ETV Bharat / state

ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ ಬೆಳಗಾವಿ ಭೇಟಿಗೆ ಮತ್ತೆ ಕಡಿವಾಣ ಹಾಕಿದ ಬೆಳಗಾವಿ ಡಿಸಿ

author img

By

Published : Jan 17, 2023, 7:02 AM IST

Updated : Jan 17, 2023, 11:05 AM IST

Shiv Sena MP Dhairyasheel Mane
ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ

ಮಹಾರಾಷ್ಟ್ರದ ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ ಅವರು ಬೆಳಗಾವಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಆದೇಶಿಸಿದ್ದಾರೆ.

ಬೆಳಗಾವಿ: ರಾತ್ರೋರಾತ್ರಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ಶಾಕ್ ನೀಡಿದ್ದಾರೆ. ಶಿವಸೇನೆಯ ಸಂಸದ ಧೈರ್ಯಶೀಲ್ ಮಾನೆ ಅವರಿಗೆ ಕರ್ನಾಟಕದ ಗಡಿ ಪ್ರವೇಶಿಸಿ ಬೆಳಗಾವಿಗೆ ಬರದಂತೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಮಂಗಳವಾರ (ಇಂದು) ನಗರದಲ್ಲಿ ಎಂಇಎಸ್ ಕಾರ್ಯಕರ್ತರು ಹುತಾತ್ಮರ ದಿನ ಆಚರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಗಡಿ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಧೈರ್ಯಶೀಲ್ ಮಾನೆ ಆಗಮಿಸಲಿದ್ದರು.

ಮಾನೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ ಪರಿಸ್ಥಿತಿ ಹದಗೆಡಬಹುದು. ಪ್ರಚೋದನಾತ್ಮಕ ಭಾಷಣ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ತಿಳಿಸಿ ಸಿಆರ್‌ಪಿಸಿ 1997ರ ಕಲಂ 144 (3) ಅನ್ವಯ ವಿಶೇಷ ಅಧಿಕಾರ ಬಳಸಿ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಉದ್ರೇಕಕಾರಿ ಹೇಳಿಕೆಗಳಿಂದ ಭಾಷಾ ಸಮಸ್ಯೆ ಉದ್ಭವವಾಗಬಹುದು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಆದೇಶ ಪ್ರತಿ
ಆದೇಶ ಪ್ರತಿ

ಡಿಸಿಯಿಂದ ಮತ್ತೊಮ್ಮೆ ಖಡಕ್ ನಿರ್ಧಾರ: ಮಹಾಮೇಳಾವ್‌‌ನಲ್ಲೂ ಪಾಲ್ಗೊಳ್ಳುವುದಾಗಿ ಹೇಳಿದ್ದ ಮಾನೆ ಅವರನ್ನು ನಿರ್ಬಂಧಿಸಿ ಡಿ.19ರಂದು ಕೂಡಾ ಜಿಲ್ಲಾಧಿಕಾರಿ ನಿರ್ಬಂಧ ಆದೇಶ ಹೊರಡಿಸಿದ್ದರು. ಇದೀಗ ಮತ್ತೊಮ್ಮೆ ಖಡಕ್ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಧಿಕಾರಿ ಗಮನ ಸೆಳೆದಿದ್ದಾರೆ. ಗಡಿ ವಿವಾದ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟವರ ಸ್ಮರಣಾರ್ಥ ಶಿವಸೇನೆ ಠಾಕ್ರೆ ಬಣ ಬೆಳಗಾವಿಯ ಹುತಾತ್ಮ ‌ಚೌಕ್‌ನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.

ಬೆಳಗಾವಿಗೆ ಬರುವುದಾಗಿ ಪತ್ರ ಬರೆದಿದ್ದ ಮಾನೆ: ಡಿಸೆಂಬರ್​ 19ರಂದು ನಡೆಯಲಿರುವ ಎಂಇಎಸ್​ ಮಹಾಮೇಳಾವ್​ಗೆ ಬರುತ್ತಿದ್ದೇನೆ. ನನಗೆ ಸೂಕ್ತ ಭದ್ರತೆ ನೀಡಿ ಎಂದು ಈ ಹಿಂದೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮಾನೆ ಪತ್ರ ಬರೆದಿದ್ದರು. ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭದ ದಿನದಂದೇ ಎಂಇಎಸ್ ಮಹಾಮೇಳಾವ್‌ಗೆ ತಯಾರಿ ಮಾಡಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಬರುವುದಾಗಿ ಪತ್ರ ಬರೆದಿದ್ದು, ತಮ್ಮ ಪ್ರವಾಸದ ಪಟ್ಟಿಯನ್ನೂ ಲಗತ್ತಿಸಿದ್ದರು.

ಇದನ್ನೂ ಓದಿ: ಬೆಳಗಾವಿಗೆ ಭೇಟಿ ನೀಡುವುದಾಗಿ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಪತ್ರ

ಗಡಿ ವಿವಾದ- ಕರ್ನಾಟಕದ ನಿರ್ಣಯ: ಕಳೆದ ಡಿಸೆಂಬರ್​​ನಲ್ಲಿ ಮಹಾರಾಷ್ಟ್ರ ಗಡಿ ಧೋರಣೆ ಖಂಡಿಸಿ, ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಕರ್ನಾಟಕ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ವಿವಾದ ಸಂಬಂಧ ನಿರ್ಣಯವನ್ನು ಮಂಡಿಸಿದ್ದರು. ಸಿಎಂ ಮಂಡಿಸಿದ್ದ ನಿರ್ಣಯಕ್ಕೆ ಸರ್ವಾನುಮತದಿಂದ ಸದನ ಒಪ್ಪಿಗೆ ಸೂಚಿಸಿತ್ತು. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರು ಮತ್ತು ಸದಸ್ಯರೆಲ್ಲರ ಭಾವನೆ ಒಂದೇ ಆಗಿದ್ದು, ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ಹಾಗೂ ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಟಿಸಿರುವ ವಿವಾದ ಖಂಡಿಸಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಗಡಿ ವಿವಾದವೇನು?: ರಾಷ್ಟ್ರದಲ್ಲಿ ಭಾಷಾವಾರು ಪ್ರಾಂತ್ಯಗಳ ಸ್ಥಾಪನೆ ಸಲುವಾಗಿ 1953ರಲ್ಲಿ ರಾಜ್ಯಗಳ ಮರುವಿಂಗಡಣೆ ಆಯೋಗ ರಚನೆಯಾಗಿತ್ತು. ಈ ಆಯೋಗವು 1955ರಲ್ಲಿ ತನ್ನ ವರದಿ ಮಂಡಿಸಿತ್ತು. 1955ರಲ್ಲಿ ಎಲ್ಲ ರಾಜ್ಯಗಳಿಗೆ ವರದಿ ಕಳುಹಿಸಿಕೊಟ್ಟು ಅಭಿಪ್ರಾಯ ಪಡೆದು, 1956ರಲ್ಲಿ ರಾಜ್ಯ ಮರುವಿಂಗಡಣೆ ಕಾಯ್ದೆ ಜಾರಿಗೆ ಬಂದಿದೆ. 1950ರ ನವೆಂಬರ್ ಅಂದಿನ ಮೈಸೂರು ರಾಜ್ಯದ ಉದಯವಾಯಿತು. ಮಹಾಜನ ಆಯೋಗ 1966ರ ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬಂತು. 1967ರಲ್ಲಿ ವರದಿ ನೀಡಿತು. ಮಹಾರಾಷ್ಟ್ರದ ಬೇಡಿಕೆಯ ಮೇರೆಗೆ ರಚನೆಯಾದಂತಹ ಮಹಾಜನ ಆಯೋಗದ ವರದಿಯನ್ನು ಮಹಾರಾಷ್ಟ್ರವೇ ತಿರಸ್ಕರಿಸಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ ಗಡಿ ವಿವಾದ ಖಂಡಿಸಿ, ರಾಜ್ಯದ ಹಿತ ರಕ್ಷಣೆ ರಕ್ಷಣೆಗಾಗಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

Last Updated :Jan 17, 2023, 11:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.