತೆಗಿದೆ ಎಂದು ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಅವರು ರೈತರಿಗೆ ಧೈರ್ಯ ತುಂಬಿದರು. ಇಂದು ಜಿಲ್ಲೆಯ ಸಿರುಗುಪ್ಪ-ಕುರುಗೋಡು ತಾಲೂಕುಗಳ ವ್ಯಾಪ್ತಿಯ ವಿವಿಧ ಗ್ರಾಮಗಳಾದ ರಾರಾವಿ, ಅಗಸನೂರು, ಬೊಮ್ಮಲಾಪುರ, ಕೊತ್ತಲಚಿಂತೆ, ಮಿಟ್ಟೆ ಸುಗೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಬರ ಪರಿಸ್ಥಿತಿ ವೀಕ್ಷಣೆ ಮಾಡಿ, ರೈತರಿಗೆ ಸಾಂತ್ವನ ಹೇಳಿದರು.

ರಾರಾವಿ ಗ್ರಾಮದ ರೈತ ಮಂಜಪ್ಪನ ಹತ್ತಿ ಹೊಲ, ಕೊರವರ ಮಾರೆಪ್ಪನ ಮೆಣಸಿನಕಾಯಿ ಹೊಲಕ್ಕೆ ಭೇಟಿ ನೀಡಿ, ಬೆಳೆ ಪರೀಕ್ಷಿಸಿದರು. ಅದೇ ರೀತಿಯಾಗಿ ಅಗಸನೂರು ಗ್ರಾಮದ ರೈತ ಹುಸೇನಪ್ಪನ ಮೆಣಸಿನಕಾಯಿ ಬೆಳೆ, ಮಿಟ್ಟೆ ಸುಗೂರಿನ ಹನುಮಂತ, ಬೊಮ್ಮಲಾಪುರ ಗ್ರಾಮದ ಮಣಿಯಪ್ಪ ರೈತರ ಮೆಣಸಿನಕಾಯಿ ಬೆಳೆಗಳ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರು ಯಾರೂ ಧೃತಿಗೆಡಬಾರದು, ಸಮೀಕ್ಷೆ ಅನುಸಾರ ಬರ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ರೈತರ ಬೆನ್ನೆಲುಬಾಗಿ ನಿಂತಿದೆ. ಯಾರೂ ಆತಂಕ ಪಡಬಾರದು ಎಂದು ಸಚಿವ ಬಿ.ನಾಗೇಂದ್ರ ಅವರು ರೈತರಿಗೆ ಮನವರಿಕೆ ಮಾಡಿದರು.

Minister B Nagendra  did Drought survey in Bellary district
ರೈತರಿಂದ ಮಾಹಿತಿ ಪಡೆದ ಸಚಿವ ಬಿ ನಾಗೇಂದ್ರ

ಸಿರುಗುಪ್ಪ ತಾಲೂಕು ಭಾಗದ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 2,300 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ, ಹತ್ತಿ ಬೆಳೆ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿದೆ, ಅಲ್ಲಲ್ಲಿ ಬೆಳೆ ರೋಗ ಅಂಟಿದೆ. ಈಗಾಗಲೇ ಎನ್.ಡಿ.ಆರ್.ಎಫ್ ತಂಡವು ಭೇಟಿ ನೀಡಿದ್ದು, ಸಮೀಕ್ಷೆ ನಡೆಸಿದ್ದಾರೆ" ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಚಿವರಿಗೆ ಗಮನಕ್ಕೆ ತಂದರು.

ಬರ ಅಧ್ಯಯನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ: ಮುಖ್ಯಮಂತ್ರಿಗಳ ನಿರ್ದೇಶನದಂತೆ, ಜಿಲ್ಲೆಯ 5 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಅವಲೋಕಿಸಿ, ಇದೇ ತಿಂಗಳ ನ.15 ರೊಳಗಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.

Minister B Nagendra  did Drought survey in Bellary district
ಮೆಣಸಿನಕಾಯಿ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 4,43,000 ಹೆಕ್ಟೇರ್ ಭೂಮಿ ಸಾಗುವಳಿ ಕ್ಷೇತ್ರವಾಗಿದ್ದು, ಈ ವರ್ಷದ ಮಂಗಾರು ಮಳೆ ಅಭಾವದಿಂದ ಕೇವಲ 2,78,227 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 573 ಮಿ.ಮೀ ವಾಡಿಕೆ ಮಳೆಯಾಗಿದ್ದು, ಕೇವಲ 261 ಮೀ.ಮೀ ಪ್ರಮಾಣದಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡವು ಸಮೀಕ್ಷೆ ನಡೆಸಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿ ಅನ್ವಯದಂತೆ 1 ಹೆಕ್ಟೇರ್ ಪ್ರದೇಶದ ಖುಷ್ಕಿ ಬೆಳೆಗೆ ರೂ.8,500 ಪರಿಹಾರ, 1 ಹೆಕ್ಟೇರ್ ಪ್ರದೇಶದ ನೀರಾವರಿ ಬೆಳೆಗೆ ರೂ.17,000 ಪರಿಹಾರ, 1 ಹೆಕ್ಟೇರ್ ಪ್ರದೇಶದ ಬಹುವಾರ್ಷಿಕ ಬೆಳೆಗೆ ರೂ. 22,000 (ತೋಟಗಾರಿಕೆ ಬೆಳೆಗಳಿಗೆ) ಪರಿಹಾರ ನಿಗದಿಪಡಿಸಿದೆ ಎಂದು ವಿವರಿಸಿದರು.

ಇದನ್ನೂ ಓದಿ: 15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ: ಸಚಿವ ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.