ETV Bharat / state

ಕನಕಪುರದಲ್ಲಿ ತಯಾರಾದ ಕುಕ್ಕರ್​​ಗಳು ಡುಬ್ಲಿಕೇಟು, ಬ್ಲಾಸ್ಟ್ ಆಗುತ್ತವೆ ಎಚ್ಚರಿಕೆಯಿಂದಿರಿ: ರಮೇಶ್ ಜಾರಕಿಹೊಳಿ

author img

By

Published : Feb 28, 2023, 5:53 PM IST

ಮಾಜಿ ಸಚಿವ ರಮೇಶ್​ ಜಾರಕಿಹೊಳಿ
ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಯಾರೋ ಕುಕ್ಕರ್ ಹಂಚುತ್ತಾರೆ ಎಂದು ಆಸೆಪಟ್ಟು ಜೀವಕ್ಕೆ ಹಾನಿ ಮಾಡಿಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್​ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ಹಂಚಿರುವ ಕುಕ್ಕರ್​ಗಳು ಕನಕಪುರ ಕಾರ್ಖಾನೆಯಲ್ಲಿ ನಿರ್ಮಾಣವಾಗಿವೆ. ಅವೆಲ್ಲವೂ ಕಳಪೆ. ಕನಕಪುರದಲ್ಲಿ ನಕಲಿ ಪ್ರಾಡಕ್ಟ್ ತಯಾರಾಗುತ್ತವೆ. ನೀವು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾ ಲಕ್ಷ್ಮೀ ಹೆಬ್ಬಾಳ್ಕರ್​​​ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೀಕಾಸಮರ ನಡೆಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಶ್ರೀ ಮಳೆಕರಣಿ ದೇವಿ ಉತ್ಸವ ಕಾರ್ಯಕ್ರಮದಲ್ಲಿ ನಡೆದ ಸಭೆ ಉದ್ದೇಶಿಸಿ ಮಾತನಾಡಿ, ಮೊದಲನೇ ಬಾರಿಗೆ ಕುಕ್ಕರ್ ಕೊಟ್ಟರು. ಎರಡನೇ ಬಾರಿಗೆ ಮಿಕ್ಸರ್ ಕೊಟ್ಟರು. ಆ ಕುಕ್ಕರ್​ಗಳು 400 ರಿಂದ 300 ರೂಪಾಯಿ ಬೆಲೆ ಬಾಳುತ್ತವೆ. ಬೆಂಗಳೂರಿನ ಕಾಂಗ್ರೆಸ್‌ನ ಓರ್ವ ಅಭ್ಯರ್ಥಿ ಇದೇ ರೀತಿ ಕುಕ್ಕರ್​​ ಹಂಚಿದ್ದ. ಅದರಲ್ಲಿ 14 ಕುಕ್ಕರ್​ಗಳು ಬ್ಲಾಸ್ಟ್ ಆಗಿ ಹಾನಿ ಸಂಭವಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಬಂದಿದೆ ಎಂದು ಹೇಳಿದರು.

ಬೆಳಗಾವಿ ಗ್ರಾಮೀಣ ಶಾಸಕಿ ಕುಕ್ಕರ್,​ ಮಿಕ್ಸರ್ ನೀಡುತ್ತಿದ್ದಾರೆ. ಮತದಾರರು ಅದನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ ಪ್ರಧಾನಿಯವರ ಕಾರ್ಯಕ್ರಮ ನಡೆಯುತ್ತಿದ್ದರೆ ಅತ್ತ ಮಿಕ್ಸರ್ ಹಂಚುತ್ತಿದ್ದರು. ಅವರು ಏನೇ ಮಾಡಿದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ. ಜನರು ಅವರ ನಾಟಕಕ್ಕೆ ಮರುಳಾಗುವುದಿಲ್ಲ. ಕಳೆದ 2008ರಲ್ಲಿ ಗಣಿಧಣಿಗಳು, ರಿಯಲ್ ಎಸ್ಟೇಟ್‌ನವರು ಬಂದು ತಿರುಗಿ ಮನೆಗೆ ಹೋಗಿರುವುದು ಇತಿಹಾಸ. ಹಣ ಐತಿ ಎಂದು ತುಂಬಾ ದಿನ ನಡೆಯುವುದಿಲ್ಲ, ಜನರ ಸೇವೆ ಮಾಡಿದರೆ ಅದು ಶಾಶ್ವತ ಎಂದರು.

2000ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾದಾಗ ಗೋಕಾಕ್​​ನಲ್ಲಿ 15% ಮಾತ್ರ ನೀರಾವರಿ ಇತ್ತು. ಆದರೆ ಇವತ್ತು 80 ಪ್ರತಿಶತ ನೀರಾವರಿ ಹೊಂದಿದೆ. ಅದೇ ರೀತಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಮಾಡಲು ಪಣ ತೊಟ್ಟಿದ್ದೇನೆ. ನೀವು ಸಹಕಾರ ನೀಡಬೇಕೆಂದು ಜನರಿಗೆ ಮನವಿ ಮಾಡಿದರು. ಕಿಲಾರಿ ಗ್ರಾಮದಿಂದ ಬೆಳಗಾವಿ ಗ್ರಾಮೀಣ ಮತ್ತು ಪಶ್ಚಿಮ ಭಾಗಕ್ಕೆ ನೀರಾವರಿ ಯೋಜನೆಯನ್ನು ರೂಪಿಸಲಾಗಿತ್ತು. ನಾನು ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೇಲೆ ಆ ಕೆಲಸ ಅಲ್ಲೇ ಉಳಿದಿದೆ. 2023ಕ್ಕೆ ಮತ್ತೆ ಅಧಿಕಾರಿಕ್ಕೆ ಬಂದ ಮೇಲೆ ಆ ಕೆಲಸವನ್ನು ಪೂರ್ಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಏಕೀಕರಣ ಸಮಿತಿಯವರಿಗೆ ನಾನು ಮನವಿ ಸಲ್ಲಿಸುತ್ತೇನೆ. ಇಬ್ಬರು ಮರಾಠಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ ಕೆಡಿಸುವುದಕ್ಕಿಂತ ಬಿಜೆಪಿ ಪಕ್ಷಕ್ಕೆ ಸಪೋರ್ಟ್ ಮಾಡಿ. ಮಹಾಜನ್ ವರದಿ ನ್ಯಾಯಾಲಯದಲ್ಲಿದೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ನೀವು ಮಾತ್ರ ನ್ಯಾಯಕ್ಕೆ ಹೋಗಿದ್ದೀರಿ. ನ್ಯಾಯಾಲಯ ಆದೇಶ ಬಂದ ನಂತರ ಎಲ್ಲರೂ ಒಪ್ಪಿಕೊಳ್ಳೋಣ. ಅದು ಏನೇ ಇದ್ದರೂ ಬೆಳಗಾವಿಯ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಸುವಂತೆ ಕೇಳಿಕೊಂಡರು.

ಬಾಡೂಟ ವ್ಯವಸ್ಥೆ: ಉಚಗಾಂವ ಶ್ರೀ ಮಳೆಕರಣಿ ದೇವಿಯ ಉತ್ಸವದ ಜಾತ್ರೆಯಲ್ಲಿ ಸಾವಿರಾರು ಜನಕ್ಕೆ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಹೆದ್ದಾರಿ ಉದ್ಘಾಟನೆಗೆ ಬರುವ ಮೋದಿಗೆ ಕಪ್ಪು ಬಾವುಟ ತೋರಿಸುತ್ತೇವೆ: ಎಂ. ಲಕ್ಷ್ಮಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.