ETV Bharat / state

ವಿಧಾನ ಪರಿಷತ್‌ನಲ್ಲಿ 57 ಗಂಟೆ ಕಲಾಪ: ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ

author img

By ETV Bharat Karnataka Team

Published : Dec 15, 2023, 7:44 PM IST

ವಿಧಾನ ಪರಿಷತ್​ನಲ್ಲಿ ​57 ಗಂಟೆ 45 ನಿಮಿಷಗಳ ಕಾಲ ಆರೋಗ್ಯಕರ ಕಲಾಪ ನಡೆಯಿತು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

57-hours-of-proceedings-held-in-vidhana-parishad
ವಿಧಾನ ಪರಿಷತ್‌ನಲ್ಲಿ 57 ಗಂಟೆ ಕಲಾಪ: ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: "ಡಿ.4ರಿಂದ 15ರವರೆಗೆ 10 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್​ನಲ್ಲಿ ​57 ಗಂಟೆ 45 ನಿಮಿಷಗಳ ಕಾಲ ಆರೋಗ್ಯಕರ ಕಲಾಪ ನಡೆಯಿತು. ಆ ಪೈಕಿ ಗದ್ದಲ ಹಾಗೂ ಧರಣಿಗಾಗಿ ಒಟ್ಟು 4 ಗಂಟೆ 30 ನಿಮಿಷಗಳನ್ನು ವ್ಯಯಿಸಲಾಗಿದೆ" ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ವಿಧಾನ ಪರಿಷತ್ ಕಲಾಪದ ಕಡೆಯ ದಿನ ಉತ್ತರ ಕರ್ನಾಟಕದ ಚರ್ಚೆಗೆ ಸರ್ಕಾರದ ಉತ್ತರದ ನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಕಲಾಪದ ಕುರಿತು ಸಭಾಪತಿ ಹೊರಟ್ಟಿ ಸದನಕ್ಕೆ ಸಮಗ್ರ ಮಾಹಿತಿ ನೀಡಿದರು.

"ಕಳೆದ ಅಧಿವೇಶನದಿಂದೀಚೆಗೆ ನಿಧನರಾದ ಒಟ್ಟು 11 ಗಣ್ಯರುಗಳಿಗೆ, ಸೇನಾ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭಂ ಗುಪ್ತಾ, ಹವಲ್ದಾರ ಅಬ್ದುಲ ಮಜಿಕ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಸಚಿನ್ ಲಾರ್ ಹಾಗೂ ಇತರ ವೀರ ಯೋಧರುಗಳಿಗೆ ಮತ್ತು ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಅರ್ಜುನನಿಗೆ ಸದನವು ತನ್ನ ಸಂತಾಪವನ್ನು ವ್ಯಕ್ತಪಡಿಸಿತು. ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರು ಮಂಡಿಸಿದರು. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ 01 ಮತ್ತು 02 ಪಟ್ಟಿಗಳನ್ನು ಮಂಡಿಸಲಾಯಿತು" ಎಂದರು.

"ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯಂತರ ವರದಿ ಹಾಗೂ ಕರ್ನಾಟಕ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯ 2023-24ನೇ ಸಾಲಿನ 136ನೇ ವರದಿಗಳನ್ನು ಒಪ್ಪಿಸಲಾಯಿತು. 2023-2024ನೇ ಸಾಲಿನ ಆಯವ್ಯಯ ಅಂದಾಜುಗಳ ಮೊದಲನೆ ಕಂತು ಹಾಗೂ 2023-24ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಯಿತು" ಎಂದು ತಿಳಿಸಿದರು.

"ನಿಯಮ 59 ರಡಿಯಲ್ಲಿ ಒಟ್ಟು 05 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 01 ಸೂಚನೆಯನ್ನು ನಿಯಮ 330 ರಡಿ ಚರ್ಚಿಸಿ, ಉತ್ತರಿಸಲಾಯಿತು. ಉಳಿದ 03 ಸೂಚನೆಗಳನ್ನು ನಿಯಮ 68 ಕ್ಕೆ ಪರಿವರ್ತಿಸಲಾಗಿದ್ದು, 01 ಸೂಚನೆಯನ್ನು ಚರ್ಚಿಸಿ ಉತ್ತರಿಸಲಾಗಿರುತ್ತದೆ ಹಾಗೂ 01 ಸೂಚನೆಯನ್ನು ತಿರಸ್ಕರಿಸಲಾಗಿರುತ್ತದೆ. ಪ್ರಸ್ತುತ ಅಧಿವೇಶನದಲ್ಲಿ ಒಟ್ಟು 1219 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ 150 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಿದ್ದು, ಅವುಗಳ ಪೈಕಿ 103 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು ಹಾಗೂ 41 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು. ಲಿಖಿತ ಮೂಲಕ ಉತ್ತರಿಸುವ ಒಟ್ಟು 1057 ಪ್ರಶ್ನೆಗಳ ಪೈಕಿ 970 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು" ಎಂದರು.

"ಎರಡು ಅರ್ಜಿಗಳು ಹಾಗೂ ಒಂದು ಹಕ್ಕುಚ್ಯುತಿ ಸೂಚನೆಯನ್ನು ಸದನದಲ್ಲಿ ಮಂಡಿಸಲಾಯಿತು. ಶೂನ್ಯ ವೇಳೆ ಪ್ರಸ್ತಾವನೆಯ ಒಟ್ಟು 90ಕ್ಕೂ ಹೆಚ್ಚು ಸೂಚನೆಗಳ ಪೈಕಿ 52 ಸೂಚನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು. ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಒಟ್ಟು 17 ವಿಧೇಯಕಗಳಿಗೆ ವಿಧಾನ ಪರಿಷತ್ತು ತನ್ನ ಸಹಮತಿಯನ್ನು ನೀಡಿರುತ್ತದೆ.ಒಂದು ಅಧಿಕೃತ ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಗಿರುತ್ತದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿ ಉತ್ತರಿಸಲಾಯಿತು ಎನ್ನುವ ವಿವರ ನೀಡಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ: ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಪರಿಷತ್​ನಲ್ಲಿ ಚರ್ಚೆ: ಸಿಎಂ ಉತ್ತರ ಖಂಡಿಸಿ ಬಿಜೆಪಿ ಧರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.