ETV Bharat / state

ವಿಧಾನ ಪರಿಷತ್​ನಲ್ಲಿ ಆಡಳಿತ-ಪ್ರತಿಪಕ್ಷ ನಾಯಕರ ಗದ್ದಲ; ಪರಿಸ್ಥಿತಿ ತಿಳಿಗೊಳಿಸಿದ ಸಭಾಪತಿ ಹೊರಟ್ಟಿ

author img

By ETV Bharat Karnataka Team

Published : Dec 5, 2023, 3:11 PM IST

ಆಡಳಿತ ಪಕ್ಷ ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ
ಆಡಳಿತ ಪಕ್ಷ ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ

Belagavi winter session: ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿ/ಬೆಂಗಳೂರು: ಕೋಲಾರದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮದ ವಿಚಾರ ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟುಮಾಡಿತು. ಅಂತಿಮವಾಗಿ, ಪ್ರಶ್ನೆಯನ್ನು ತಡೆಹಿಡಿಯುವ ಮೂಲಕ ಸಭಾಪತಿ ಬಸವರಾಜ ಹೊರಟ್ಟಿ ಪರಿಸ್ಥಿತಿ ನಿಯಂತ್ರಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಪ್ರಶ್ನೆ ಕೇಳಿದರು. ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೋಲಾರ ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ, ನಿಯಮಬಾಹಿರ ಎಂ ಸ್ಯಾಂಡ್ ಉತ್ಪಾದನೆ ಆಗುತ್ತಿದೆ. ಇದಕ್ಕೆ ಸರ್ಕಾರ ಸರಿಯಾದ ಉತ್ತರ ಕೊಟ್ಟಿಲ್ಲ. ಅವರು ಹೇಗೆ ಬೇಕೋ ಹಾಗೆ ಉತ್ತರ ಕೊಟ್ಟರೆ ನಾವು ಕೇಳಬೇಕಾ? 40 ಕ್ರಶರ್ ಕೆಲಸ ಮಾಡ್ತಿದೆ ಎಂದು ಉತ್ತರ ಇದೆ. ಇದರಲ್ಲಿ ಅಧಿಕೃತ ಎಷ್ಟು, ಅನಧಿಕೃತ ಎಷ್ಟು? ಅಕ್ರಮ ಗಣಿಗಾರಿಕೆಗೆ ದಂಡ ಹಾಕಿದ್ದೀರಾ ಎಂದು ಪ್ರಶ್ನಿಸಿದರು.

ಗಣಿ ಸಚಿವರ ಪರವಾಗಿ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ, ಅಕ್ರಮ ಗಣಿಗಾರಿಕೆ ಅಥವಾ ಅಕ್ರಮ ಸಾಗಾಣಿಕೆಗೆ ದಂಡವಾ ಎನ್ನುವ ಹಿಂದೆ ವೈಯಕ್ತಿಕ ಹಿತಾಸಕ್ತಿ ಇದೆ ಎಂದರು. ಚಲುವರಾಯಸ್ವಾಮಿ ಹೇಳಿಕೆಗೆ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ, ಜೆಡಿಎಸ್ ಸದಸ್ಯರು ಕಿಡಿಕಾರಿದರು. ಇದರಿಂದ ಎಚ್ಚೆತ್ತ ಸಭಾಪತಿ ಹೊರಟ್ಟಿ ವೈಯಕ್ತಿಕ ಹಿತಾಸಕ್ತಿ ಪದವನ್ನು ಕಡತದಿಂದ ತೆಗೆದುಹಾಕಲು ಸೂಚಿಸಿದರು. ನಂತರ ಮಾತು ಮುಂದುವರೆಸಿದ ಚಲುವರಾಯಸ್ವಾಮಿ, ನಿಖರವಾಗಿ ಇಂತಹದ್ದರ ಬಗ್ಗೆ ಉತ್ತರ ಬೇಕು ಎಂದರೆ ಕೊಡುತ್ತೇವೆ ಎಂದರು.

ಸಚಿವರ ಈ ರೀತಿಯ ಹೇಳಿಕೆಗೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಪ್ರಶ್ನೆ ಕೇಳುವ ನಮ್ಮ ಹಕ್ಕಿಗೆ ಚ್ಯುತಿಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್​ನ ಬೋಜೇಗೌಡ, ಶರವಣ ಏರುದನಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ಪ್ರಶ್ನೆ ತಡೆಹಿಡಿದು ಗದ್ದಲಕ್ಕೆ ತೆರೆ ಎಳೆಯಲಾಯಿತು.

ಎಲೆಚುಕ್ಕೆ, ಕೊಳೆ ರೋಗ ಪರಿಹಾರಕ್ಕೆ ಕ್ರಮ: ಮಲೆನಾಡು ಭಾಗದಲ್ಲಿ ಅಡಿಕೆಗೆ ಎದುರಾಗಿರುವ ಕೊಳೆರೋಗ ಮತ್ತು ಎಲೆಚುಕ್ಕೆ ರೋಗದ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಚಲುವರಾಯಸ್ವಾಮಿ ತಿಳಿಸಿದರು. ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವ ರೀತಿ ಎಲೆಚುಕ್ಕೆ ರೋಗ ಮತ್ತು ಕೊಳೆರೋಗ ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು ಎಂದು ಸಂಶೋಧಿಸಲು ಕೃಷಿ ವಿವಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಶಿವಮೊಗ್ಗದ ಅರ್ಧಭಾಗ ಯುಜಿಡಿ ಅಡಿ ಬಂದಿದ್ದು, ಅರ್ಥಿಕ ಇಲಾಖೆ ಅನುಮೋದನೆ ಸಿಗುತ್ತಿದ್ದಂತೆ ಉಳಿದ ಭಾಗವನ್ನೂ ಯುಜಿಡಿ ಅಡಿಗೆ ತರಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು. ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿವಮೊಗ್ಗ ನಗರದಲ್ಲಿ ಸಮಗ್ರ ಒಳಚರಂಡಿ ಯೋಜನೆಯನ್ನು ಮೂರು ಸರ್ಕಾರಿ ಯೋಜನೆಯಲ್ಲಿ ತೆಗೆದುಕೊಳ್ಳಲಾಗಿದೆ. ಅಮೃತ್ ಒನ್, ಎನ್ಜಿಟಿ ಮತ್ತು ರಾಜ್ಯ ಯೋಜನೆಯಡಿ ತೆಗೆದುಕೊಳ್ಳಲಾಗಿದೆ.

ರಾಜ್ಯ ಯೋಜನೆಯಡಿ 115 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. 2007ರಲ್ಲಿ ಕಾಮಗಾರಿ ಆರಂಭಿಸಲಾಗಿದೆ. 262 ಕಿಲೋಮೀಟರ್ ಒಳಚರಂಡಿ ಮಾಡಬೇಕಿದೆ. ಇದರಲ್ಲಿ254 ಕಿಲೋಮೀಟರ್ ಮುಗಿಸಿದ್ದೇವೆ. 8 ಕಿಲೋಮೀಟರ್ ಕಾಮಗಾರಿ ಮಾತ್ರ ಉಳಿಕೆಯಾಗಿದೆ. 200 ಆಳುಗುಂಡಿ ಕೆಲಸ ಬಾಕಿ ಇದೆ. ಈ ಕಾಮಗಾರಿ ಮಾಡುತ್ತಿದ್ದೇವೆ. 2024ರ ಮಾರ್ಚ್ ಒಳಗಡೆ ಮುಗಿಸಲಿದ್ದೇವೆ ಎಂದರು. ಒಳಚರಂಡಿ ಹೆಚ್ಚುವರಿಯಾಗಿ ಹಣ ಬೇಕಾಗಿದೆ. 2017ರಲ್ಲಿ 7 ಕೋಟಿ ಹೆಚ್ಚುವರಿ ಹಣ ಪಡೆಯಲು ಅನುಮೋದನೆ ಪಡೆಯಲಾಗಿದೆ. ಎನ್ಜಿಟಿಯದ್ದು 15 ಕೋಟಿ ಯೋಜನೆ, ಅದನ್ನೂ ಮುಗಿಸಿ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ.

ಶಿವಮೊಗ್ಗದಲ್ಲಿ 35 ವಾರ್ಡ್ 89 ಸಾವಿರ ಮನೆಗಳಿವೆ. 45 ಸಾವಿರ ಮನೆ ಯುಜಿಡಿ ಅಡಿ ಬರಲಿದೆ. 40 ಸಾವಿರ ಮನೆಗಳಿಗೆ ಯುಜಿಡಿ ಮಾಡಲು 600 ಕೋಟಿ ಬೇಕಾಗಲಿದೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕ ಕೂಡಲೇ ಇಡೀ ಶಿವಮೊಗ್ಗ ನಗರಕ್ಕೆ ಯುಜಿಡಿ ಮಾಡಲು ಕೆಲಸ ಮಾಡಲು ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಹಿಂದೂಗಳನ್ನು ಸಿದ್ದರಾಮಯ್ಯ ಎರಡನೇ ದರ್ಜೆ ತರಹ ನೋಡ್ತಿದ್ದಾರೆ: ಆರ್ ಅಶೋಕ್​ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.