ETV Bharat / state

ಮರಾಠಿಯಲ್ಲಿ ಮಾತನಾಡಲು ಮುಂದಾದ ಶಾಸಕ ವಿಠಲ್ ಹಲಗೇಕರ್: ಲಕ್ಷ್ಮಣ ಸವದಿ ಆಕ್ಷೇಪ

author img

By ETV Bharat Karnataka Team

Published : Dec 15, 2023, 8:30 PM IST

Etv Bharatkhanapur-mla-vittal-halgekar-is-talked-marathi-in-assembly
ಮರಾಠಿಯಲ್ಲಿ ಮಾತನಾಡಲು ಮುಂದಾದ ಶಾಸಕ ವಿಠಲ್ ಹಲಗೇಕರ್: ಆಕ್ಷೇಪಿಸಿದ ಲಕ್ಷ್ಮಣ ಸವದಿ

ವಿಧಾನಸಭೆಯಲ್ಲಿ ಖಾನಾಪುರ ಶಾಸಕ ವಿಠಲ್ ಹಲಗೇಕರ್ ಅವರು ಮರಾಠಿಯಲ್ಲಿ ಮಾತನಾಡಲು ಮುಂದಾದಾಗ ಶಾಸಕ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮರಾಠಿಯಲ್ಲಿ ಮಾತನಾಡಲು ಖಾನಾಪುರ ಶಾಸಕ ವಿಠಲ್ ಹಲಗೇಕರ್ ಮುಂದಾದಾಗ, ಕಾಂಗ್ರೆಸ್ ಹಿರಿಯ ಸದಸ್ಯ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು. ಸದನದಲ್ಲಿ ಶಾಸಕ ಹಲಗೇಕರ್ ಮಾತಾಡುವಾಗ ತನಗೆ ಕನ್ನಡ ಅಲ್ಪಸ್ವಲ್ಪ ಬರುತ್ತದೆ. ಹಾಗಾಗಿ ಮರಾಠಿಯಲ್ಲಿ ಮಾತಾಡಲು ಅವಕಾಶ ನೀಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದರು.

ಸ್ಪೀಕರ್ ಯು.ಟಿ.ಖಾದರ್, ನಿಮಗೆ ಬರುವ ಭಾಷೆಯಲ್ಲಿ ಮಾತನಾಡುವಂತೆ ಹೇಳುತ್ತಾರೆ. ಆಗ ಹಲಗೇಕರ್, ಅರ್ಧ ಕನ್ನಡ ಅರ್ಧ ಮರಾಠಿಯಲ್ಲಿ ಮಾತನಾಡಲಾರಂಭಿಸುತ್ತಾರೆ. ಆಗ ಶಾಸಕ ಲಕ್ಷ್ಮಣ ಸವದಿ ಅವರು ಆಕ್ಷೇಪ ವ್ಯಕ್ತಪಡಿಸಿ, ಅವರಿಗೆ ಕನ್ನಡ ಮಾತನಾಡಲು ಬರುತ್ತದೆ. ನನ್ನೊಂದಿಗೆ ಕನ್ನಡದಲ್ಲೇ ಮಾತನಾಡುತ್ತಾರೆ ಎಂದರು. ಆಗ ಸ್ಪೀಕರ್ ಮಧ್ಯಪ್ರವೇಶಿಸಿ ಅವರಿಗೆ ಸರಿಯೆನಿಸುವ ಭಾಷೆಯಲ್ಲಿ ಮಾತಾಡಲಿ ಬಿಡಿ, ನೀವು ಹಿರಿಯ ಶಾಸಕರಾಗಿ ಹೀಗೆ ಅಡ್ಡಿ ಪಡಿಸಬಾರದು ಎಂದರು.

ಕನ್ನಡ ಭಾಷೆ ಬೆಳೆಯಬೇಕಾದರೆ, ಬೇರೆ ಭಾಷೆಯನ್ನು ದ್ವೇಷಿಸಬೇಡಿ, ಭಾಷೆಯಲ್ಲಿ ರಾಜಕಾರಣ ಮಾಡಬೇಡಿ ಎಂದು ಸಲಹೆ ಮಾಡಿದರು. ಆಗ ವಿಠಲ್ ಅವರು ಸವದಿ ಅವರು ನನ್ನ ಜೊತೆ ಮರಾಠಿಯಲ್ಲೇ ಮಾತನಾಡುತ್ತಾರೆ ಎಂದರು. ಕೊನೆಗೆ ಕನ್ನಡದಲ್ಲೇ ಮಾತು ಮುಂದುವರಿಸಿದ ಶಾಸಕ ವಿಠಲ ಹಲಗೇಕರ್ ಸರಿಯಾಗಿ ಅರ್ಥವಾಗದ ರೀತಿ ವಿಷಯಮಂಡನೆ ಮಾಡಿದರು. ಖಾನಾಪುರ ಕ್ಷೇತ್ರದಲ್ಲಿ ಕನ್ನಡ ಶಿಕ್ಷಕರನ್ನು ಹಾಕಬೇಕು. ಅಂಗನವಾಡಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ನಂತರ ಸ್ಪೀಕರ್ ಯು.ಟಿ.ಖಾದರ್ ಅವರು, ನೀವು ಮುಂದಿನ ಅಧಿವೇಶನದ ವೇಳೆಗೆ ಕನ್ನಡ ಕಲಿತು ಬಂದು ವಿಷಯವನ್ನು ಚೆನ್ನಾಗಿ ಮಾತನಾಡಿ ಎಂದು ಶಾಸಕರಿಗೆ ಸಲಹೆ ನೀಡಿದರು.

ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ 57 ಗಂಟೆ ಕಲಾಪ: ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.