ETV Bharat / state

ಇವ್ರು ಐಎಎಸ್ ಅಧಿಕಾರಿಗಳಿಗೆ ಪಾಠ ಮಾಡಲಿರುವ ಗ್ರಾಮ ಪಂಚಾಯತ್​ ಅಧ್ಯಕ್ಷ

author img

By

Published : Aug 28, 2022, 10:20 AM IST

gram panchayat president
ಗ್ರಾಮ ಪಂಚಾಯತ್​ ಅಧ್ಯಕ್ಷ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್​ ಅಧ್ಯಕ್ಷ ಮಹೇಂದ್ರ ಅವರು ಉತ್ತರಾಖಂಡ ರಾಜ್ಯದ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್​ನಲ್ಲಿ ಸುಮಾರು 500 ತರಬೇತಿ ನಿರತ ಐಎಎಸ್ ಅಧಿಕಾರಿಗಳಿಗೆ ಆಗಸ್ಟ್​ 30 ರಂದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಕುರಿತು ಪಾಠ ಮಾಡಲಿದ್ದಾರೆ.

ವಿಜಯನಗರ: ದೇಶದ ಕಾರ್ಯಾಂಗದ ಅವಿಭಾಜ್ಯ ಹಾಗೂ ಪ್ರಮುಖ ಅಂಗವಾದ ಐಎಎಸ್ ಅಧಿಕಾರಿ ವರ್ಗವು ಆಡಳಿತಾತ್ಮಕವಾಗಿ ರಾಷ್ಟ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂತಹ ಅಧಿಕಾರಿಯಾಗಲು ತರಬೇತಿ ಪಡೆಯುತ್ತಿರುವ ಐಎಎಸ್ ಅಧಿಕಾರಿಗಳಿಗೆ ಪಾಠ ಮಾಡುವ ಅವಕಾಶವೊಂದು ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯತ್​ ಅಧ್ಯಕ್ಷರಿಗೆ ಒಲಿದು ಬಂದಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್​ ಅಧ್ಯಕ್ಷ ಮಹೇಂದ್ರ ಅವರು ಉತ್ತರಾಖಂಡ ರಾಜ್ಯದ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್​ನಲ್ಲಿ ಸುಮಾರು 500 ತರಬೇತಿನಿರತ ಐಎಎಸ್ ಅಧಿಕಾರಿಗಳಿಗೆ ಆಗಸ್ಟ್​ 30 ರಂದು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಕೈಗೊಂಡಿರುವ ವಿವಿಧ ಯೋಜನೆಗಳ ವಿವರ ಹಾಗೂ ಅವುಗಳ ಯಶಸ್ವಿ ಅನುಷ್ಠಾನ ಮಾಡುವ ಪ್ರಕ್ರಿಯೆ ಕುರಿತು ತಮ್ಮ ಕಾರ್ಯಾನುಭವ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ: ಸೈಕಲ್‌ನಲ್ಲಿ ಕಚೇರಿಗೆ ಆಗಮಿಸ್ತಾರೆ ಹಿರಿಯ ಐಎಎಸ್ ಅಧಿಕಾರಿ ಪುರುಷೋತ್ತಮ್

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಯೋಜನೆಗಳ ಜಾರಿಯಲ್ಲಿ ಎದುರಿಸಬಹುದಾದ ಸಮಸ್ಯೆ ಹಾಗೂ ಸವಾಲುಗಳನ್ನು ಈ ತರಬೇತಿ ನಿರತ ಐಎಎಸ್ ಅಧಿಕಾರಿಗಳಿಗೆ ಮಹೇಂದ್ರ ಅವರು ವಿವರಿಸಲಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಂದ್ರ, ಡಿಪ್ಲೊಮಾ ಪದವೀಧರ. ತಾವು ಹುಟ್ಟಿ ಬೆಳೆದ ಪರಿಸರದಲ್ಲಿಯೇ ಏನಾದರೂ ಸಾಧಿಸಬೇಕೆಂದು ನಿರ್ಣಯಿಸಿ ಹುಟ್ಟೂರಿಗೆ ಮರಳಿದ ಇವರು, ಸಮಾಜ ಸೇವೆ ಮಾಡುವ ಮೂಲಕ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟರು. ಅಧಿಕಾರ ವಿಕೇಂದ್ರೀಕರಣವೇ ಗ್ರಾಮೀಣ ಪ್ರದೇಶಗಳ ರೂಪಾಂತರಕ್ಕೆ ರಹದಾರಿ ಎಂದು ಮನಗೊಂಡಿರುವ ಮಹೇಂದ್ರ, ದೇವಗೊಂಡನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ವಿವಿಧ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಜನಪ್ರಿಯರಾಗಿದ್ದಾರೆ.

ಇದನ್ನೂ ಓದಿ: ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಇವರು ಗುಜುನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಂದ ಮೀನಿನಾಕಾರದ ಕೆರೆ ನಿರ್ಮಾಣ ಮಾಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೆಚ್ಚುಗೆ ಪಾತ್ರರಾಗಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ತಮ್ಮ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಮಹೇಂದ್ರ ಅವರ ಈ ಯಶಸ್ವಿ ಕಾರ್ಯನಿರ್ವಹಣೆಯು ಇಂದು ಐಎಎಸ್ ಅಧಿಕಾರಿಗಳಿಗೆ ಪಾಠ ಮಾಡುವ ಅವಕಾಶ ದೊರಕಿಸಿಕೊಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೂವಿನಹಡಗಲಿ ತಾಲೂಕಿನ ಸುಮಾರು 14 ಕಡೆ ನರೇಗಾ ಯೋಜನೆಯಡಿ ಅಮೃತ ಸರೋವರ ನಿರ್ಮಿಸಲಾಗುತ್ತಿದೆ. ಅಲ್ಲದೇ, ಇದೇ ಯೋಜನೆಯಡಿ ಜಲಶಕ್ತಿ ಅಭಿಯಾನ, ಕ್ಯಾಚ್ ದಿ ರೇನ್, ಪೌಷ್ಟಿಕ ಆಹಾರಕ್ಕಾಗಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕೈತೋಟ ನಿರ್ಮಾಣ. ಗ್ರಾಮೀಣ ಭಾಗದ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಸೇರಿದಂತೆ ಇತ್ಯಾದಿ ಯೋಜನೆಗಳ ಕುರಿತು ವಿವರಣೆಯನ್ನು ತರಬೇತಿ ನಿರತ ಐಎಎಸ್ ಅಧಿಕಾರಿಗಳಿಗೆ ಮಹೇಂದ್ರ ತಿಳಿಸಿ ಕೊಡಲಿದ್ದಾರೆ.

lake
ಮೀನಿನಾಕಾರದ ಕೆರೆ ನಿರ್ಮಾಣ

ಇದನ್ನೂ ಓದಿ: ನರೇಗಾ ನೆರವು: ವೆಂಕಟಾಪುರ ಬಾವಿಗೆ ಪುನಶ್ಚೇತನ ಭಾಗ್ಯ

ಇದಲ್ಲದೇ, ಹಳ್ಳಿಗಳಲ್ಲಿ ಮಾದರಿ ಶಾಲೆ, ಡಿಜಿಟಲ್ ಗ್ರಂಥಾಲಯ, ಮಹಿಳಾ ಸಬಲೀಕರಣಕ್ಕೆ ನರ್ಸರಿ ಅಭಿವೃದ್ಧಿ, ಇಂಗು ಗುಂಡಿ, ಮಳೆ ಕೊಯ್ಲು, ಕಲ್ಯಾಣಿಗಳ ಪುನಃಶ್ವೇತನ, ಇಕೋ ಪಾರ್ಕ್, ಕೆರೆಗಳ ಅಭಿವೃದ್ಧಿಯಂತಹ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಮಾಹಿತಿ ಒದಗಿಸಲಿದ್ದಾರೆ. ಈ ಅಪೂರ್ವ ಅವಕಾಶ ಪಡೆದಿರುವ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್​ ಅಧ್ಯಕ್ಷ ಮಹೇಂದ್ರ ಅವರಿಗೆ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿ : ಮಕ್ಕಳಿಗೆ ಮುದ.. ಓದಲು ಆಹ್ಲಾದಕರ ವಾತಾವರಣ.. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಸ್ವಚ್ಛತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.