ETV Bharat / state

ಪಕ್ಷಿಗಳ ದಾಹ ತಣಿಸಲು ಮುಂದಾದ ಕಾಲೇಜು ವಿದ್ಯಾರ್ಥಿಗಳು; ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

author img

By

Published : Mar 25, 2021, 9:43 PM IST

hospete students giving water to birds
ಪಕ್ಷಿಗಳ ದಾಹ ತಣಿಸಲು ಮುಂದಾದ ಕಾಲೇಜು ವಿದ್ಯಾರ್ಥಿಗಳು

ಬಿಸಿಲಿನ ಪ್ರಖರತೆಯಿಂದ ತಪ್ಪಿಸಿಕೊಳ್ಳಲು ಬೇಸಿಗೆಯಲ್ಲಿ ಪಕ್ಷಿಗಳು ನೀರಿಗಾಗಿ ಹಾತೊರೆಯುತ್ತಿರುತ್ತವೆ. ಇದನ್ನು ಅರಿತ ನಗರದ ಥಿಯೋಸಾಫಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಸತತ ಏಳು ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ಕಾಲೇಜಿನಲ್ಲಿ ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಒದಗಿಸುವ ಕಾರ್ಯವನ್ನು‌ ಮಾಡುತ್ತಿದ್ದಾರೆ.

ಹೊಸಪೇಟೆ (ವಿಜಯನಗರ): ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಈ ದಿನಗಳಲ್ಲಿ ಪಕ್ಷಿಗಳು ನೀರಿಗಾಗಿ ಅಲೆಯುತ್ತಿರುತ್ತವೆ. ಇದನ್ನು ಅರಿತ ನಗರದ ಥಿಯೋಸಾಫಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಸತತ ಏಳು ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಒದಗಿಸುವ ಕಾರ್ಯವನ್ನು‌ ಮಾಡುತ್ತಿದ್ದಾರೆ.

ಕಾಲೇಜಿನ ಬಿಎ, ಬಿಕಾಂ,ಎನ್​ಎಸ್​ಎಸ್ ಘಟಕದ ವಿದ್ಯಾರ್ಥಿಗಳು ಈ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಲೇಜಿನ ಮರಗಳಿಗೆ ಸುಮಾರು 30 ಮಣ್ಣಿನ ಮಡಿಕೆಗಳನ್ನು ನೇತು ಹಾಕಿ, ನೀರು ಹಾಗೂ ಆಹಾರವನ್ನು ದೊರೆಯುವಂತೆ ಮಾಡಿದ್ದಾರೆ.‌ ಪ್ರತಿ ವರ್ಷ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಈ ಕೆಲಸ ಮಾಡುತ್ತಿರುವುದು ವಿಶೇಷ.

ಪಕ್ಷಿಗಳ ದಾಹ ತಣಿಸಲು ಮುಂದಾದ ಕಾಲೇಜು ವಿದ್ಯಾರ್ಥಿಗಳು

ಸ್ವಯಂ ಹಣ ಸಂಗ್ರಹಣೆ:

ಹಣ ಸಂಗ್ರಹಕ್ಕಾಗಿ ಕಾಣಿಕೆ‌ ಡಬ್ಬಿಯನ್ನು ಮಾಡಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಹಣ ಹಾಕಬಹುದು.‌ ಆ ಹಣದಿಂದ ಪಕ್ಷಿಗಳಿಗೆ ಆಹಾರವನ್ನು ಖರೀದಿ ಮಾಡಲಾಗುತ್ತದೆ. ಈ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗಳ ಹಣದಿಂದ ಖರೀದಿ ಮಾಡಲಾಗುತ್ತಿದೆ. ಅಲ್ಲದೇ, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ‌ ಮನೆಯಿಂದ ದವಸ ಹಾಗೂ ಧಾನ್ಯಗಳನ್ನು ಕಾಲೇಜಿಗೆ ತರುತ್ತಿರುವುದು ವಿಶೇಷವಾಗಿದೆ.

ಮನೆಯಲ್ಲೂ ಪಕ್ಷಿ ಸ್ನೇಹಿ ಕಾರ್ಯ:

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಕ್ಷಿಗಳಿಗಾಗಿ‌‌ ಈ‌‌ ಕಾರ್ಯ ಮಾಡುತ್ತಿಲ್ಲ. ಮನೆಯಲ್ಲೂ ಸಹ ನೀರು ಮತ್ತು ಆಹಾರವನ್ನು‌ ಇಡುತ್ತಿದ್ದಾರೆ. ಇದು ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳಿಗೆ ಅನಕೂಲವಾಗಲಿದೆ.

ನಿರಂತರ ಮೂರು ತಿಂಗಳ‌ ಕಾರ್ಯ:

ಮಾರ್ಚ್, ಏಪ್ರಿಲ್, ಮೇ ಈ‌ ಮೂರು ತಿಂಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಕಾಲೇಜಿನಲ್ಲಿ ಒದಗಿಸಲಾಗುತ್ತದೆ. ಈ‌ ಬಾರಿ ಬಿಸಿಲು ಹೆಚ್ಚು ಇರುವ ಪರಿಣಾಮ ಪಕ್ಷಿಗಳು ನೀರಿಗಾಗಿ ಹಾತೊರೆಯುವ ಸ್ಥಿತಿ ಇದೆ.

ಇದನ್ನೂ ಓದಿ: ವಿಮ್ಸ್​ನಲ್ಲಿ ವಿಕಿರಣ ಚಿಕಿತ್ಸಾ ವಿಭಾಗ ಪುನಾರಂಭ: ತಪ್ಪಿತು ಕ್ಯಾನ್ಸರ್ ರೋಗಿಗಳ ಅಲೆದಾಟ

ಈಟಿವಿ‌ ಭಾರತದೊಂದಿಗೆ ಕಾಲೇಜಿನ ಪ್ರಾಚಾರ್ಯರಾದ ಡಾ.ಸಂಗೀತಾ ಗಾಂವಕರ ಮಾತನಾಡಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸತತ ಏಳು ವರ್ಷಗಳಿಂದ ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಒದಗಿಸಲಾಗುತ್ತಿದೆ.‌ ಬೇಸಿಗೆ ಸಂದರ್ಭದಲ್ಲಿ ಮನುಷ್ಯರಂತೆ ಪಕ್ಷಿಗಳಿಗೂ ಸಹ ನೀರು ಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಈ‌ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರು.

ವಿದ್ಯಾರ್ಥಿನಿ ಸುಷ್ಮಿತಾ ಅವರು‌ ಮಾತನಾಡಿ, ಪಕ್ಷಿಗಳು ಬೇಸಿಗೆ ಸಂದರ್ಭದಲ್ಲಿ ನೀರು ಮತ್ತು ಆಹಾರ ಸಿಗದೇ ನಿತ್ರಾಣವಾಗುತ್ತವೆ. ಇದನ್ನು ತಪ್ಪಿಸಲು ಈ ಯೋಜನೆಯನ್ನು ಜಾರಿಗೆ ತರಲಾಯಿತು. ವಿದ್ಯಾರ್ಥಿಗಳು ಸಾಮಾಜಮುಖಿ ಕಾರ್ಯಕ್ಕೆ 5 ರಿಂದ 10 ರೂ. ಸ್ವಯಂ ಪ್ರೇರಿತರಾಗಿ‌ ನೀಡುತ್ತಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.