ETV Bharat / state

ನೈಸ್​ನಿಂದ ಆದಷ್ಟು ಬೇಗ 554 ಎಕರೆ ಹೆಚ್ಚುವರಿ ಭೂಮಿ ವಾಪಸ್ ಪಡೆಯುತ್ತೇವೆ: ಸಚಿವ ದರ್ಶನಾಪುರ

author img

By ETV Bharat Karnataka Team

Published : Dec 5, 2023, 5:25 PM IST

Updated : Dec 5, 2023, 8:00 PM IST

Vidhan Parishad
ವಿಧಾನ ಪರಿಷತ್ ಕಲಾಪ

ಬೆಳಗಾವಿಯ ಸುರ್ವಣ ಸೌಧದಲ್ಲಿ ನಡೆದ ವಿಧಾನ ಪರಿಷತ್​ ಕಲಾಪದಲ್ಲಿ ನೈಸ್ ಸಂಸ್ಥೆಯಿಂದ ಹೆಚ್ಚುವರಿ ಜಮೀನನ್ನು ಸರ್ಕಾರ ವಾಪಸ್ ಪಡೆಯುವ ವಿಚಾರದ ಕುರಿತು ಚರ್ಚೆ ನಡೆಯಿತು.

ಬೆಳಗಾವಿ/ಬೆಂಗಳೂರು: ನೈಸ್ ಸಂಸ್ಥೆ ಬಳಿ ಇರುವ 554 ಎಕರೆ ಹೆಚ್ಚುವರಿ ಜಮೀನನ್ನು ಆದಷ್ಟು ಬೇಗ ಸರ್ಕಾರ ವಾಪಸು ಪಡೆಯಲಿದೆ. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ನೈಸ್ ಸಂಸ್ಥೆಯಿಂದ ಹೆಚ್ಚುವರಿ ಜಮೀನು ವಾಪಸ್ ಪಡೆಯುವ ವಿಚಾರದ ಕುರಿತು ಬಿಜೆಪಿ ಸದಸ್ಯ ತುಳಸಿಮುನಿ ರಾಜುಗೌಡ ಅವರು, ನೈಸ್ ಕಂಪನಿಗೆ ಹೆಚ್ಚುವರಿ ಭೂಮಿ ನೀಡಲಾಗಿದೆ. ಇದುವರೆಗೆ ಹೆಚ್ಚುವರಿ ಭೂಮಿಯನ್ನು ಸರ್ಕಾರ ವಾಪಸ್ ಪಡೆದಿಲ್ಲ. 554 ಎಕರೆ ಹೆಚ್ಚುವರಿ ಭೂಮಿ ನೀಡಿರುವ ಬಗ್ಗೆ ಸುಪ್ರಿಂಕೋರ್ಟ್​ ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಆದರೆ ಒಂದೂವರೆ ವರ್ಷದಿಂದಲೂ ಹೆಚ್ಚುವರಿ ಜಮೀನು ವಾಪಸ್ ಪಡೆದಿಲ್ಲ. ಅಧಿಕಾರಿಗಳ ಬಳಿ ನಾವು ಕೇಳಿದ್ದಕ್ಕೆ ಯಾವುದೇ ಮಾಹಿತಿ ಇಲ್ಲ. ನೂರಾರು ಜನ ರೈತರಿಗೆ ಪರಿಹಾರವನ್ನೂ ಕೊಟ್ಟಿಲ್ಲ. ರೈತರು ಸತ್ತರೆ ಅವರ ಹೆಣ ಹೂಳುವುದಕ್ಕೂ ಅಧಿಕಾರಿಗಳು ಬಿಡ್ತಿಲ್ಲ, ಲಕ್ಷ ರೂಪಾಯಿ ಇದ್ದ ಭೂಮಿಯ ಬೆಲೆ ಇದೀಗ ಕೋಟಿ ಆಗಿದೆ. ರೈತರಿಗೆ ಸಂಬಂಧಪಟ್ಟ ಜಮೀನು ಇದುವರೆಗೂ ಸರ್ವೆ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ನೈಸ್ ಸಂಸ್ಥೆ 554 ಎಕರೆ ಜಮೀನನ್ನು ವಾಪಸ್ ಕೊಡಬೇಕಿದೆ. ಅವರು ಹೇಳುತ್ತಿರುವ ಸರ್ವೇ ನಂಬರ್ ಹಾಗೂ ದಾಖಲೆ ಇಟ್ಟಿರುವ ಸರ್ವೆ ನಂಬರ್ ಗೂ ವ್ಯತ್ಯಾಸ ಇದೆ. ಅವರಿಗೆ ಕೊಟ್ಟ ಜಾಗ ಅಂದರೆ ನಾವು ಸೂಚಿಸಿದ ಜಾಗ ವಾಪಸ್​ ​ಬೇಕು. ಆದಷ್ಟು ಬೇಗ ಆ ಜಾಗೆಯನ್ನು ಸರ್ಕಾರದಿಂದ ವಾಪಸ್​ ಪಡೆಯುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸದನಕ್ಕೆ ತಿಳಿಸಿದರು.

ವಿಧಾನಪರಿಷತ್ ಕಲಾಪ

ಯಶಸ್ವಿನಿ ಯೋಜನೆ, ನವಜಾತ ಶಿಶುವಿಗೆ ವರ್ಷದವರೆಗೆ ಚಿಕಿತ್ಸೆ; ಯಶಸ್ವಿನಿ ಯೋಜನೆಯ ಫಲಾನುಭವಿ ತಾಯಿ, ನವಜಾತ ಶಿಶುವಿಗೆ ತಿಂಗಳವರೆಗೆ ಮಾತ್ರ ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು. ಇನ್ನು ಮುಂದಿನ ದಿನಗಳಲ್ಲಿ ಯೋಜನೆಯಡಿ ಚಿಕಿತ್ಸೆ ನೀಡುವುದನ್ನು ವರ್ಷಕ್ಕೆ ವಿಸ್ತರಣೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಸಿ ಎನ್ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜಣ್ಣ, 2003ರಲ್ಲಿ ಎಸ್ ಎಂ ಕೃಷ್ಣ ಆಡಳಿತಾವಧಿಯಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಯಿತು. ನಂತರ ಕೇಂದ್ರದ ಆರೋಗ್ಯ ಯೋಜನೆ ಜಾರಿಯಿಂದ ಯಶಸ್ವಿನಿ ಯೋಜನೆ ಸ್ಥಗಿತ ಮಾಡಲಾಗಿತ್ತು. ಆದರೆ 2022-23ರಿಂದ ಮತ್ತು ಯೋಜನೆಗೆ ಮರುಚಾಲನೆ ನೀಡಲಾಗಿದೆ.

ಹಳೆಯ ಯೋಜನೆ ಜಾರಿಯಿದ್ದ ವೇಳೆ ಯೋಜನೆಗೆ ನೋಂದಾಯಿಸಿಕೊಂಡಿದ್ದ ಕೆಲ ಆಸ್ಪತ್ರೆಗಳಿಗೆ ಹಣ ಬಾಕಿ ಇದೆ ಎನ್ನುವುದು ನಿಜ, ಅದಕ್ಕೆ ಕಾರಣಗಳನ್ನು ಆಸ್ಪತ್ರೆಗಳಿಗೆ ನೀಡಲಾಗಿದೆ. ಆದರೆ ಹೊಸದಾಗಿ ಯೋಜನೆ ಮರುಜಾರಿ ನಂತರ ಯಾವುದೇ ಆಸ್ಪತ್ರೆಗೂ ಹಣ ಬಾಕಿ ಇಲ್ಲ, ಅಲ್ಲದೆ ಹಿಂದೆ ಬಾಕಿ ಇದೆ ಎನ್ನುವ ಕಾರಣಕ್ಕೆ ಆ ಆಸ್ಪತ್ರೆಗಳು ಯೋಜನೆ ನೋಂದಣಿಯಿಂದ ದೂರ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಶಸ್ವಿನಿ ಯೋಜನೆಯ ಫಲಾನುಭವಿ ಮಹಿಳೆಗೆ ಜನಿಸುವ ಶಿಶುವಿಗೆ 1 ತಿಂಗಳ ವರೆಗೂ ತಾಯಿಯ ಹೆಸರಿನ ಯಶಸ್ವಿನಿ ಕಾರ್ಡ್ ಅಡಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಈಗ ಅದನ್ನು 1 ವರ್ಷಕ್ಕೆ ವಿಸ್ತರಿಸಬೇಕು ಎನ್ನುವ ಬೇಡಿಕೆಯನ್ನು ಸದಸ್ಯರು ಒತ್ತಾಯಿಸಿದ್ದಾರೆ.

ಯಶಸ್ವಿನಿ ಯೋಜನೆ ಮರುಜಾರಿ ವೇಳೆಯಲ್ಲಿ ಮಾನದಂಡದಲ್ಲಿ ಸಾಕಷ್ಟು ಮಾರ್ಪಾಡು ಮಾಡಿದ್ದೇವೆ.ಈಗ ನವಜಾತ ಶಿಶುವಿಗೆ 1 ವರ್ಷದವರೆಗೆ ತಾಯಿಯ ಯಶಸ್ವಿನಿ ಕಾರ್ಡ್ ನಲ್ಲಿಯೇ ಚಿಕಿತ್ಸೆ ಪಡೆಯುವ ಅವಕಾಶ ಕುರಿತು ಚಿಂತನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದರು.

ಇದನ್ನೂಓದಿ:ವಿಧಾನ ಪರಿಷತ್​ನಲ್ಲಿ ಆಡಳಿತ-ಪ್ರತಿಪಕ್ಷ ನಾಯಕರ ಗದ್ದಲ; ಪರಿಸ್ಥಿತಿ ತಿಳಿಗೊಳಿಸಿದ ಸಭಾಪತಿ ಹೊರಟ್ಟಿ

Last Updated :Dec 5, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.